ಪಾರ್ವತಿದೇವಿ ಅಖಂಡ ಮಹಾಯಾಗ ಸಂಪನ್ನ

SRP_04-05(a)jpj
Published on

ಶ್ರೀರಂಗಪಟ್ಟಣ: ವಿಶ್ವಶಾಂತಿಗಾಗಿ ಲೋಕಕಲ್ಯಾಣಾರ್ಥ ಕೈಗೊಂಡ ಶ್ರೀ ಫಲಪ್ರದಾಯಿನಿ ಪಾರ್ವತಿದೇವಿಯ 3ನೇ ಅಖಂಡ ಮಹಾಯಾಗ 48 ಗಂಟೆಗಳ ಕಾಲ ನಿರಂತರವಾಗಿ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಮರ್ಪಣೆಗೊಂಡಿತು.

ಪಟ್ಟಣ ಹೊರವಲಯದ ಚಂದ್ರವನ ಆಶ್ರಮದಲ್ಲಿ ಮಾ.2ರಿಂದ ಬ್ರಾಹ್ಮಿ ಮೂಹರ್ತದಲ್ಲಿ ಪ್ರಾರಂಭವಾಗಿ ಮಾ.4ರವರೆಗೆ 30 ಮಂದಿ ವೈದ್ಧಿಕರ ತಂಡದಲ್ಲಿ ಪೂಜಾ ಕೈಂಕರ್ಯಗಳೊಂದಿಗೆ ಫಲಪ್ರದಾಯಿನಿ ಶ್ರೀ ಪಾರ್ವತಿ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಆಶ್ರಮದ ಪೀಠಾಧಿಪತಿ ಡಾ.ತ್ರಿನೇತ್ರ ಮಹಾಂತ ಶ್ರೀಗಳು 208 ಮಂಗಳವಾರ ಉಪವಾಸ ಮತ್ತು ಮೌನಾನುಷ್ಠಾನವಿದ್ದು ಶ್ರೀ ಪಾರ್ವತಿದೇವಿಯಲ್ಲಿ ಧರ್ಮಕ್ಕಾಗಿ ಮತ್ತು ರಾಷ್ಟ್ರಕ್ಕಾಗಿ ವ್ರತ ನೆರವೇರಿಸಿದ್ದರು.

ಭಾನುವಾರ ಬ್ರಾಹ್ಮಿ ಮೂಹೂರ್ತದಿ ಜೀವನದಿ ಕಾವೇರಿಯಿಂದ ಕಳಸ ಸ್ಥಾಪನೆ, ಗಂಗಾಪೂಜೆಯೊಡನೆ ಫಲಪ್ರದಾಯಿನಿ ಪಾರ್ವತಿದೇವಿಯಲ್ಲಿ ಸಂಕಲ್ಪ ಮಾಡಿ ಯಾಗಶಾಲೆ ಪ್ರವೇಶಿಸಲಾಯಿತು. ಗಣಪತಿ ಪ್ರತಿಷ್ಠಾಪನೆ, ಪುಣ್ಯಾಹ ಬೆಳಗ್ಗೆ 11ಕ್ಕೆ ಯಾಗ ಕುಂಡಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್, ಆಶ್ರಮದ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಸಮಾಜ ಸೇವಕ ಷಣ್ಮುಖ ಹಡಗದ್ ಭಾಗಿಯಾಗಿದ್ದರು.

ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಂಗಳವಾರ ಯಾಗಕ್ಕೆ ಚಾಲನೆ ನೀಡಿ ಪೂರ್ಣಾಹುತಿ ಸಮರ್ಪಿಸಿದರು. ಭಕ್ತರಿಗೆ ಮಠದ ವತಿಯಿಂದ ಅನ್ನದಾನ ನೆರವೇರಿಸಲಾಯಿತು.

ಬಳಿಕ ಸಂಸದ ಯದುವೀರ್ ಮಾತನಾಡಿ, ದೇಶದ ಒಳಿತಿಗಾಗಿ ಇಂತಹ ಯಜ್ಞ ಯಾಗಾದಿಗಳನ್ನು ಶ್ರೀಗಳು ನೆರವೇರಿಸಿರುವುದು ಭಾರತದ ಏಕತೆಗೆ ಶ್ಲಾಘನೀಯ ಎಂದರು.

ಚಿಕ್ಕಮಗಳೂರಿನ ಗೌರಿಗದ್ದೆಯ ಶ್ರೀ ವಿನಯ್ ಗುರೂಜಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರಾಯನಾಳದ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ, ಕೊಡಗಿನ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಚಿಕ್ಕಕಲ್ಲುಬಾಳು ಮಠದ ಪಟ್ಟದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಗಾವಡಗೆರೆಯ ಶ್ರೀ ನಟರಾಜ ಸ್ವಾಮೀಜಿ, ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಸಿದ್ಧರಹಳ್ಳಿ ಪಾರಮಾರ್ಥ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ತೆಂಡೆಕೆರೆಯ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರದ ಕುಂಚಿಟಿಗರ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ, ಚಾಮುಂಡಿಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್, ಆಶ್ರಮದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net