ಪಾರದರ್ಶಕತೆ ಕಾಯ್ದುಕೊಳ್ಳಲು ಆದ್ಯತೆ

Published on

ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಹೇಳಿಕೆ | ಅಧಿಕಾರಿಗಳಿಗೆ ಮಾರ್ಗದರ್ಶನ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ

ಮಾಹಿತಿ ಹಕ್ಕು ಕಾಯ್ದೆ ಬಗೆಗಿನ ಅಸಡ್ಡೆ, ಉಲ್ಲಂನೆ ಹಾಗೂ ದುರ್ಬಳಕೆಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಸುಧಾರಣಾ ಕ್ರಮಗಳ ಮೂಲಕ ಪಾರದರ್ಶಕತೆಯ ನಿರ್ವಹಣೆಗೆ ಒತ್ತು ನೀಡಲಾಗಿದೆ ಎಂದು ರಾಜ್ಯ ಮಾಹಿತಿ

ಆಯುಕ್ತ ರುದ್ರಣ್ಣ ಹರ್ತಿಕೋಟೆ ತಿಳಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಹಿತಿ ಹಕ್ಕು ಕಾಯ್ದೆ ಕಾರ್ಯಾಗಾರದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯಡಿಯ ದ್ವೀತಿಯ ಮೇಲ್ಮನವಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಿ, ಸಲ್ಲಿಕೆಯ ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಜಿಲ್ಲಾ ಮಟ್ಟದಲ್ಲಿಯೇ ಅದಾಲತ್​ ನಡೆಸುವ ಚಿಂತನೆಯನ್ನು ಆಯೋಗ ಹೊಂದಿದೆ. ಕಳೆದ 7 ತಿಂಗಳ ಹಿಂದೆ ರಾಜ್ಯ ಮಾಹಿತಿ ಆಯೋಗದಲ್ಲಿ 54 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದವು. ಇದಕ್ಕೆ ಹಲವು ಯುಕ್ತ ಕ್ರಮಗಳನ್ನು ಆಯೋಗ ತೆಗೆದುಕೊಂಡು 12,896 ಅರ್ಜಿಗಳನ್ನು ಇತ್ಯರ್ಥಪಡಿಸಿದೆ ಎಂದು ತಿಳಿಸಿದರು.

ಪ್ರಸ್ತುತ ರಾಜ್ಯದಲ್ಲಿ ಪ್ರತಿ ತಿಂಗಳು ಸರಾಸರಿ 1500 ಮಾಹಿತಿ ಹಕ್ಕು ಅರ್ಜಿಗಳು ಆಯೋಗದಲ್ಲಿ ಸ್ವೀಕಾರಗೊಳ್ಳುತ್ತಿದ್ದು, ತ್ವರಿತ ವಿಲೇವಾರಿಯ ಮೂಲಕ ಶೂನ್ಯಕ್ಕಿಳಿಸಿ, ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ತರಲು ಆಯೋಗ ಉದ್ದೇಶಿಸಿದೆ ಎಂದರು.

ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರ, ಜಿಪಂ ಸಿಇಒ ಡಾ.ವೈ.ನವೀನ್​ ಭಟ್​, ಅಪರ ಜಿಲ್ಲಾಧಿಕಾರಿ ಡಾ.ಎನ್​. ಭಾಸ್ಕರ್​, ಉಪ ವಿಭಾಗಾಧಿಕಾರಿ ಡಿ.ಎಚ್​.ಅಶ್ವಿನ್​, ಜಿಪಂ ಉಪ ಕಾರ್ಯದರ್ಶಿ ಅತಿಕ್​ ಪಾಷಾ ಇತರರು ಇದ್ದರು.

ಕಾರ್ಯಾಗಾರದಲ್ಲಿ ಸಲಹೆ

ಕಾರ್ಯಾಗಾರದಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು, ಪ್ರಥಮ ಮಾಹಿತಿ ಹಕ್ಕು ಅಧಿಕಾರಿ ಮತ್ತು ಮೇಲ್ಮನವಿ ಮಾಹಿತಿ ಹಕ್ಕು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾರ್ಗದರ್ಶನ ನೀಡಲಾಯಿತು. ಸ್ವೀಕಾರವಾಗುವ ಅರ್ಜಿಗಳ ವಿಲೆವಾರಿ, ಇತ್ಯರ್ಥ ಪ್ರಕರಣಗಳ ಗೊಂದಲ, ನಿದರ್ಶನಗಳ ಸಮೇತ ಮಾಹಿತಿ ನೀಡಲಾಯಿತು. ಅದರಲ್ಲೂ ಮಾಹಿತಿ ಹಕ್ಕು ಅರ್ಜಿಗಳ ಇತ್ಯರ್ಥದಲ್ಲಿನ ಅಸಡ್ಡೆಗೆ ಅಧಿಕಾರಿಗಳ ಸೇವಾ ಅವಧಿಯಲ್ಲಾಗುವ ತೊಂದರೆಗಳೇನು?, ಪಿಂಚಣಿಯ ಮೇಲೆ ಆಗುವ ಪರಿಣಾಮಗಳೇನು?, ದಂಡ ಹೇಗೆ ಬೀಳುತ್ತದೆ?. ಆಯೋಗದ ವೆಬ್​ಸೈಟ್​ನಲ್ಲಿರುವ ಮಾಹಿತಿಯನ್ನು ಡೌನ್​ ಲೋಡ್​ ಮಾಡಿ, ಅಧ್ಯಯನ ಹಾಗೂ ಜನಸ್ನೇಹಿ ವಿಚಾರಗಳ ಬಗ್ಗೆ ತಿಳಿಸಲಾಯಿತು.

ಸ್ಥಳದಲ್ಲಿಯೇ ಮಾಹಿತಿ

ಮಾಹಿತಿ ಹಕ್ಕು ಆಯೋಗದ ಆಯುಕ್ತರು ಅರ್ಜಿದಾರರ ಕುಂದುಕೊರತೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಬಗೆಹರಿಸಿದರು. ನ್ಯಾಯಬೆಲೆ ಅಂಗಡಿಯ ಅಸಮರ್ಪಕ ಕಾರ್ಯವೈಖರಿ ಸೇರಿದಂತೆ ಅಕ್ರಮಗಳ ಬಗ್ಗೆ ಗಮನ ಸೆಳೆದ ಹಿನ್ನೆಲೆಯಲ್ಲಿ ಬಿಪಿಎಲ್​ ಕಾರ್ಡ್​ ಅನ್ನು ರದ್ದುಪಡಿಸಲಾಗಿದೆ ಹಾಗೂ ಪತ್ನಿಗೆ ಗೃಹಲ್ಮ ಹಣವು ಬರುತ್ತಿಲ್ಲ ಎಂದು ನಲ್ಲಕದಿರೇನಹಳ್ಳಿಯ ನರಸಿಂಹಮೂರ್ತಿ ಅಳಲು ತೋಡಿಕೊಂಡರು. ಇದಕ್ಕೆ ಸ್ಥಳದಲ್ಲಿಯೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಅರ್ಜಿದಾರರಿಗೆ ಪಡಿತರ ಚೀಟಿ ಹಾಗೂ ಗೃಹಲ್ಮ ಹಣದ ಸೌಲಭ್ಯ ದೊರಕಿಸಿಕೊಡಲು ಸೂಚಿಸಲಾಯಿತು. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಇತ್ಯರ್ಥದ ಬಗ್ಗೆ ಅಸಡ್ಡೆ ತೋರುತ್ತಿರುವುದಕ್ಕೆ ಸಂಬಂಧಿಸಿದಂತೆ ಗೌರಿಬಿದನೂರಿನ ಪುಟ್ಟರಂಗ ಅವರಿಗೆ ನಿಯಮಾನುಸಾರ ಮಾಹಿತಿ ಒದಗಿಸುವ ಭರವಸೆ ನೀಡಲಾಯಿತು. ರೈತರು ಸೇರಿದಂತೆ ಹಲವರು ಅರ್ಜಿಗಳು ಇತ್ಯರ್ಥಗೊಳ್ಳದಿರುವುದರ ಬಗ್ಗೆ ಗಮನ ಸೆಳೆದರು.

ದುರುಪಯೋಗ ತಡೆಗೆ ಅರಿವು

ಮಾಹಿತಿ ಹಕ್ಕು ಕಾಯ್ದೆಯ ಸಮರ್ಪಕ ತಿಳಿವಳಿಕೆಯಿಂದ ಮಾತ್ರ ದುರುಪಯೋಗ, ಅಕ್ರಮ ತಡೆಯಲು ಸಾಧ್ಯ ಎಂದು ರಾಜ್ಯ ಮಾಹಿತಿ ಆಯೋಗ ಆಯುಕ್ತ ಎಸ್​.ರಾಜಶೇಖರ್​ ಅಭಿಪ್ರಾಯ ವ್ಯಕ್ತಪಡಿಸಿದರು.ಕಾಯ್ದೆ ಅಧ್ಯಯನದ ಮೂಲಕ ನಿಯಮಾನುಸಾರ ನಿರ್ಭಯವಾಗಿ ಸಕಾಲಕ್ಕೆ ಮಾಹಿತಿ ಪಡೆಯುವ ಪ್ರೆಯು ಜನರಲ್ಲಿ, ಬ್ಲಾಕ್​ ಮೇಲ್​ ಅರ್ಜಿದಾರರಿಗೆ ಮಣೆ ಹಾಕದಿರಲು ಹಾಗೂ ಬೆದರದಿರಲು ಅಧಿಕಾರಿಗಳಲ್ಲಿ ಸಮರ್ಪಕ ತಿಳಿವಳಿಕೆ ಹೊಂದಿರಬೇಕು. ಪ್ರಾಮಾಣಿಕ ಅರ್ಜಿದಾರ ಹಾಗೂ ಪ್ರಾಮಾಣಿಕ ಅಧಿಕಾರಿಗಳಿಗೆ ಆಯೋಗದ ನೆರವು ಸಿಗಲಿದೆ. ದಾಖಲೆ ಸಮೇತ ದೂರು ಸಲ್ಲಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಯಾವುದೇ ಲೋಪಗಳು ಕಂಡು ಬಂದರೂ ಸಹ ಪ್ರಶ್ನಿಸುವ ಮನೋಭಾವವನ್ನು ಪ್ರತಿಯೊಬ್ಬರು ಹೊಂದಿರಬೇಕು ಎಂದು ಸಲಹೆ ನೀಡಿದರು.ಈಗಾಗಲೇ ಬ್ಲಾಕ್​ ಮೇಲ್​ ಮಾಡುವ ಅರ್ಜಿದಾರರು, ತಪ್ಪು ಮಾಹಿತಿ ನೀಡುವ ಅಸಡ್ಡೆಯ ಅಧಿಕಾರಿಗಳ ಬಗ್ಗೆ ಮಾಹಿತಿ ಇದ್ದು, ಎಲ್ಲರ ಮೇಲೂ ನಿಗಾ ವಹಿಸಲಾಗುತ್ತಿದೆ ಎಂದರು.

ಜಿಲ್ಲೆಯ ಪ್ರಗತಿ ಲೆಕ್ಕ

ಜಿಲ್ಲೆಯಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ 10,777 ಅರ್ಜಿಗಳು (ಕಳೆದ ಏಪ್ರಿಲ್​ ನಿಂದ ಇಲ್ಲಿಯವರೆಗೆ) ಸಲ್ಲಿಕೆಯಾಗಿದ್ದು, ಈ ಪೈಕಿ 9,837 ಅರ್ಜಿಗಳು ವಿಲೇವಾರಿಯಾಗಿ 772 ಅರ್ಜಿಗಳು ಮಾತ್ರ ಬಾಕಿ ಇವೆ. ಇವುಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಪಡಿಸಲು ಆಯೋಗವು ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net