ಪಾರಂಪರಿಕ ದಸರಾಗೆ ಸಿದ್ಧತೆ ಕೈಗೊಳ್ಳಿ

srp
Published on

ಶ್ರೀರಂಗಪಟ್ಟಣ: ಪಾರಂಪರಿಕ ಶ್ರೀರಂಗಪಟ್ಟಣ ದಸರಾ ಸಮೀಪಿಸುತ್ತಿದ್ದು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.


ಪಟ್ಟಣ ಸಮೀಪದ ಕಿರಂಗೂರು ವೃತ್ತದ ಐತಿಹಾಸಿಕ ದಸರಾ ಬನ್ನಿಮಂಟಪಕ್ಕೆ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ದಸರಾ ಉತ್ಸವ ಪೂರ್ವ ಸಿದ್ಧತೆ ಪರಿಶೀಲಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಉದ್ಯಾನ ನಿರ್ಮಾಣ, ಫೆನ್ಸಿಂಗ್ ಅಳವಡಿಕೆ, ಕಲ್ಲು ಬೆಂಚು ಅಳವಡಿಕೆ ಸೇರಿದಂತೆ ಇತರ ಅವಶ್ಯಕ ಕಾಮಗಾರಿಗಳನ್ನು ಶೀಘ್ರವೇ ಕೈಗೊಳ್ಳುವಂತೆ ತಾಪಂ ಇಒ ವೀಣಾ ಹಾಗೂ ಕಿರಂಗೂರು ಗ್ರಾಪಂ ಪಿಡಿಒ ಪ್ರಶಾಂತ್ ಬಾಬು ಅವರಿಗೆ ಸೂಚಿಸಿದರು.


ತಾಲೂಕಿನ ಕಾಳೇನಹಳ್ಳಿ, ಕೋಡಿಶೆಟ್ಟಿಪುರ ಗ್ರಾಮಗಳಿಗೆ ಭೇಟಿ ನೀಡಿ ಜಲ ಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಿರುವ ಕಾಮಗಾರಿ ಪರಿಶೀಲಿಸಿದ ಅವರು, ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗೆ ತಿಳಿಸಿದರು.


ಇದಕ್ಕೂ ಮುನ್ನ ತಾಲೂಕಿನ ಕೆ.ಎಫ್.ಸಿ.ಎಸ್‌ಸಿ. ಗೋದಾಮುಗಳಿಗೆ ಭೇಟಿ ನೀಡಿದ ಜಿಪಂ ಸಿಇಒ, ಪಿಎಂ ಪೋಷಣ್ ಅಡಿಯಲ್ಲಿ ಶಾಲೆಗಳಲ್ಲಿ ಉಪಯೋಗಿಸುವ ಮಧ್ಯಾಹ್ನ ಉಪಾಹಾರ ಯೋಜನೆಗೆ ಸರಬರಾಜು ಮಾಡುವ ಆಹಾರ ಧಾನ್ಯಗಳ ಗುಣಮಟ್ಟ ಪರಿಶೀಲಿಸಿದರು.


ಶಾಲೆಗಳಿಗೆ ಸರಬರಾಜು ಮಾಡುವ ಅಕ್ಕಿ, ಗೋಧಿ, ಸೂರ್ಯಕಾಂತಿ ಎಣ್ಣೆ ದಾಸ್ತಾನು ಪರಿಶೀಲಿಸಿದ ಅವರು, ಆಹಾರ ಧಾನ್ಯಗಳನ್ನು ಶೇಖರಿಸುವ ಸ್ಥಳ ಸ್ವಚ್ಛತೆಯಿಂದಿರಬೇಕು. ಆಹಾರ ಧಾನ್ಯಗಳ ಗುಣಮಟ್ಟ ಚೆನ್ನಾಗಿಲ್ಲದಿದ್ದಲ್ಲಿ ಅವುಗಳನ್ನು ಸ್ಥಳದಲ್ಲೇ ತಿರಸ್ಕರಿಸುವಂತೆ ಜಿಲ್ಲಾ ವ್ಯವಸ್ಥಾಪಕ ಹಾಗೂ ಶ್ರೀರಂಗಪಟ್ಟಣ ತಾಲೂಕು ಕೆಎಫ್‌ಸಿಎಸ್‌ಸಿ ಅಧಿಕಾರಿಗಳಿಗೆ ಸೂಚಿಸಿದರು.


ಹಾಲಿ ಸರಬರಾಜಾಗಿರುವ ಆಹಾರ ಧಾನ್ಯಗಳ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು , ಮುಂದೆಯೂ ಇದೇ ರೀತಿಯ ಗುಣಮಟ್ಟದ ಆಹಾರ ಧಾನ್ಯಗಳನ್ನು ಸ್ವೀಕರಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net