ಪಾರಂಪರಿಕ ತಾಣಗಳ ಅಭಿವೃದ್ದಿಗೆ ಶ್ರಮಿಸಿ

bkt-29-2
Published on

ಬಾಗಲಕೋಟೆ: ಜಿಲ್ಲೆಯಲ್ಲಿರುವ ಪಾರಂಪರಿಕ ತಾಣಗಳನ್ನು ರಕ್ಷಣೆ ಮಾಡುವ ಮೂಲಕ ಅಭಿವೃದ್ದಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ಕೆಲಸವಾಗಬೇಕು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಚಾಲುಕ್ಯ ಅಭಿವೃದ್ದಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು ಬಾದಾಮಿ, ಪಟ್ಟದಕಲ್ಲು, ಐಹೊಳೆ ಒಳಗೊಂಡಂತೆ ಚಾಲುಕ್ಯ ಪ್ರಾಧಿಕಾರ ರಚನೆಗೆ ವಿಧೇಯಕ ಮಂಡನೆಯಾಗಿದೆ. ಈಗಾಗಲೇ ಭಾರತೀಯ ಪುರಾತತ್ವ ಇಲಾಖೆಯವರು ಬಹುತೇಕ ಭಾಗ ನಿರ್ವಹಣೆ ಮಾಡುತ್ತಿದ್ದಾರೆ. ಉಳಿದ ಸ್ಮಾರಕಗಳ ರಕ್ಷಣೆ ನಮ್ಮ ಮೇಲೆ ಇದೆ. ಅವುಗಳ ಪರಿಸ್ಥಿತಿ ಅವಲೋಕಿಸಲಾಗಿದೆ. ಸಂರಕ್ಷಣೆಗೆ ಹೆಚ್ಚಿನ ಕಾಳಜಿ ಅವಶ್ಯಕತೆ ಇದೆ ಎಂದರು.

ಪಾರಂಪರಿಕ ತಾಣಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕು. ಈ ಗಳಿಗೆಯಿಂದಲೇ ಎಚ್ಚೆತ್ತುಕೊಂಡು ಸ್ಮಾರಕಗಳ ನಿರ್ವಹಣೆಗೆ ಮುಂದಾಗಬೇಕಿದೆ. ಈ ಕುರಿತು ಪ್ರತಿ ತಿಂಗಳು ಸಭೆ ನಡೆಸಲು ಸೂಚಿಸಿದ ಸಚಿವರು ಸ್ಮಾರಕಗಳಿಗೆ ಹೊಂದಿಕೊಂಡ ಕುಟುಂಬಗಳ ಸ್ಥಳಾಂತರಕ್ಕೆ ಜನರು ಸಹಕಾರ ನೀಡಲು ಮುಂದಾಗಿದ್ದಾರೆ. ಅವರ ಸ್ಥಳಾಂತಕ್ಕೆ ಕ್ರಮವಹಿಸಬೇಕು. ಜನಪ್ರತಿನಿಧಿಗಳ ಸಹಕಾರ ಪಡೆದು ಸ್ಥಳಾಂತರ ಕಾರ್ಯ ಪ್ರಾರಂಭಿಸಬೇಕು ಎಂದರು.

ಶೀಘ್ರದಲ್ಲಿಯೇ 3 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಲಾಗುತ್ತಿದ್ದು, ಐಹೊಳೆಯಲ್ಲಿರುವ 114 ಕುಟುಂಬಗಳ ಸ್ಥಳಾಂತರಕ್ಕೆÉ ಒಟ್ಟು 20 ಎಕರೆ ಜಾಗ ಅಗತ್ಯವಿದ್ದು, ಜಾಗ ಗುರುತಿಸಿ, ಖರೀದಿ ಮಾಡಲು ಕ್ರಮವಹಿಸಬೇಕು. ಸ್ಮಾರಕಗಳ ಅಭಿವೃದ್ದಿಗೆ ಅಡ್ಡಿಯಾಗಿರುವುದು ಕುಟುಂಬಗಳ ಸ್ಥಳಾಂತರ. ಈ ಕೆಲಸವನ್ನು ಮೊದಲು ಮಾಡಿದಲ್ಲಿ ಮುಂದಿನ ಕಾರ್ಯವನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯ ಸಲಹಾ ಸಮಿತಿ ಸಭೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ತಿಂಗಳ ಹಿಂದೆ ಐಹೊಳೆಗೆ ಭೇಟಿ ನೀಡಿ ಅಲ್ಲಿರುವ ಸ್ಮಾರಕಗಳ ವೀಕ್ಷಣೆ ಮಾಡಲಾಗಿದೆ. ಸ್ಮಾರಕಗಳಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಂಡಿರುವುದು ನೋಡಲಾಗಿದೆ. ಐಹೊಳೆಯ ಅರ್ದ ಚಿತ್ರಣ ತಿಳಿಯಲಾಗಿದೆ. ಉಳಿದ ಬಾದಾಮಿ ಮತ್ತು ಪಟ್ಟದಕಲ್ಲಿಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆ ಬಗ್ಗೆ ವೀಕ್ಷಣೆ ಮಾಡಿ, ಆ ಭಾಗದಲ್ಲಿ ಯಾವ ರೀತಿಯ ಅಭಿವೃದ್ದಿ ಕೈಗೊಳ್ಳಬೇಕೆಂಬುದನ್ನು ಚರ್ಚಿಸಲಾಗುವುದೆಂದು ತಿಳಿಸಿದರು.

ಪಾರಂಪರಿಕ ರಕ್ಷಣೆ ಆಗಬೇಕು. ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಬರಬೇಕು. ಮನೆಗಳ ಸಂಪೂರ್ಣ ಸ್ಥಳಾಂತರಗೊಂಡಾಗ ಮಾತ್ರ ಅಭಿವೃದ್ದಿ ಮಾಡಲು ಸಾಧ್ಯವೆಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ತಿಳಿಸಿದರೆ, ಬಾದಾಮಿ ಅಭಿವೃದ್ದಿ ಕುರಿತು ಶಾಸಕ ಭೀಮಸೇನ ಚಿಮ್ಮನಕಟ್ಟಿ ಸಭೆಗೆ ತಿಳಿಸಿದರು. ಶಾಸಕ ಎಚ್.ವಾಯ್.ಮೇಟಿ ಐಹೊಳೆಗೆ ಸಂಬಂಧಿಸಿದಂತೆ ಕುಟುಂಬಗಳ ಸ್ಥಳಾಂತಕ್ಕೆ ಬೇಕಾಗುವ ಜಾಗ ಖರೀದಿಗೆ ಕ್ರಮವಹಿಸುವ ಕಾರ್ಯ ಮಾಡಲಾಗುವುದೆಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶೀಧರ ಕುರೇರ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ರಾಜ್ಯ ಪುರಾತತ್ವ ಇಲಾಖೆಯ ಉಪನಿರ್ದೇಶಕಿ ಕಾವ್ಯಶ್ರೀ, ಹುನಗುಂದ ತಹಶೀಲ್ದಾರ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net