ಪಾತಾಳೇಶ್ವರ ದೇಗುಲದಲ್ಲಿ ವಿಜಯದಶಮಿ ಪೂಜೆ

3 mlv 1
Published on

ಮಳವಳ್ಳಿ: ತಾಲೂಕಿನ ಪೂರಿಗಾಲಿ ಪಾತಾಳೇಶ್ವರ ಮತ್ತು ಮಿಕ್ಕೆರೆ ಗ್ರಾಮಗಳಲ್ಲಿರುವ ವೀರಭದ್ರೇಶ್ವರಸ್ವಾಮಿ ದೇವಾಲಯಗಳಲ್ಲಿ ಶುಕ್ರವಾರ ನವರಾತ್ರಿ ಹಾಗೂ ವಿಜಯದಶಮಿ ಪೂಜಾ ಕೈಂಕರ್ಯಗಳ ಜತೆಗೆ ಹಲವು ಉತ್ಸಾವದಿಗಳು ವಿಜೃಂಭಣೆಯಿಂದ ಜರುಗಿದವು.

ಪೂರಿಗಾಲಿ ಗ್ರಾಮದ ಹೊರವಲಯದಲ್ಲಿರುವ ಪಾತೇಳೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ತಡರಾತ್ರಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ನಂತರ ಉತ್ಸವ ನೆರವೇರಿತು. ಪೂರಿಗಾಲಿ ಪಾತಾಳೇಶ್ವರ ಉತ್ಸವ ಮೂರ್ತಿ, ತಲಕಾಡು ಬೀರೇಶ್ವರ, ಕಾಳಿಹುಂಡಿ ಬನ್ನಿಮಾಕಾಳಮ್ಮ, ಸಿದ್ದರಾಮೇಶ್ವರ ಕೂಟಗಳ ಉತ್ಸವ ಜರುಗಿದವು. ಸೂರ್ಕಳ್ಳಿ, ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ನಂತರ ಪಾತಾಳೇಶ್ವರ ದೇವಸ್ಥಾನದ ಆವರಣದಲ್ಲಿ ಕೂಟಗಳ ಪೂಜಾ ಕುಣಿತ ಬೆಳಗಿನ ಜಾವದವರೆಗೂ ನಡೆಯಿತು. ಶುಕ್ರವಾರ ಬೆಳಗ್ಗಿನಿಂದ ದೇವಸ್ಥಾನಕ್ಕೆ ಅಕ್ಕಮಲ್ಲನಹುಂಡಿ ಸೇರಿದಂತೆ ಹಲವು ಗ್ರಾಮಗಳ ಜನರು ಆಗಮಿಸಿ ಪಾತಾಳೇಶ್ವರನಿಗೆ ಪೂಜೆ ಸಲ್ಲಿಸಿದರು.

ಮಿಕ್ಕೆರೆ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು. ಶುಕ್ರವಾರ ಬೆಳಗ್ಗೆ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಯಿತು. ಬಾಯಿಬೀಗ ಉತ್ಸವ ಜರುಗಿತು.

ಕಳೆದ ಮಹಾಲಯ ಅಮಾವಾಸ್ಯೆಯಂದು ತಿ.ನರಸೀಪುರ ತಾಲೂಕು ಕೊಡಗಳ್ಳಿ ಗ್ರಾಮದ ಪಟೇಲ್ ಜವರಪ್ಪ ಅವರ ಮನೆಗೆ ಉತ್ಸವ ಮೂರ್ತಿ ಕೊಂಡೊಯ್ದು ವಿಶೇಷ ಪೂಜೆಗಳನ್ನು ಮಾಡಿ ದೇವಸ್ಥಾನಕ್ಕೆ ಆಗಮಿಸುವ ಅರ್ಚಕರು ನವರಾತ್ರಿ ಮೊದಲನೇ ದಿನದ ಪಟ್ಟಕ್ಕೆ ಉತ್ಸವ ಮೂರ್ತಿಯನ್ನು ಕೂರಿಸುವ ಮೂಲಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ. ನಂತರ ಒಂಬತ್ತು ದಿನಗಳು ವಿಶೇಷ ಪೂಜೆ ನಡೆದವು. ಸಂಜೆ ಹೋಮ ಹವನ ನಡೆದವು.

ಬೆಳಗಿನ ಜಾವ ಮಂಗಳ ವಾದ್ಯಗಳೊಡನೆ ವೀರಗಾಸೆ , ನಂದಿ ಕಂಬ ಕುಣಿತ, ವೀರಭದ್ರೇಶ್ವರ ಸ್ವಾಮಿಯ ಉತ್ಸವವು ಮೆರವಣಿಗೆ ಮೂಲಕ ತೆರಳಿ ಸಮೀಪದ ಕೆರೆಯಂಗಳದಲ್ಲಿರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net