

ಹಾವೇರಿ: ನಗರದಲ್ಲಿ ಯುವತಿ ಮೇಲೆ ಮಂಗಳವಾರ ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಯುವಕನನ್ನು 24 ತಾಸಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿ ತಲೆಮರೆಸಿಕೊಂಡಿದ್ದ ಪ್ರಸಾದ ಚಿಕ್ಕಳ್ಳಿ(26) ಬಂಧಿತ ಆರೋಪಿ.
ಎಸ್ಪಿ ಕೆ.ಜಿ. ದೇವರಾಜ್ ಮಾರ್ಗದರ್ಶನದಲ್ಲಿ ಸಿಪಿಐ ಪ್ರಭಾವತಿ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬುಧವಾರ ಮಧ್ಯಾಹ್ನ ಆರೋಪಿಯನ್ನು ಬಂಧಿಸಿದ್ದಾರೆ.
ಪಾಗಲ್ ಪ್ರೇಮಿ…?: ಬಂಧಿತ ಆರೋಪಿ ಕೆಲ ವರ್ಷಗಳ ಹಿಂದೆ ಹಾವೇರಿ ತಾಲೂಕು ಕೆರಿಮತ್ತಿಹಳ್ಳಿಯಲ್ಲಿರುವ ಕವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ಎಂಎ ಪತ್ರಿಕೋದ್ಯಮ ಓದುತ್ತಿದ್ದ. ಅದೇ ಕೇಂದ್ರದಲ್ಲಿ ಯುವತಿ ಎಂಎಸ್ಡಬ್ಲ್ಯುಓದುತ್ತಿದ್ದಳು. ಈ ಸಮಯದಲ್ಲಿ ಇಬ್ಬರೂ ಪರಿಚಿತರಾಗಿದ್ದರು. ಇತ್ತೀಚೆಗೆ ಕೆಪಿಎಸ್ಸಿ ಪರೀಕ್ಷೆಯಲ್ಲಿ ತಾನು ಪಾಸಾಗಿದ್ದು, ಉನ್ನತ ಹುದ್ದೆಗೇರುತ್ತೇನೆ. ನನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದನಂತೆ. ಯುವತಿಯು ಅವನ ಹಿನ್ನೆಲೆ ವಿಚಾರಿಸಿದಾಗ ಉದ್ಯೋಗ ಕುರಿತು ಸುಳ್ಳು ಹೇಳುತ್ತಿದ್ದಾನೆ ಎಂದು ತಿಳಿದುಬಂದಿದೆ. ಇದರಿಂದ ಆತನಿಂದ ಯುವತಿ ದೂರವಾಗಿದ್ದಳು. ಆದರೂ ಪದೇ ಪದೆ ಪೀಡಿಸುತ್ತಿದ್ದ ಆರೋಪಿ ಪ್ರಸಾದನನ್ನು ಯುವತಿ ನಿರಾಕರಿಸಿದ್ದರಿಂದ ಕುಪಿತಗೊಂಡು ಆಸಿಡ್ ಎರಚಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.
ಶಂಕಿತ ಆರೋಪಿಗಳ ವಿಚಾರಣೆ: ಮಂಗಳವಾರ ಘಟನೆ ನಡೆದಿದ್ದರೂ ಬುಧವಾರ ಬೆಳಗ್ಗೆವರೆಗೂ ದಾಳಿಗೊಳಗಾದ ಸಂತ್ರಸ್ತೆಯ ಕುಟುಂಬದವರು ದೂರು ನೀಡಿರಲಿಲ್ಲ. ಯುವತಿಯ ಹೇಳಿಕೆ ಆಧಾರದ ಮೇಲೆ ಪೊಲೀಸರು ಶಂಕಿತ ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಆಸಿಡ್ ದಾಳಿಯಿಂದ ಆಘಾತಕ್ಕೊಳಗಾದ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ರಾತ್ರಿಯೇ ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ. ನಗರದಿಂದ ರಾಣೆಬೆನ್ನೂರಗೆ ಹೋಗುವ ರಸ್ತೆಯಲ್ಲಿ ಯಾವುದೇ ಸಿಸಿ ಕ್ಯಾಮರಾಗಳಿಲ್ಲ. ಸಂಜೆಯ ವೇಳೆ ಹಾಗೂ ಹೆಲ್ಮೆಟ್ ಧರಿಸಿದ್ದರಿಂದಾಗಿ ದುಷ್ಕರ್ವಿುಗಳು ಹಾಗೂ ಬೈಕ್ನ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.
ವಿವಿಧ ಸಂಘಟನೆಗಳ ಖಂಡನೆ, ಪ್ರತಿಭಟನೆ; ಯುವತಿ ಮೇಲೆ ಆಸಿಡ್ ಎರಚಿದ ದುಷ್ಕರ್ವಿುಗಳನ್ನು ಕಠಿಣ ಶಿಕ್ಷೆಗೊಳಪಡಿಸಬೇಕು. ಯುವತಿಗೆ ನೆರವು ನೀಡಬೇಕು ಎಂದು ಒತ್ತಾಯಿಸಿ ಎಸ್ಎಫ್ಐ, ಡಿವೈಎಫ್ಐ, ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ, ಡಿಎಸ್ಎಸ್ ಸಂಘಟನೆಗಳ ನೇತೃತ್ವದಲ್ಲಿ ನಗರದ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಯುವತಿ ಮೇಲಿನ ಆಸಿಡ್ ದಾಳಿ ಘಟನೆ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಮಹಿಳೆಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಘಟನೆಯಿಂದ ಯುವತಿಯ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ನೀಚ ಕೃತ್ಯ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದರು. ಲೈಂಗಿಕ ಅಲ್ಪಸಂಖ್ಯಾತ ಸಂಘಟನೆ ರಾಜ್ಯ ಕಾರ್ಯದರ್ಶಿ ಅಕ್ಷತಾ ಕೆ.ಸಿ ಮಾತನಾಡಿ, ಸುಪ್ರೀಂಕೋರ್ಟ್ 2013ರಲ್ಲಿಯೇ ಆಸಿಡ್ ಮಾರಾಟಕ್ಕೆ ಕೆಲ ನಿರ್ಬಂಧಗಳನ್ನು ಹೇರಿದೆ. ಆದರೂ ಅನಿಯಂತ್ರಿತವಾಗಿ ಆಸಿಡ್ ಸಿಗುತ್ತದೆ. ಈ ಘಟನೆಯನ್ನು ಗೃಹ ಸಚಿವರು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ತಹಸೀಲ್ದಾರ್ ಮೂಲಕ ಗೃಹ ಸಚಿವರು, ಜಿಲ್ಲಾಧಿಕಾರಿ, ಎಸ್ಪಿಗೆ ಮನವಿ ಸಲ್ಲಿಸಲಾಯಿತು. ವಿವಿಧ ಸಂಘಟನೆಗಳ ಮುಖಂಡರಾದ ಬಸವರಾಜ ಭೋವಿ, ಜ್ಯೋತಿ ದೊಡ್ಡಮನಿ, ಮುಕ್ತಾನಂದ ಹಿರೇಮನಿ, ಬಿರೇಶ ಹೀಲದಹಳ್ಳಿ, ವಿನಾಯಕ ಕುರುಬರ, ಉಡಚಪ್ಪ ಮಾಳಗಿ, ಬಸವರಾಜ ಹೆಡಿಗೊಂಡ, ನಾರಾಯಣ ಕಾಳೆ, ಲಾಲಸಾಬ್ ಚೋಪದಾರ, ಶಾಹೀದ ದೇವಿಹೊಸೂರು, ಸಂಜಯಗಾಂಧಿ ಸಂಜೀವಣ್ಣವರ, ಸುರೇಶ ಛಲವಾದಿ ಇತರರು ಪಾಲ್ಗೊಂಡಿದ್ದರು.
ಯುವತಿಗೆ ಕಿಮ್ಸ್ನಲ್ಲಿ ಚಿಕಿತ್ಸೆ: ಹುಬ್ಬಳ್ಳಿ: ಆಸಿಡ್ ದಾಳಿಗೀಡಾದ ಯುವತಿಗೆ ಇಲ್ಲಿನ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಕೆಗೆ ಮೂರು ವಾರಕ್ಕೂ ಹೆಚ್ಚು ಸಮಯ ಹಿಡಿಯಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಮುಖದ ಪಾರ್ಶ್ವ ಭಾಗ, ಕಣ್ಣುರೆಪ್ಪೆ, ಭಾಗಶಃ ಬಲಗೈ ಹಾಗೂ ಬೆನ್ನ ಹಿಂದೆ ಆಸಿಡ್ ಬಿದ್ದಿದೆ. ಶೇ. 10ರಷ್ಟು ಚರ್ಮ ಸುಟ್ಟಿದೆ. ಕಣ್ಣಿನ ಭಾಗಕ್ಕೆ ಅಂಥ ತೊಂದರೆಯಾಗಿಲ್ಲ. ಯುವತಿಗೆ ಚಿಕಿತ್ಸೆ ನೀಡಲು ಮೂರು ವಾರಕ್ಕೂ ಹೆಚ್ಚು ಸಮಯ ತಗುಲಬಹುದು. ನಂತರ ಮಲ್ಪಿಪಲ್ ಶಸ್ತ್ರ ಚಿಕಿತ್ಸೆ ಅಥವಾ ಪ್ಲಾಸ್ಟಿಕ್ ಸರ್ಜರಿ ಕುರಿತು ನಿರ್ಧರಿಸಲಾಗುವುದು ಎಂದು ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್.ಎಸ್. ಶಿರೋಳ ತಿಳಿಸಿದ್ದಾರೆ.