

ಕಾರವಾರ: ಭಟ್ಕಳದಲ್ಲಿ ಕಳೆದ 6 ವರ್ಷದಿಂದ ಅಕ್ರಮವಾಗಿ ವಾಸವಾಗಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಶಹರ ಠಾಣೆ ಪೊಲೀಸರು ಗುರುವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಖತೀಜಾ ಮಹರಿನ್ ಜಾವೇದ್ ಮೊಹಿದ್ದಿನ್ ರುಕ್ನುದ್ದೀನ್ ಬಂಧಿತ ಮಹಿಳೆ. ಆಕೆಯ ಬಳಿ ಇದ್ದ ಖೊಟ್ಟಿ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಜನನ ಪ್ರಮಾಣಪತ್ರ, ಪಾನ್ಕಾರ್ಡ್ ಸೇರಿದಂತೆ ಇತರೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಖತೀಜಾ ಮಹರಿನ್ ಭಟ್ಕಳ ಮೂಲದ ಜಾವೇದ್ ಮೊಹಿದ್ದಿನ್ ರುಕ್ನುದ್ದೀನ್ ಜತೆ 2014 ರಲ್ಲಿ ದುಬೈನಲ್ಲಿ ವಿವಾಹವಾಗಿದ್ದಳು. ಮೂರು ತಿಂಗಳ ಪ್ರವಾಸಿ ವೀಸಾದ ಮೇಲೆ ಭಟ್ಕಳಕ್ಕೆ ಬಂದು ವಾಪಸಾಗಿದ್ದಳು. ನಂತರ 2015ರಲ್ಲಿ ನೇಪಾಳದ ಖಡ್ಮಂಡು ಮೂಲಕ ಯಾವುದೇ ವೀಸಾ ಇಲ್ಲದೇ ಅಕ್ರಮವಾಗಿ ಭಾರತಕ್ಕೆ ಆಗಮಿಸಿದ್ದಳು. ಬಳಿಕ ಇಲ್ಲಿಯೇ ಅಕ್ರಮವಾಗಿ ವಾಸವಿದ್ದಳು. ಆಕೆಗೆ ಈಗ ಮೂವರು ಮಕ್ಕಳಿದ್ದಾರೆ. ಬುಧವಾರ ಸಿಕ್ಕ ಮಾಹಿತಿಯ ಆಧಾರದ ಮೇಲೆ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಎಎಸ್ಪಿ ಬದರೀನಾಥ ನೇತೃತ್ವದಲ್ಲಿ ಭಟ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ಸಿಪಿಐ ದಿವಾಕರ ಪಿ.ಎಂ., ಭಟ್ಕಳ ಶಹರ ಠಾಣೆ ಪಿಎಸ್ಐ ಸುಮಾ ಬಿ, ಸಿಬ್ಬಂದಿ ನಾರಾಯಣ ನಾಯ್ಕ, ಮುದ್ಗುಂ ಪತ್ತೆಖಾನ್, ಲೋಕಪ್ಪ ಪತ್ತಿ, ಹೀನಾ ಎಫ್ ಗುರುವಾರ ಕಾರ್ಯಾಚರಣೆ ನಡೆಸಿದ್ದರು ಎಂದು ಎಸ್ಪಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.
ಪಾಕ್-ಭಟ್ಕಳ ಮದುವೆ ನಂಟು: ಪಾಕಿಸ್ತಾನ ಹಾಗೂ ಭಟ್ಕಳದ ನಡುವಿನ ವೈವಾಹಿಕ ಸಂಬಂಧ ಸಾಕಷ್ಟು ವರ್ಷಗಳಿಂದಲೂ ಇದೆ. ಭಟ್ಕಳದ ಸಾವಿರಾರು ಜನ ಅರಬ್ ರಾಷ್ಟ್ರಗಳಲ್ಲಿದ್ದು, ಅಲ್ಲಿಂದ ಪಾಕಿಸ್ತಾನದ ಸಂಬಂಧ ಬೆಳೆಸುತ್ತಾರೆ. ಭಟ್ಕಳ ಮೂಲದವರನ್ನು ವಿವಾಹವಾಗಿ ಇಲ್ಲಿಯೇ ಬಂದು ವಾಸ್ತವ್ಯ ಹೂಡಿದ ಪಾಕಿಸ್ತಾನದ 8 ಮಹಿಳೆಯರಿದ್ದಾರೆ. ಅವರು ಲಾಂಗ್ ಟಮ್ರ್ ವೀಸಾ ಪಡೆದಿದ್ದು, ಪ್ರತಿ ವರ್ಷ ನವೀಕರಣ ಮಾಡಲಾಗುತ್ತದೆ. ಅವರ ಮೇಲೆ ಪೊಲೀಸ್, ಗುಪ್ತಚರ ಇಲಾಖೆಯಿಂದ ನಿರಂತರವಾಗಿ ನಿಗಾ ಇಡಲಾಗುತ್ತದೆ. ವೀಸಾ ಮುಕ್ತಾಯವಾದಲ್ಲಿ ವಾಪಸ್ ಕಳಿಸಲಾಗುತ್ತದೆ. ಉಗ್ರಗಾಮಿ ಚಟುವಟಿಕೆಯಡಿ ಬಂಧಿತನಾದ ಅಷ್ಪಾಕ್ ಲಂಕಾ ಎಂಬಾತನ ಪಾಕಿಸ್ತಾನ ಮೂಲದ ಪತ್ನಿಯ ವೀಸಾ ಮುಕ್ತಾಯವಾದ ಹಿನ್ನೆಲೆಯಲ್ಲಿ ಆಕೆಯನ್ನು ವರ್ಷದ ಹಿಂದೆ ಗಡಿಪಾರು ಮಾಡಲಾಗಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.