

ಪಾಂಡವಪುರ: ಮಳೆ ಇಲ್ಲದೆ ಜಲಾಶಯಗಳು ಬರಿದಾಗಿದ್ದು, ರಾಜ್ಯವೇ ಬರ ಪರಿಸ್ಥಿತಿಯಲ್ಲಿರುವಾಗ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಖಂಡನೀಯ ಎಂದು ಆರೋಪಿಸಿ ವಕೀಲರು ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಮುಂಭಾಗ ಜಮಾವಣೆಗೊಂಡ ವಕೀಲರು, ತಾಲೂಕು ಕಚೇರಿಗೆ ಮೌನ ಮೆರವಣಿಗೆ ನಡೆಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ ಮಾತನಾಡಿ, ಕೆಆರ್‌ಎಸ್, ಹೇಮಾವತಿ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳು ಬರಿದಾಗಿದ್ದು ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಕೆರೆ-ಕಟ್ಟೆಗಳು ಬತ್ತಿ ಹೋಗಿವೆ. ಇಂತಹ ಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ಕ್ರಮ ಸರಿಯಲ್ಲ.
ಕುಡಿಯುವ ನೀರಿಗೂ ಅಭಾವ ಉಂಟಾಗುವ ಭೀತಿ ಕಾಡುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ವಕೀಲರ ಸಂಘದಿಂದ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಳಿಕ ಉಪವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಕನಗನಮರಡಿ ನಾಗರಾಜು, ಕ್ಯಾತನಹಳ್ಳಿ ಮೋಹನ್, ಭಾಸ್ಕರ್, ಕೆನ್ನಾಳು ಸುರೇಶ್, ಚಿಕ್ಕಾಡೆ ಧನಂಜಯ ಇತರರಿದ್ದರು.