ಪಹಲ್ಗಾಮ್ ದಾಳಿಗೆ ಭಾರತ ದಿಟ್ಟ ಉತ್ತರ

19M.D.R.1
Published on

ಮದ್ದೂರು: ಆಪರೇಷನ್ ಸಿಂಧೂರದ ಮೂಲಕ ಭಾರತ ದಿಟ್ಟ ಉತ್ತರವನ್ನು ನೀಡಿದೆ. ಆ ಮೂಲಕ ಧರ್ಮ ಕೇಳಿ ಹತ್ಯೆ ಮಾಡಿದವರಿಗೆ ತಕ್ಕ ಪಾಠ ಕಲಿಸಿದಂತಾಗಿದೆ ಎಂದು ಕುಕ್ಕೆ ಸುಬ್ರಮಣ್ಯ ಶ್ರೀ ಕ್ಷೇತ್ರದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಹಳೇ ಬಸ್ ಸ್ಟಾೃಂಡ್ ಬಳಿಯಿರುವ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. ನೀಚ ಬುದ್ಧಿಯ ಪಾಕಿಸ್ತಾನವು ಭಯೋತ್ಪಾದಕರನ್ನು ತನ್ನ ದೇಶದಲ್ಲಿ ಬೆಳೆಸಿ ನಮ್ಮ ದೇಶದಲ್ಲಿ ಕುಚೋದ್ಯದ ಕೆಲಸಗಳನ್ನು ಮಾಡಲು ಬಿಡುತ್ತದೆ. ಇದಕ್ಕೆ ನಮ್ಮ ದೇಶದ ಸೈನಿಕರು ಸರಿಯಾದ ಶಾಸ್ತಿ ಮಾಡಿ ತಕ್ಕ ಉತ್ತರ ನೀಡಿದ್ದಾರೆ ಎಂದರು.

ಈ ದಿಟ್ಟ ನಿಲುವನ್ನು ತಾಳಿದ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಹೆಮ್ಮೆಯ ಸೈನಿಕರನ್ನು ಪ್ರಶಂಸಿಸುತ್ತೇನೆ. ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನವು ಮತ್ತೆ ತಲೆ ಎತ್ತದಂತೆ ಸರಿಯಾದ ಬುದ್ಧಿ ಕಲಿಸಬೇಕು. ಯಾವ ಧರ್ಮವೂ ಇನ್ನೊಂದು ಧರ್ಮವನ್ನು ನಾಶಮಾಡಿ ಎಂದು ಹೇಳುವುದಿಲ್ಲ. ಆದರೆ, ನಮ್ಮ ದೇಶದ ಬಗ್ಗೆ ಪಾಕಿಸ್ತಾನವು ಮೊದಲಿನಿಂದ ಹಗೆಯನ್ನು ಸಾಧಿಸುತ್ತಲೇ ಬರುತ್ತಿದ್ದು, ಮುಂದೆ ಹೀಗಾದರೆ ಆ ದೇಶದ ಅವನತಿಯಾಗುತ್ತದೆ ಎಂದರು.

ದೇವಸ್ಥಾನದ ಪ್ರಧಾನ ಅರ್ಚಕರಾದ ರಾಘವೇಂದ್ರ ರಾವ್ ಮಾತನಾಡಿ, ಪಟ್ಟಣದ ಪುರಾಣ ಪ್ರಸಿದ್ಧ ದೇವಾಲಯಕ್ಕೆ ಹಲವು ವರ್ಷಗಳ ಇತಿಹಾಸವಿದೆ. ದೇಗುಲಕ್ಕೆ ಕುಕ್ಕೆ ಸುಬ್ರಮಣ್ಯ ಶ್ರೀ ಕ್ಷೇತ್ರದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿರುವುದು ಸಂತೋಷ ತಂದಿದೆ. ದೇಗುಲಕ್ಕೆ ಧಾರ್ಮಿಕ ಮಹನೀಯರು, ಗಣ್ಯ ವ್ಯಕ್ತಿಗಳು ಹಾಗೂ ಭಕ್ತಾದಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾಶಿ ವಿಶ್ವನಾಥನ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಭಗವಂತ ಭಕ್ತಾದಿಗಳ ಇಷ್ಟಾರ್ಥಗಳನ್ನು ಈಡೇರಿಸುವ ಮೂಲಕ ಭಕ್ತರ ಪಾಲಿನ ಆರಾಧ್ಯದೈವ ಶ್ರೀ ಕಾಶಿ ವಿಶೇಶ್ವರಸ್ವಾಮಿ ಎನಿಸಿದ್ದಾರೆ ಎಂದರು.

ದೇಗುಲದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಭಕ್ತರು ಆಗಮಿಸುತ್ತಿರುವುದು ವಿಶೇಷ ಎಂದರು.

ತಾಲೂಕು ಬ್ರಾಹ್ಮಣಸಭಾದ ಕಾರ್ಯದರ್ಶಿ ಸತ್ಯನಾರಾಯಣರಾವ್, ಸುಧೀರ್ ಕುಮಾರ್, ಶಂಕರ ಸಭಾದ ಅಧ್ಯಕ್ಷ ಗುರುಸ್ವಾಮಿ, ರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ರಾಮಚಂದ್ರ, ನಿರ್ದೇಶಕರಾದ ಕೋಟೆಬೀದಿ ಮೋಹನ್, ನರಸಿಂಹಪ್ರಸಾದ್, ಶಿಕ್ಷಕಿ ವಿಜಯಲಕ್ಷ್ಮೀ, ಜಯರಾಮಯ್ಯ, ಮಮತಾ ರಾಂಕ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net