ಪಶ್ಚಿಮಘಟ್ಟ ಪ್ರದೇಶವನ್ನು ಹೊರಗಿಡಿ

SWARNAVALLI SWAMIJI 2
Published on

ಶಿರಸಿ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯ ವ್ಯಾಪ್ತಿಯಿಂದ ನೀರಾವರಿ ಜಮೀನುಗಳನ್ನು ಹೊರಗಿಟ್ಟಂತೆ ಪಶ್ಚಿಮಘಟ್ಟ ಪ್ರದೇಶವನ್ನೂ ಹೊರಗಿಡಬೇಕು ಎಂದು ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಗ್ರಹಿಸಿದರು.

ಉದ್ದೇಶಿತ ಭೂ ಸುಧಾರಣೆ ಕಾನೂನಿನ ಸಾಧಕ-ಬಾಧಕಗಳ ಕುರಿತು ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಸಮಾಲೋಚನೆ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸರ್ಕಾರ ತರಾತುರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಬದಲು ಸದನದಲ್ಲಿ ರ್ಚಚಿಸಿ ಸರ್ವಸಮ್ಮತ ನಿರ್ಣಯ ತೆಗೆದುಕೊಳ್ಳುವುದು ಉಚಿತ ಎಂದರು.

ಮಲೆನಾಡಿನ ಕೃಷಿಕರು ಸಣ್ಣ ಹಿಡುವಳಿ ಹೊಂದಿದ್ದಾರೆ. ಉದ್ದೇಶಿತ ತಿದ್ದುಪಡಿಯಿಂದ ಈ ಸಣ್ಣ ಹಿಡುವಳಿಯೂ ಕಾಲಕ್ರಮೇಣ ಕೃಷಿಕರಿಂದ ಕೈತಪ್ಪುವ ಸಾಧ್ಯತೆ ಇದೆ. ಆದ್ದರಿಂದ ಸಣ್ಣರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಿದ್ದುಪಡಿ ಮಾಡಬೇಕು. ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಬಹುದು ಹಾಗೂ ಅದನ್ನು ವಾಣಿಜ್ಯ ಮತ್ತು ಔದ್ಯೋಗಿಕ ಉದ್ದೇಶಗಳಿಗಾಗಿ ಬಳಸಬಹುದು. ಇವುಗಳಿಂದ ಸಣ್ಣ ಹಿಡುವಳಿದಾರರು ತಮ್ಮ ಜಮೀನಿನಲ್ಲೇ ಕೂಲಿಕಾರರಾಗುವ ಅಪಾಯವಿದೆ ಎಂದು ಹೇಳಿದರು.

ಪರಿಸರ ತಜ್ಞ ಡಾ.ಕೇಶವ ಕೊರ್ಸೆ ಮಾತನಾಡಿ, ಉತ್ತರ ಕನ್ನಡದಲ್ಲಿ ಖುಷ್ಕಿ ಜಮೀನು ಕೂಡ ಪರಿಸರದ ದೃಷ್ಟಿಯಿಂದ ಅತ್ಯಂತ ಮಹತ್ವದ ಪಾತ್ರ ಹೊಂದಿದೆ. ನೀತಿ ಆಯೋಗದ ಅಧ್ಯಯನದ ಹಿನ್ನೆಲೆಯಲ್ಲಿ ಗುಡ್ಡಗಾಡು ಪ್ರದೇಶವನ್ನು ಈ ತಿದ್ದುಪಡಿಯ ವ್ಯಾಪ್ತಿಯಿಂದ ಹೊರಗೆ ಇಡಬೇಕು ಎಂದರು. ರಾಯಚೂರಿನಲ್ಲಿ ನಾರಾಯಣಪುರ ಮೇಲ್ದಂಡೆ ಗುಂಟ ಆಂಧ್ರದವರು ಜಮೀನು ಖರೀದಿಸಿದ್ದಾರೆ. ಸ್ಥಾನಿಕರು ಲಾಭಕ್ಕಾಗಿ ಜಮೀನು ಮಾರಿದ್ದಾರೆ. ಕೊಡಗಿನಲ್ಲಿ ಅನಧಿಕೃತವಾಗಿ ಕೃಷಿಭೂಮಿ ಕೃಷಿಯೇತರ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ತಮಿಳುನಾಡಿನಲ್ಲಿ ಕೃಷಿ ಜಮೀನು ಖರೀದಿಯ ಮಿತಿ ತೆಗೆದು ಹಾಕಿದ್ದರಿಂದ ಅವು ಕೃಷಿಯೇತರ ಉದ್ದೇಶಗಳಿಗೆ ಬಳಕೆ ಆಗುತ್ತಿವೆ. ಅತ್ಯಂತ ಕಡಿಮೆ ಆದಾಯ ಇರುವುದು ಕೃಷಿಯಲ್ಲಿ. ಬ್ಯಾಂಕಿನಲ್ಲಿ ಹಣ ಇಟ್ಟರೆ ಶೇ.7 ಆದಾಯ ಇದೆ. ಹಾಗಾಗಿ ಕೃಷಿ ಭೂಮಿಯ ಪರಭಾರೆಯ ಹಿಂದಿನ ಲೆಕ್ಕಾಚಾರ ಆರ್ಥಿಕ ಲಾಭವಷ್ಟೇ ಎಂದರು.

ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಕೃಷಿ-ಅರಣ್ಯ ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆ ಹೆಚ್ಚಾದಾಗ ಭೂಕುಸಿತ, ನೆರೆಹಾವಳಿಯಂತಹ ನೈಸರ್ಗಿಕ ವಿಕೋಪಗಳು ಉಂಟಾಗುತ್ತವೆ. ಉದ್ದೇಶಿತ ತಿದ್ದುಪಡಿಯಲ್ಲಿ ನಿರ್ಬಂಧಗಳನ್ನು ಅಳವಡಿಸಬೇಕು ಎನ್ನುವುದು ಮಲೆನಾಡಿನ ಕೂಗು ಆಗಬೇಕು ಎಂದು ಹೇಳಿದರು.

ಪರಿಸರ ತಜ್ಞರಾದ ಈಶಣ್ಣ ನೀರ್ನಳ್ಳಿ, ಗುರುಪಾದ ಹೆಗಡೆ ಬೊಮ್ಮನಳ್ಳಿ, ನಾಗರಾಜ ಭಟ್ಟ, ಯಲ್ಲಾಪುರ ತಾಪಂ ಅಧ್ಯಕ್ಷೆ ಚಂದ್ರಕಲಾ ಭಟ್ಟ, ಸದಸ್ಯೆ ರಾಧಾ ಹೆಗಡೆ, ನಾಗರಾಜ ಕವಡಿಕೆರೆ ಇದ್ದರು. ವಕೀಲ ಎ.ಆರ್.ಹೆಗಡೆ ಹುಡ್ಲಮನೆ ಕರ್ನಾಟಕ ಭೂ ಸುಧಾರಣೆ ಕಾನೂನಿನ ಕುರಿತು ಮಾಹಿತಿ ನೀಡಿದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿಘ್ನೕಶ್ವರ ಹೆಗಡೆ ಬೊಮ್ಮನಳ್ಳಿ ಸ್ವಾಗತಿಸಿದರು. ನಾರಾಯಣ ಹೆಗಡೆ ಗಡಿಕೈ ನಿರ್ಣಯ ಮಂಡಿಸಿದರು. ಗಣಪತಿ ಬಿಸಲಕೊಪ್ಪ ನಿರ್ವಹಿಸಿದರು.

ನಿರ್ಣಯಗಳು

·ಪರಿಸರದ ದೃಷ್ಟಿಯಿಂದ ಅತ್ಯಂತ ಮಹತ್ವದ ಪಾತ್ರ ಹೊಂದಿರುವ ಜೀವಜಲದ ಮೂಲಸೆಲೆಯಾದ ಪಶ್ಚಿಮಘಟ್ಟ ಹಾಗೂ ಕರಾವಳಿ ಪ್ರದೇಶಗಳನ್ನು ನೀತಿ ಆಯೋಗದ ಗುಡ್ಡಗಾಡು ಪ್ರದೇಶಗಳ ಅಧ್ಯಯನದ ಹಿನ್ನೆಲೆಯಲ್ಲಿ ಉದ್ದೇಶಿತ ತಿದ್ದುಪಡಿಯ ವ್ಯಾಪ್ತಿಯಿಂದ ಹೊರಗಿಡಬೇಕು.

·ಕರ್ನಾಟಕ ರಾಜ್ಯಕ್ಕೆ ಪ್ರಾದೇಶಿಕ ಸೂಕ್ಷ್ಮತೆಗಳನ್ನು ಆಧರಿಸಿರುವ ಭೂ-ಬಳಕೆಯ ನೀತಿಯನ್ನು ಸಿದ್ಧಪಡಿಸಿ, ಆ ನೀತಿಯ ಹಿನ್ನೆಲೆಯಲ್ಲಿ ಭೂ ಸುಧಾರಣೆ ತಿದ್ದುಪಡಿ ಮಾಡಬೇಕು.

·ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಭಾರೆ ಮಾಡುವುದನ್ನು ತಪ್ಪಿಸಲು ತಿದ್ದುಪಡಿಯಲ್ಲಿ 30 ವರ್ಷ ಕೃಷಿ ಚಟುವಟಿಕೆಯನ್ನೇ ಮಾಡಬೇಕು ಎನ್ನುವ ಷರತ್ತನ್ನು ವಿಧಿಸುವುದು ಅತ್ಯವಶ್ಯ ಹಾಗೂ 30 ವರ್ಷ ಅದನ್ನು ಪರಭಾರೆ ಮಾಡಬಾರದು ಎನ್ನುವ ನಿರ್ಬಂಧವೂ ಅತ್ಯಗತ್ಯ.

·ಈಗ ಇರುವ ಕೃಷಿ ಜಮೀನಿನ ಗರಿಷ್ಠ ಮಿತಿಯನ್ನು ಹೆಚ್ಚಿಸಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net