

ವಿಜಯವಾಣಿ ಸುದ್ದಿಜಾಲ ಕಾರವಾರ/ಹೊನ್ನಾವರ
ಹೊನ್ನಾವರದ ಯುವಕ ಪರೇಶ ಮೇಸ್ತನದ್ದು, ಸಹಜ ಸಾವು ಎಂದು ಸಿಬಿಐ `ಬಿ' ವರದಿ ಸಲ್ಲಿಸಿದೆ. ಇಲ್ಲಿನ ನ್ಯಾಯಾಲಯಕ್ಕೆ ಸೋಮವಾರ ಹಾಜರಾಗಿರುವ ಸಿಬಿಐ ಅಧಿಕಾರಿಗಳು `ಬಿ' ವರದಿಯನ್ನು ಸಲ್ಲಿಸಿದ್ದಾರೆ. ವರದಿಯ ಸಂಬಂಧದ ವಿಚಾರಣೆಯನ್ನು ಜೆಎಂಎಫ್‌ಸಿ ನ್ಯಾಯಾಲಯ ನವೆಂಬರ್ 16 ಕ್ಕೆ ಮುಂದೂಡಿದೆ.
2017 ರ ಡಿಸೆಂಬರ್ 6 ರಂದು ಹೊನ್ನಾವರ ಪಟ್ಟಣದ ಪರೇಶ ಮೇಸ್ತ ಎಂಬ 19 ವರ್ಷದ ಮೀನುಗಾರ ಸಮುದಾಯದ ಯುವಕ ಕಾಣೆಯಾಗಿದ್ದ. ಡಿಸೆಂಬರ್ 8 ರಂದು ನಗರದ ಶೆಟ್ಟಿಕೆರೆಯಲ್ಲಿ ಪರೇಶ ಮೇಸ್ತ ಶವ ಪತ್ತೆಯಾಗಿತ್ತು. ಆತನನ್ನು ಕೊಲೆ ಮಾಡಿದ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಣಿಪಾಲ ಕೆಎಂಸಿ ಆಸ್ಪತ್ರೆಯ ಫಾರೆನ್ಸಿಕ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಂಕರ ಬಕ್ಕಣ್ಣನವರ್ ಮರಣೋತ್ತರ ಪರೀಕ್ಷೆ ನಡೆಸಿದ್ದರು. ವಿರೂಪಗೊಂಡಿರುವ ಪರೇಶ ಮೇಸ್ತ ಶವದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಾಕ್ಷ್ಯಾಧಾರಗಳನ್ನು ಮುಚ್ಚಿ ಹಾಕಲಾಗುತ್ತಿದೆ. ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಹಾಗೂ ಹಿಂದು ಸಂಘಟನೆಗಳು ಜಿಲ್ಲಾದ್ಯಂತ ತೀವ್ರ ಪ್ರತಿಭಟನೆ ನಡೆಸಿದ್ದವು.
ಹೊನ್ನಾವರ ಮಾತ್ರವಲ್ಲದೆ ಇಡೀ ಉತ್ತರ ಕನ್ನಡದಲ್ಲಿ ಭಾರಿ ಪ್ರತಿಭಟನೆಗಳು ನಡೆದವು. ಕುಮಟಾದಲ್ಲಿ ನಡೆದ ಬೃಹತ್ ಪ್ರತಿಭಟನೆ ವೇಳೆ ಸಾವಿರಾರು ಜನ ಸೇರಿದ್ದರು. ಪಶ್ಚಿಮ ವಲಯ ಐಜಿಪಿ ಕಾರಿಗೆ ಬೆಂಕಿ ಹಚ್ಚಲಾಯಿತು. ಶಿರಸಿಯ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ನಡೆದು ಗಲಾಟೆಯಾಗಿತ್ತು. ಒಟ್ಟಾರೆ ಪರೇಶ ಮೇಸ್ತ ಸಾವಿನ ವಿಚಾರವಾಗಿ ಇಡೀ ಜಿಲ್ಲೆ ಹೊತ್ತಿ ಉರಿದಿತ್ತು. ಪ್ರತಿಭಟನೆ ನಡೆಸಿದ, ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕಕಾರಿ ಪೋಸ್ಟ್ ಹಾಕಿದ ಸಾವಿರಾರು ಯುವಕರ ಮೇಲೆ ಪ್ರಕರಣ ದಾಖಲಾಗಿತ್ತು. ಹಲವರನ್ನು ಬಂಧಿಸಲಾಗಿತ್ತು.
ಕೊಲೆ ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರು ಹೊನ್ನಾವರ ಪಟ್ಟಣದ ಆಜಾದ್ ಅಣ್ಣಿಗೇರಿ, ಮೊಹಮದ್ ಫಾಸಿಲ್, ಆಸಿಫ್ ರಫೀಕ್, ಇಮ್ತಿಯಾಜ್ ಗಣಿ ಹಾಗೂ ಸಲೀಂ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಽಸಿದ್ದರು. ಕೊನೆಗೂ ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವುದಾಗಿ ಆಗಿನ ಸಿಎಂ ಸಿದ್ದರಾಮಯ್ಯ ಡಿಸೆಂಬರ್ 13 ರಂದು ಘೋಷಿಸಿದ್ದರು. 2018 ರ ಏಪ್ರೀಲ್ 23 ರಂದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸಿಬಿಐ ತನಿಖೆ ಪ್ರಾರಂಭಿಸಿತ್ತು. ಸುಧೀರ್ಘ ನಾಲ್ಕುವರೆ ವರ್ಷಗಳ ತನಿಖೆಯ ಬಳಿಕ ಸಿಬಿಐ ಪ್ರಕರಣದಲ್ಲಿ ಬಿ ವರದಿ ಸಲ್ಲಿಸಿದೆ.
ಪಕ್ಷ ರಾಜಕೀಯ:
ಪರೇಶ ಮೇಸ್ತ ಸಾವಿನ ವಿಚಾರ ಉತ್ತರ ಕನ್ನಡದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಹಾಗೂ ದೊಡ್ಡ ರಾಜಕೀಯ ಬದಲಾವಣೆಗೆ ಕಾರಣವಾಗಿತ್ತು. ಪರೇಶ ಮೇಸ್ತ ಹತ್ಯೆಯಾದ ಸಂದರ್ಭದಲ್ಲಿ ಆಗಿನ ಕಾಂಗ್ರೆಸ್ ಸಿಎಂ ಸಿದ್ದರಾಮಯ್ಯ ಉತ್ತರ ಕನ್ನಡ ಪ್ರವಾಸದಲ್ಲಿದ್ದರು. ಕಾಂಗ್ರೆಸ್ ಸರ್ಕಾರ ಹಿಂದು ಯುವಕನ ಹತ್ಯೆ ಬೆಂಬಲಿಸುತ್ತಿದೆ ಎಂಬೆಲ್ಲ ಆರೋಪಗಳನ್ನು ಬಿಜೆಪಿ ಮಾಡಿತ್ತು. ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪರೇಶ ಮೇಸ್ತ ಮನೆಗೆ ಭೇಟಿ ನೀಡಿದ್ದರು. ಆಗಿನ ಸಂಸದೆ ಶೋಭಾ ಕರಂದ್ಲಾಜೆ ಪ್ರಕರಣದವನ್ನು ಎನ್‌ಐಎಗೆ ವಹಿಸಬೇಕು ಎಂದು ಒತ್ತಾಯಿಸಿದ್ದರು.
ಈ ಎಲ್ಲ ಘಟನೆಗಳ ಪರಿಣಾಮ ಜಿಲ್ಲೆಯಲ್ಲಿ ಹಿಂದುತ್ವದ ಅಲೆ ಜಾಗೃತವಾಗಿತ್ತು. ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತರ ಕನ್ನಡದ 6 ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತ್ತು. 2018 ರ ಚುನಾವಣೆಯಲ್ಲಿ ಬಿಜೆಪಿ ಕರಾವಳಿಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಪರೇಶ ಮೇಸ್ತ ಪ್ರಕರಣವೇ ಕಾರಣ ಎಂಬುದು ರಾಜಕೀಯ ತಜ್ಞರ ವಿಶ್ಲೇಷಣೆ.