

ವಿಜಯವಾಣಿ ಸುದ್ದಿಜಾಲ ಹೊನ್ನಾವರ
ಪರೇಶ ಮೇಸ್ತ ತಂದೆ ಕಮಲಾಕರ ಮೇಸ್ತ ವಿನಂತಿಯಂತೆ ಸಿಬಿಐ ತಾನು ಸಲ್ಲಿಸಿದ ಬಿ. ವರದಿಯನ್ನು ಪುನರ್ ಪರಶೀಲಿಸುವಂತೆ ಆದೇಶಿಸಲು ನ್ಯಾಯಾಲಯಕ್ಕೆ ಸರ್ಕಾರದ ಪರವಾಗಿ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಸಿಬಿಐ ನ್ಯಾಯಾಲಯಕ್ಕೆ ಬಿ. ರಿಪೋರ್ಟ್ ಸಲ್ಲಿಸಿದೆ. ಈ ಸಂದರ್ಭದಲ್ಲಿ ನಿಮ್ಮ ಅಭಿಪ್ರಾಯ ಏನು ಎಂದು ನಾವು ಕಮಲಾಕರ ಮೇಸ್ತ ಅವರ ಕುಟುಂಬದವರನ್ನು ಕೇಳಿದಾಗ ನಮ್ಮ ಮಗನ ಹತ್ಯೆಯಾಗಿದೆ. ಸಿಬಿಐ ನಡೆಸಿದ ತನಿಖೆಯಲ್ಲಿ ದೋಷಗಳಿವೆ. ಆದ್ದರಿಂದ ಕೂಲಂಕುಶವಾಗಿ ನಾವು ಹೇಳುವ ಅಂಶಗಳನ್ನು ಗಮನಿಸಿ ಪುನರ್ ತನಿಖೆ ಮಾಡಿಸಬೇಕು ಎಂದು ವಿನಂತಿಸಿದ್ದಾರೆ. ಅವರ ಪರವಾಗಿ ನಿಲ್ಲಲು ಪಕ್ಷ ತೀರ್ಮಾನಿಸಿದೆ. ಆದ್ದರಿಂದ ಬಿ. ರಿಪೋರ್ಟ್ ವರದಿ ಪಡೆದು ಮುಖ್ಯಮಂತ್ರಿಗಳೊಂದಿಗೆ ಮತ್ತು ಗೃಹಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಸರ್ಕಾರ ನಡೆದುಕೊಳ್ಳಲಿದೆ ಎಂದು ಸಚಿವರು ಹೇಳಿದ್ದಾರೆ.
ಇದಕ್ಕೆ ಶಾಸಕರ ಅಭಿಪ್ರಾಯವನ್ನು ಕೇಳಿದಾಗ ಶಾಸಕರು, ಪಕ್ಷಾಧ್ಯಕ್ಷರು, ವಿವಿಧ ಹುದ್ದೆಗಳಲ್ಲಿರುವ ಪಕ್ಷದ ಧುರೀಣರೊಂದಿಗೆ ಮಾತುಕತೆ ನಡೆಸಿ ಒಟ್ಟಾರೆ ಅಭಿಪ್ರಾಯವನ್ನು ಹೇಳಿದ್ದೇನೆ ಎಂದು ತಿಳಿಸಿದರು.
ಒಬ್ಬರು ಅಸಹಜ ಸಾವನ್ನಪ್ಪಿದರೆ ಅವರನ್ನು ಕಾರ್ಯಕರ್ತ ಎಂದು ಗುರುತಿಸಿ ಮತಕ್ಕೆ ಸಾವಿನ ಘಟನೆಯನ್ನು ಬಳಸಿಕೊಳ್ಳುವುದು ಪ್ರಜಾಪ್ರಭುತ್ವದಲ್ಲಿ ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಕಾರ್ಯಕರ್ತನಾಗಿದ್ದಲ್ಲಿ ಅವನ ಸಾವಿಗೆ ನ್ಯಾಯ ಸಿಗುವಂತೆ ಪ್ರಯತ್ನಿಸುವುದು ನಮ್ಮ ಧರ್ಮ, ಆ ಕೆಲಸ ಮಾಡಿದ್ದೇವೆ. ಅವರ ಅನಿಸಿಕೆಗೆ ಸ್ಪಂದಿಸಬೇಕಾದದ್ದು ನಮ್ಮ ಕರ್ತವ್ಯ. ರಾಜ್ಯದಲ್ಲಿ 23 ಅಸಹಜಸಾವುಗಳಲ್ಲಿ ಇಂತಹದು ನಡೆದಿದೆ. ನ್ಯಾಯ ಸಿಗಬೇಕಾದದ್ದು ಮುಖ್ಯ. ಅದಕ್ಕಾಗಿ ಬಿಜೆಪಿ ಹೋರಾಡುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಪಕ್ಷದ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ನಾಗರಾಜ ನಾಯ್ಕ, ಮಂಡಲಾಧ್ಯಕ್ಷ ರಾಜೇಶ ಭಂಡಾರಿ, ಕಾರ್ಯದರ್ಶಿ ಮಂಜುನಾಥ ನಾಯ್ಕ ಉಪಸ್ಥಿತರಿದ್ದರು.