ಪರೀಕ್ಷಾ ಸಿದ್ಧತೆಗೆ ಕ್ರಿಯಾಯೋಜನೆ ಮುಖ್ಯ

CUK
Published on

ಕಲಬುರಗಿ: ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನ್ಯಾಯಾಂಗ ಪರೀಕ್ಷೆಯ ಸಿದ್ಧತೆಗೆ ಕ್ರಿಯಾ ಯೋಜನೆ ಬಹಳ ಮುಖ್ಯ ಎಂದು ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ನಾಗಶ್ರೀ ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಾನೂನು ವಿಭಾಗ ಮತ್ತು ಅಧಿವಕ್ತ ಪರಿಷತ್ ಕರ್ನಾಟಕ ಉತ್ತರ (ಕಲಬುರಗಿ ಘಟಕ) ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸಿವಿಲ್ ನ್ಯಾಯಾಧೀಶರ ಮುಖ್ಯ ಪರೀಕ್ಷೆ ಮೂರು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಯೋಜನಾಬದ್ಧ ಸಿದ್ಧತೆಯು ಯಶಸ್ಸಿಗೆ ಕಾರಣವಾಗಲಿದೆ. ಆಕಾಂಕ್ಷಿಗಳು ಕೇವಲ ಪರೀಕ್ಷೆ ಪಾಸಾಗುವುದಕ್ಕೆ ಸೀಮಿತವಾಗದೆ ಜ್ಞಾನ ಪಡೆಯಲು ಅಧ್ಯಯನ ಮಾಡಬೇಕು. ಕೇವಲ ಉತ್ತೀರ್ಣರಾಗಲು ಸಾಕಾಗುವಷ್ಟು ಅಂಕಗಳಿಸುವ ಉದ್ದೇಶ ಹೊಂದಿರಬಾರದು. ಬದಲಿಗೆ ನೂರಕ್ಕೆ ನೂರು ಅಂಕ ಪಡೆಯುವ ಗುರಿ ಹೊಂದಿರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ಸಮಾಜ ಸುಸ್ಥಿತಿಯಲ್ಲಿಡುವಲ್ಲಿ ನ್ಯಾಯಾಂಗದ ಪಾತ್ರ ತುಂಬಾ ಮುಖ್ಯ. ಪ್ರಸ್ತುತ ದಿನಗಳಲ್ಲಿ ಎಲ್ಲ ಸಂಸ್ಥೆಗಳ ಗುಣಮಟ್ಟ ಹದಗೆಡುತ್ತಿದೆ. ವ್ಯವಸ್ಥೆ ಕಾಪಾಡುವುದು ನ್ಯಾಯಾಂಗದಿಂದ ಮಾತ್ರ ಸಾಧ್ಯ. ನ್ಯಾಯಾಂಗ, ಶಿಕ್ಷಣ ಸಂಸ್ಥೆಗಳು ಮತ್ತು ವೈದ್ಯರು ನಿರ್ಭಯ ಮತ್ತು ನಿಸ್ವಾರ್ಥವಾಗಿ ಕೆಲಸ ಮಾಡಿದಾಗ ಮಾತ್ರ ದೇಶ ನಿಜವಾದ ಅಭಿವೃದ್ಧಿ ಕಾಣಲು ಸಾಧ್ಯ. ಯಾವುದೇ ಬಾಹ್ಯ ಒತ್ತಡಕ್ಕೆ ಮಣಿಯಬಾರದು ಎಂದರು.

ಸಿಯುಕೆಯ ಕಾನೂನು ಮತ್ತು ನ್ಯಾಯಶಾಸ್ತç ಅಧ್ಯಯನ ನಿಕಾಯದ ಡೀನ್ ಡಾ.ಬಸವರಾಜ ಕುಬಕಡ್ಡಿ ಸ್ವಾಗತಿಸಿ, ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಹಾರೈಸಿದರು. ಕಡ್ಲೂರು ಸತ್ಯನಾರಾಯಣ ಆಚಾರ್, ಕಲಬುರಗಿ ವಕೀಲರ ಸಂಘದ ಕಾರ್ಯದರ್ಶಿ ಬಸವರಾಜ ನಾಶಿ, ನ್ಯಾಯಾಂಗ ತರಬೇತಿ ಪರೀಕ್ಷೆ ರಾಜ್ಯ ಸಂಚಾಲಕ ರಾಕೇಶ ಪಂಘAಟಿ ಇದ್ದರು. ಇಂದೂಧರ್ ಜಾಧವ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net