ಪರಿಸರ ಸ್ವಚ್ಛತೆಗೆ ಆದ್ಯತೆ ಅಗತ್ಯ

ITI
Published on

ಕಲಬುರಗಿ: ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಜತೆಗೆ ಪ್ಲಾಸ್ಟಿಕ್ ಮುಕ್ತ ಜೀವನ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಆದಮ್ ಪಟೇಲ್ ಕಿವಿಮಾತು ಹೇಳಿದರು.
ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಸರ್ಕಾರಿ ಐಟಿಐ (ಪುರುಷ) ಕಾಲೇಜು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟಿಯ ಶುದ್ಧ ಗಾಳಿ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಂಬರುವ ಗಣೇಶ ಹಬ್ಬದಲ್ಲಿ ಸಾರ್ವಜನಿಕರು ಮಣ್ಣಿನಿಂದ ಮಾಡಿದ ಗಣಪತಿ ಮನೆಯಲ್ಲಿ ಸ್ಥಾಪಿಸಬೇಕು. ಕಲಬುರಗಿ ನಗರವು ಕಳೆದ ವರ್ಷಕ್ಕಿಂತ ಈ ಬಾರಿ ವಾಯು ಮಾಲಿನ್ಯದಲ್ಲಿ ಶೇ.೧೪ರಷ್ಟು ಸುಧಾರಣೆ ಕಂಡಿದೆ ಎಂದರು.
ಕಾರ್ಯನಿರ್ವಾಹಕ ಅಭಿಯಂತರ ಕೆ.ಎಸ್.ಪಾಟೀಲ್ ಮಾತನಾಡಿ, ಕಲಬುರಗಿ ಮಹಾನಗರವನ್ನು ಮುಂಬರುವ ವರ್ಷದಲ್ಲಿ ಮಾಲಿನ್ಯ ಮುಕ್ತ ನಗರ ಮಾಡಲು ಪಾಲಿಕೆ ಸಾಕಷ್ಟು ಅಭಿವೃದ್ಧಿ ಕೆಲಸ, ಸಸಿ ನೆಡುವುದು, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮಹಾನಗರ ಪಾಲಿಕೆ ಉಪ ಆಯುಕ್ತ ಆರ್.ಪಿ.ಜಾಧವ್ ಮಾತನಾಡಿ, ನಗರ ಸ್ವಚ್ಛತೆಗೆ ಪಾಲಿಕೆಯಿಂದ ಸಾಕಷ್ಟು ಕೆಲಸ ಕಾರ್ಯ ಹಮ್ಮಿಕೊಳ್ಳಲಾಗುತ್ತಿದ್ದು, ಸೈಕಲ್ ಟ್ರಾö್ಯಕ್ ನಿರ್ಮಾಣ, ಪ್ಲಾಸ್ಟಿಕ್ ಬದಲಾಗಿ ಬಟ್ಟೆಯ ಚೀಲಗಳು ಬಳಸುವುದು, ಗಿಡಮರ ನೆಡಲಾಗುತ್ತಿದ್ದು, ನಗರ ಸ್ವಚ್ಛತೆಯಲ್ಲಿ ಪಾಲಿಕೆಯೊಂದಿಗೆ ಕೈ ಜೋಡಿಸಬೇಕು ಎಂದರು. ಐಟಿಐ ವಿಭಾಗದ ಜಂಟಿ ನಿರ್ದೇಶಕ ರವಿಂದ್ರನಾಥ ಬೆಳ್ಳಿ, ಕಾಲೇಜಿನ ಪ್ರಾಚಾರ್ಯ ಮುರಳೀಧರ ರತ್ನಗಿರಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net