

ಬಾಗಲಕೋಟೆ: ರೈತರಿಗೆ ಕಡಿಮೆ ಬೆಲೆಯಲ್ಲಿ, ಕಡಿಮೆ ಸಮಯದಲ್ಲಿ ಹೆಚ್ಚಿನ ಇಳುವರಿ ಕೊಡುವ ಪರಿಣಾಮಕಾರಿ ನ್ಯಾನೋ ಯೂರಿಯಾ-1 ಪರಿಸರ ಸ್ನೇಹಿ ರಸಗೊಬ್ಬರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗ ಕಳಸದ ಹೇಳಿದರು.
ತಾಲೂಕಿನ ಸೀಮಿಕೇರಿ ಗ್ರಾಮದ ಹತ್ತಿರ ಜಮೀನಿನಲ್ಲಿ ಸೋಮವಾರ ಡ್ರೋಣ ಯಂತ್ರೋಪಕರಣದ ಮೂಲಕ ಬೆಳೆಗೆ ಔಷಧಿ ಸಿಂಪಡಿಸಲು ಪ್ರಾಯೋಗಿಕವಾಗಿ ಚಾಲನೆ ನೀಡಿ ಮಾತನಾಡಿದ ಅವರು ನ್ಯಾನೋ ಯೂರಿಯಾವನ್ನು ಯಂತ್ರದ ಮೂಲಕ ಸಿಂಪಡಿಸುವದರಿಂದ ಎಕರೆಗೆ 9 ನಿಮಿಷ ಸಮಯ ಬೇಕಾಗುತ್ತದೆ. ಇದರಿಂದ ಕೂಲಿ ಕಾರ್ಮಿಕರ ವೇತನ ಹಾಗೂ ಸಮಯ ಉಳಿತಾಯವಾಗಲಿದೆ ಎಂದರು.
ಡ್ರೋಣ ಯಂತ್ರ 10 ಲಕ್ಷ ರೂ.ಗಳ ಬೆಲೆ ಬಾಳುತ್ತಿದ್ದು, ಔಷಧಿ ಸಿಂಪರಣೆಗೆ ಬಾಡಿಗೆ ದೊರೆಯಲಿದೆ. ಅಲ್ಲದೆ ಸ್ವಂತ ಖರೀದಿ ಮಾಡುವವರಿಗೆ ಸಹಾಯ ಧನ ಸಹ ನೀಡಲಾಗುತ್ತಿದೆ. ಸರ್ಕಾರದ ರೈತರಿಗೆ ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ರೈತರ ವಿದ್ಯಾನಿ ಯೋಜನೆಯಡಿ ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳು ವೇತನ ನೀಡಲಾಗುತ್ತಿದ್ದು, ಈ ಯೋಜನೆಯನ್ನು ಕೃಷಿ ಕಾರ್ಮಿಕರಿಗೆ ಸಹ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ವರ್ಷಕ್ಕೆ ಕೇಂದ್ರ ಸರ್ಕಾರದಿಂದ 6 ಸಾವಿರ ರೂ. ಹಾಗೂ ರಾಜ್ಯ ಸರ್ಕಾರದಿಂದ 4 ಸಾವಿರ ರೂ. ಸೇರಿ ಒಟ್ಟು 10 ಸಾವಿರ ರೂ.ಗಳನ್ನು ಪ್ರತಿ ವರ್ಷ ನೀಡಲಾಗುತ್ತದೆ. ಆದ್ದರಿಂದ ಈ ಕಾರ್ಯ ಪ್ರತಿ ವರ್ಷ ನವೀಕರಿಸಿ ಹಣ ಪಡೆಯುವುದು ರೈತರ ಕರ್ತವ್ಯವಾಗಿದೆ. ಈಗ ಹಣ ಡಿಬಿಟಿ ಮೂಲಕ ಜಮೆ ಯಾಗುತ್ತಿರುವದರಿಂದ ಇ-ಕೆವೈಸಿಗೆ ಆ.31 ಕೊನೆ ದಿನವಾಗಿದೆ. ಇ-ಕೆವೈಸಿ ಮಾಡಿಸದಿದ್ದಲ್ಲಿ ಹಣ ಜಮೆಯಾಗುವದಿಲ್ಲ ಎಂದು ಹೇಳಿದರು.
ಜಿ.ಪಂ ಸಿಇಒ ಟಿ.ಭೂಬಾಲನ್ ಮಾತನಾಡಿ, ನಾವು ಚಿಕ್ಕವರಿದ್ದಾಗ ಯೂರಿಯಾ ಹಾಕಿದರೆ ಭೂಮಿ ಹಾಳಾಗುತ್ತಿತ್ತು. ಅಲ್ಲದೆ ಸಮರ್ಪಕವಾಗಿ ಪ್ರತಿ ಬೆಳೆಗೆ ತಲುಪುತ್ತಿರಲಿಲ್ಲ. ಆ ಯೂರಿಯಾದಿಂದ ಕಸ ಬೆಳೆಯುವದರ ಜೊತೆಗೆ ಭೂಮಿ ಸವಳು ಜವಳು ಆಗುವ ಸಾಧ್ಯತೆ ಇದೆ. ಇದೀಗ ನ್ಯಾನೋ ಯೂರಿಯಾ ಸಿಂಪರಣೆ ಮಾಡುವದರಿಂದ ಇದು ಕೇವಲ ಬೆಳೆಗೆ ಸಿಂಪರಣೆ ಆಗುತ್ತಿದ್ದು, ಭೂಮಿಗೆ ಯಾವುದೇ ರೀತಿಯ ಹಾನಿ ಆಗುವದಿಲ್ಲ ಎಂದು ತಿಳಿಸಿದರು.
ಕೃಷಿ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಮಾತನಾಡಿ, ರೈತರು ಜಿಲ್ಲಾ ಕೃಷಿ ಕೇಂದ್ರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಯಾವುದೇ ವಿಧದಲ್ಲಿ ದಲ್ಲಾಲಿಗಳ ಮೊರೆ ಹೋಗಬಾರದು ಎಂದು ಹೇಳಿದರು.
ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಕೃಷಿ ಇಲಾಖೆಯ ಉಪನಿರ್ದೇಶಕ ಎಚ್.ಡಿ.ಕೊಳೇಕರ, ತಹಸೀಲ್ದಾರ ವಿನೋದಕುಮಾರ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಪಾಂಡಪ್ಪ ಲಮಾಣಿ, ಸಹಾಯಕ ಕೃಷಿ ಅಧಿಕಾರಿಗಳಾದ ಜಗದೀಶ ಹಾದಿಮನಿ, ಆರ್.ಎ.ಸುರಪುರ, ಕಂದಾಯ ನಿರೀಕ್ಷಕರಾದ ಪಿ.ಬಿ.ನಾಯಕ, ರವಿ ಕುಲ್ಲೊಳ್ಳಿ, ಗ್ರಾಮ ಲೆಕ್ಕಾಧಿಕಾರಿ ಶ್ರೀಕಾಂತ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.