

ಬೇಲೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ್ ಅಭಿಯಾನದಡಿ ಹಮ್ಮಿಕೊಂಡಿರುವ ‘ನನ್ನ ಲೈಫ್ ನನ್ನ ಸ್ವಚ್ಛ ನಗರ’ ಕಾರ್ಯಕ್ರಮಕ್ಕೆ ಶಾಸಕ ಎಚ್.ಕೆ.ಸುರೇಶ್ ಪುರಸಭೆ ಆವರಣದಲ್ಲಿ ಶನಿವಾರ ಚಾಲನೆ ನೀಡಿದರು.
ಪುರಸಭೆ ಹಾಗೂ ಹಸಿರು ಭೂಮಿ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಚ್.ಕೆ. ಸುರೇಶ್, ನನ್ನ ಲೈಫ್ ನನ್ನ ಸ್ವಚ್ಛ ನಗರ ಕಾರ್ಯಕ್ರಮದ ಪ್ರಮುಖ ಗುರಿ ಪರಿಸರ ಸಂರಕ್ಷಿಸುವ ಉದ್ದೇಶದಿಂದ ತ್ಯಾಜ್ಯದ ಪ್ರಮಾಣ ಕಡಿಮೆ ಮಾಡುವುದು, ತ್ಯಾಜ್ಯದ ಮರುಬಳಕೆ ಹಾಗೂ ತ್ಯಾಜ್ಯದ ಮರು ಉಪಯೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ ಎಂದು ಹೇಳಿದರು.
ಪಟ್ಟಣದ ನಾಗರಿಕರು ನಗರದಾದ್ಯಂತ ಸ್ಥಾಪಿಸಿರುವ ತ್ಯಾಜ್ಯ ಸಂಗ್ರಹ ಕೇಂದ್ರಗಳಲ್ಲಿ ಅನುಪಯುಕ್ತ ವಸ್ತುಗಳು, ತ್ಯಾಜ್ಯ, ಪ್ಲಾಸ್ಟಿಕ್ ಉತ್ಪನ್ನಗಳನ್ನು ನೀಡಿ ಸ್ವಚ್ಛತೆಗೆ ಸಹಕರಿಸಬೇಕಿದೆ. ಜತೆಗೆ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಪುರಸಭೆ ಅಧ್ಯಕ್ಷರು ಮತ್ತು ಸದಸ್ಯರು ಅಧಿಕಾರಿಗಳು ಸಹಕರಿಸಬೇಕು. ಬೇಲೂರು ಕ್ಷೇತ್ರದಲ್ಲಿ ವಿಶ್ವ ವಿಖ್ಯಾತ ದೇಗುಲ ಇರುವುದರಿಂದ ಇಲ್ಲಿ ಸ್ವಚ್ಛತೆಯಲ್ಲಿ ಹೊಸ ಭಾಷ್ಯ ಬರೆಯಬೇಕಿದೆ. ಕ್ಷೇತ್ರದ ಅಭಿವೃದ್ಧಿಗೆ 24 ಗಂಟೆ ಕೆಲಸ ಮಾಡುತ್ತೇನೆ. ಈ ಹಿಂದೆ ಏನಾಗಿತ್ತೋ ಗೊತ್ತಿಲ್ಲ. ಮುಂದೆ ಬೇಲೂರು ಭ್ರಷ್ಟಾಚಾರ ಮುಕ್ತ ಕ್ಷೇತ್ರವಾಗಬೇಕಿದೆ. ನಾವು ಇಲ್ಲಿ ಎಷ್ಟು ದಿನ ಅಧಿಕಾರ, ಆಡಳಿತ ಮಾಡುತ್ತೇವೆ ಮುಖ್ಯವಲ್ಲ. ಇದ್ದಷ್ಟು ದಿನ ನಾವು ಏನು ಸಾಧನೆ ಮಾಡಿದ್ದೇವೆ ಎಂಬುದೇ ಮುಖ್ಯ. ಪುರಸಭೆಯಿಂದ ಸರ್ಕಾರದ ಸವಲತ್ತುಗಳು ಅರ್ಹರಿಗೆ ಸಿಗುವಂತಾಗಬೇಕು. ಮಧ್ಯವರ್ತಿಗಳ ಹಾವಳಿ ನಿಲ್ಲಬೇಕು. ಪಾದರ್ಶಕ ಆಡಳಿತಕ್ಕೆ ಮುಂದಾಗೋಣ. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ವಿಶ್ವ ವಿಖ್ಯಾತ ಪ್ರವಾಸಿ ತಾಣ ಬೇಲೂರಿಗೆ ದಿನನಿತ್ಯ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಪುರಸಭೆಯಿಂದ ಸಾಧ್ಯವಾದಷ್ಟು ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ನವೀಕರಿಸಿ ಬಳಸಬಹುದಾದ ವಸ್ತುಗಳ ಉತ್ಪಾದನೆ ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರವನ್ನು ಕಾಪಾಡುವುದು ನಮ್ಮ ಉದ್ದೇಶ ಎಂದರು.
ಪುರಸಭೆ ಉಪಾಧ್ಯಕ್ಷೆ ಜಮೀಲಾ ತೌಫಿಕ್, ಸದಸ್ಯರಾದ ಶಾಂತಕುಮಾರ್, ಬಿ.ಗಿರೀಶ್, ಉಷಾ, ಸೌಮ್ಯಾ, ಮುಖ್ಯಾಧಿಕಾರಿ ಮಂಜುನಾಥ್, ಪರಿಸರ ಇಂಜಿನಿಯರ್ ಮಧುಸೂದನ್, ಹಸಿರು ಭೂಮಿ ಪ್ರತಿಷ್ಠಾನದ ಸೌಭಾಗ್ಯ, ಆಂತೋಣಿಸ್ವಾಮಿ ಇತರರಿದ್ದರು.