

ಹಿರೀಸಾವೆ: ಸಕಲ ಜೀವಸಂಕುಲಗಳಿಗೆ ನೆಲೆ ನೀಡಿರುವ ಪ್ರಕೃತಿಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದು ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ಹೋಬಳಿಯ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಕಬ್ಬಳಿ ಮಠದ ಆವರಣದಲ್ಲಿ ಅರಣ್ಯ ಇಲಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ಪರಿಸರ ಸಂರಕ್ಷಣೆ ಹಾಗೂ ಜಾಗೃತಿ ಆಂದೋಲನ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು.
ನಗರೀಕರಣ ಹಾಗೂ ಇತರ ನೆಪವೊಡ್ಡಿ ಅರಣ್ಯ ಪ್ರದೇಶವನ್ನು ನಾಶ ಮಾಡುತ್ತಿರುವ ಪರಿಣಾಮ ಪ್ರಕೃತಿ ವಿಕೋಪ, ಅನಾಹುತಗಳು ಸಂಭವಿಸುತ್ತಿದೆ. ಆದರೂ ಮರ-ಗಿಡಗಳ ಬುಡಕ್ಕೆ ಕೊಡಲಿ ಹಾಕುವ ಕೃತ್ಯ ಕಡಿಮೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹುಟ್ಟುಹಬ್ಬ, ನಾಮಕರಣ ಹಾಗೂ ಇತರ ಶುಭ ಕಾರ್ಯಗಳನ್ನು ದುಂದುವೆಚ್ಚ ಮಾಡಿ ಆಚರಿಸಿಕೊಳ್ಳುವುದರ ಬದಲು ನಮಗೆ ಬದುಕು ಕಟ್ಟಿಕೊಳ್ಳಲು ನೆಲೆ ನೀಡಿರುವ ಪ್ರಕೃತಿಯ ಮಡಿಲಿನಲ್ಲಿ ಹತ್ತಾರು ಸಸಿಗಳನ್ನು ನೆಡುವ ಮೂಲಕ ಆಚರಿಸಿಕೊಂಡರೆ ಪರಿಸರ ಅಭಿವೃದ್ಧಿಗೊಳಿಸಿದ ನೆಮ್ಮದಿ ಸಿಗಲಿದೆ ಎಂದು ಸಲಹೆ ನೀಡಿದರು.
ಪರಿಸರ ಪ್ರೇಮಿ ಸಿ.ಎನ್.ಅಶೋಕ್ ಮಾತನಾಡಿ, ಪರಿಸರವನ್ನು ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ರಸ್ತೆಬದಿ, ಸರ್ಕಾರಿ ಗುಂಡುತೋಪು, ಶಾಲಾ ಹಾಗೂ ದೇಗುಲಗಳ ಆವರಣದಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯವಾಗಬೇಕು. ಅಲ್ಲದೇ, ರೈತರು ತಮ್ಮ ಜಮೀನುಗಳಲ್ಲಿ ಬೆಳೆ ಬೆಳೆಯಲು ಸಮಸ್ಯೆಯಾಗದಂತೆ ಅಗತ್ಯ ಸಸಿಗಳನ್ನು ನೆಡುವ ಮೂಲಕ ಪರಿಸರ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಶ್ರೀ ಕ್ಷೇತ್ರದ ಆವರಣದಲ್ಲಿ ವಿವಿಧ ಪ್ರಭೇದದ ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಎಸಿಎಫ್ ಚಂದ್ರಶೇಖರ್, ಅರಣ್ಯಾಧಿಕಾರಿ ಜೆ.ಎಂ.ಪಲ್ಲವಿ, ಆರ್‌ಎಫ್‌ಒ ರಶ್ಮಿ, ಬಿಎಫ್‌ಒ ಲೋಕೇಶ್, ಮೈಲಾರಯ್ಯ, ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕ ಟಿ.ತಿಮ್ಮೇಗೌಡ ಹಾಗೂ ವಿದ್ಯಾರ್ಥಿಗಳು ಇದ್ದರು.