

ಬಾಗಲಕೋಟೆ: ವೃಕ್ಷಗಳನ್ನು ನಾವು ರಕ್ಷಿಸಿದರೆ,ಉತ್ತಮ ಪರಿಸರವನ್ನು ನೀಡುವದರ ಮೂಲಕ ಅವುಗಳು ನಮ್ಮನ್ನು ರಕ್ಷಿಸುತ್ತವೆ ಎಂದು ಕಾಲೇಜು ಉಪವಿಭಾಗದ ಅಧ್ಯಕ್ಷ ಡಾ.ಪಿ.ಆರ್ ಜೋಶಿ ಹೇಳಿದರು.
ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕ ೧ ಮತ್ತು ೨ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಿಡ-ಮರಗಳ ಪೋಷಣೆ ಹಾಗೂ ರಕ್ಷಣೆಯನ್ನು ಮಾಡುವದು ಎಲ್ಲರ ಜವಾಬ್ದಾರಿ. ವಿದ್ಯಾರ್ಥಿಗಳು ಉದ್ಯಾನವನದಲ್ಲಿ ನೆಟ್ಟ ಸಸಿಗಳ ಮೇಲ್ವಿಚಾರಣೆಯನ್ನು ಮಾಡಿ, ಅವು ಉತ್ತಮ ರೀತಿಯಲ್ಲಿ ಬೆಳೆಯುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿ, ಜಾಗತಿಕ ತಾಪಮಾನ,ಹವಾಮಾನ ಬದಲಾವಣೆ, ಅರಣ್ಯನಾಶ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸುವುದರ ಸಲುವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಯುವಕರು ಇಂತಹ ದಿನಾಚರಣೆಗಳ ಆಶಯವನ್ನು ಈಡೇರಿಸುವ ಪ್ರಯತ್ನ ಮಾಡಬೇಕು.
ಮನುಷ್ಯನಿಗೆ ಬೇಕಾಗುವ ಎಲ್ಲ ಸಂಪನ್ಮೂಲಗಳನ್ನು ಉದಾರವಾಗಿ ನೀಡುವ ಭೂಮಿತಾಯಿಯನ್ನು ರಕ್ಷಿಸುವ ಜವಾಬ್ದಾರಿ ನಮ್ಮದು. ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಪರಿಸರವನ್ನು ಉಳಿಸಿ-ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕು. ಉಳಿದವರಿಗೂ ಈ ವಿಷಯದ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಎನ್‌ಎಸ್‌ಎಸ್ ಅಧಿಕಾರಿ ಎನ್.ಎಚ್.ಹಸಬಿ, ಐ.ಕ್ಯೂ.ಎ.ಸಿ ಸಂಯೋಜಕ ಎಚ್.ಎಸ್.ಗಿಡಗಂಟಿ ಇತರರು ಇದ್ದರು.