ಪರಿಸರ ಪೂರಕ ಚಟುವಟಿಕೆ ಕೈಗೊಳ್ಳಿ

1SIRSI1
Published on

ಶಿರಸಿ: ಗ್ರಾಮ ಅರಣ್ಯ ಸಮಿತಿಗಳು ಕೇವಲ ನೆಡುತೋಪಿನ ಆದಾಯದ ಮೇಲೆ ಅವಲಂಬಿತವಾಗದೆ, ಪರಿಸರ ಪೂರಕ ನೂತನ ಚಟುವಟಿಕೆ ಕೈಗೊಂಡರೆ ಇನ್ನಷ್ಟು ಅಭಿವೃದ್ಧಿ ಸಾಧಿಸಬಹುದು ಎಂದು ಸಿಸಿಎಫ್ ಯತೀಶಕುಮಾರ ಹೇಳಿದರು.

ಅರಣ್ಯ ಇಲಾಖೆಯ ‘ಪಾಲಿಸಿದರೆ ಪಾಲು’ ಯೋಜನೆಯಡಿ ತಾಲೂಕಿನ ಮಂಜುಗುಣಿಯಲ್ಲಿ ಸೋಮವಾರ ಶಿರಸಿ ವಿಭಾಗದ 14 ಗ್ರಾಮ ಅರಣ್ಯ ಸಮಿತಿಗಳಿಗೆ 46.81 ಲಕ್ಷ ರೂ. ಲಾಭಾಂಶ ಹಂಚಿಕೆ ಮತ್ತು ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 1990ರ ದಶಕದಲ್ಲಿ ಒತ್ತಾಯ ಪೂರ್ವಕವಾಗಿ ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಬೇಕಿತ್ತು. ಆದರೀಗ ವಾತಾವರಣ ಬದಲಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಸಮಿತಿಗಳು ರಚನೆಗೊಂಡಿವೆ. ಕೆನರಾ ವೃತ್ತದ 6 ಅರಣ್ಯ ವಿಭಾಗದಿಂದ 636 ಗ್ರಾಮ ಅರಣ್ಯ ಸಮಿತಿಗಳಿವೆ. ಈವರೆಗೆ 31.14 ಕೋಟಿ ರೂ. ಲಾಭಾಂಶವನ್ನು ಇಲಾಖೆಯಿಂದ ನೀಡಲಾಗಿದೆ. ಪ್ರಸ್ತುತ ಕೆಲ ಜಾತಿಯ ಮರಗಳ ಉತ್ಪನ್ನಗಳಿಗೆ ಮಾತ್ರ ಲಾಭಾಂಶ ನೀಡುತ್ತಿದ್ದು, ಆಯ್ದ ಕೆಲ ಮರಗಳ ಲಾಭಾಂಶ ನೀಡಲಾಗುತ್ತಿಲ್ಲ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಒಪ್ಪಿಗೆ ಸಿಕ್ಕರೆ ಸಮಿತಿಗಳಿಗೆ ಇನ್ನಷ್ಟು ಬಲ ಬರಲಿದೆ ಎಂದರು.

ಗ್ರಾಮ ಅರಣ್ಯ ಸಮಿತಿಗಳು ಈವರೆಗೆ ನಡೆಸಿದ ಚಟುವಟಿಕೆ ಜತೆ ಪರಿಸರಕ್ಕೆ ಹೊರೆಯಾಗದ ಹೊಸ ಮಾದರಿಗಳನ್ನು ಪರಿಚಯಿಸಬೇಕು ಎಂದರು.

ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಮಾತನಾಡಿ, ಜೀವ ವೈವಿಧ್ಯತೆಗಳ ರಕ್ಷಣೆ ಹೆಚ್ಚಬೇಕು. ಘಟ್ಟ ಪ್ರದೇಶಗಳಲ್ಲಿ ಅಕೇಶಿಯಾ ನೆಡದೆ ನೈಸರ್ಗಿಕ ಗಿಡಗಳನ್ನು ಬೆಳೆಸಬೇಕು. ಪ್ರತೀ ಗ್ರಾಮ ಅರಣ್ಯ ಸಮಿತಿ ವ್ಯಾಪ್ತಿಯಲ್ಲಿ ಕಣಿವೆ ಅರಣ್ಯಗಳ ರಚನೆ ಆಗಬೇಕು ಎಂದರು.

ಮಂಜುಗುಣಿ ಗ್ರಾಮ ಅರಣ್ಯ ಸಮಿತಿಯ 32.50 ಲಕ್ಷ ರೂ. ವೆಚ್ಚದ ವನಸಿರಿ ಸಭಾಭವನ ಹಾಗೂ 1 ಲಕ್ಷ ರೂ. ವೆಚ್ಚದ ತೆಪ್ಪಾರ ಗ್ರಾಮ ಅರಣ್ಯ ಸಮಿತಿ ಬಸ್ ತಂಗುದಾಣ, 40 ಲಕ್ಷ ರೂ. ವೆಚ್ಚದ ಮಂಜುಗುಣಿ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಈ ವೇಳೆ ವಿಧಾನಸಭಾಧ್ಯಕ್ಷರು ಉದ್ಘಾಟಿಸಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ ಹೆಗಡೆ, ಮಂಜುಗುಣಿ ಗ್ರಾಪಂ ಅಧ್ಯಕ್ಷೆ ಕಾವೇರಿ ಗೌಡ, ತಾಪಂ ಸದಸ್ಯೆ ಸರೋಜಾ ಭಟ್ಟ, ಮಂಜುಗುಣಿ ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ, ಹಳಿಯಾಳ ವಿಭಾಗದ ಡಿಎಫ್​ಒ ಅಜ್ಜಯ್ಯ, ಮಂಜುಗುಣಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಗಣಪತಿ ನಾಯ್ಕ, ಪ್ರವೀಣ ಗೌಡ, ದೇವರಾಜ ಮರಾಠಿ ಇತರರಿದ್ದರು.

ಶಿರಸಿ ಡಿಎಫ್​ಒ ಎಸ್.ಜಿ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗಶ್ರೀ ಭಟ್ಟ ಪ್ರಾರ್ಥಿಸಿದರು. ಜಾನ್ಮನೆ ಆರ್​ಎಫ್​ಒ ಪವಿತ್ರಾ ಯು.ಜೆ. ಸ್ವಾಗತಿಸಿದರು. ಎಸಿಎಫ್ ಡಿ. ರಘು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net