

ಸುಭಾಸ ಧೂಪದಹೊಂಡ ಕಾರವಾರ
ಶಿರಸಿ-ಕುಮಟಾ ನಡುವೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅನುಮೋದನೆ ನೀಡಲು ಆಯ್ದ ಸ್ಥಳಗಳಲ್ಲಿ ರಸ್ತೆಯ ಅಗಲ ಕಡಿಮೆ ಮಾಡುವಂತೆ ಅರಣ್ಯ ಮಂತ್ರಾಲಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ)ಕ್ಕೆ ಷರತ್ತು ವಿಧಿಸಿದೆ. ಅದರಂತೆ ಪರಿಷ್ಕೃತ ಯೋಜನೆ ಸಿದ್ಧಪಡಿಸಿ ಸರ್ವೆ ಕಾರ್ಯ ನಡೆಸಿದ ಎನ್ಎಚ್ಎಐ ಅರಣ್ಯ ಇಲಾಖೆಗೆ ಮರು ಪ್ರಸ್ತಾವನೆ ಸಲ್ಲಿಸಿದೆ. ಶೀಘ್ರದಲ್ಲಿ ಯೋಜನೆಗೆ ಅರಣ್ಯ ಇಲಾಖೆ ಅನುಮೋದನೆ ದೊರೆಯುವ ನಿರೀಕ್ಷೆ ಇದೆ.
ಶಿರಸಿ-ಕುಮಟಾ ರಾಜ್ಯ ಹೆದ್ದಾರಿ 69ನ್ನು ರಾಷ್ಟ್ರೀಯ ಹೆದ್ದಾರಿ 766-ಇ ಎಂದು ಹೆಸರಿಸಿ ಮೇಲ್ದರ್ಜೆಗೇರಿಸಲಾಗಿದೆ. ರಸ್ತೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಧಾರವಾಡ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಭಾರತಮಾಲಾ ಯೋಜನೆ ಭಾಗ 1 ರಲ್ಲಿ ಒಟ್ಟು 440.16 ಕೋಟಿ ರೂ. ವೆಚ್ಚದಲ್ಲಿ ಶಿರಸಿಯ ಐದು ರಸ್ತೆ ವೃತ್ತದಿಂದ ಕುಮಟಾ ದೀವಗಿ ಸೇತುವೆವರೆಗೆ 60 ಕಿಮೀ ಹಾಗೂ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಟ್ಟಿಕೇರಿಯಿಂದ ಬೇಲೆಕೇರಿ ಬಂದರುವರೆಗೆ 4.256 ಕಿಮೀಯನ್ನು ದ್ವಿಪಥವಾಗಿ ವಿಸ್ತರಿಸಲು 2017 ರಲ್ಲೇ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಟೆಂಡರ್ ಕೂಡ ಆಗಿದೆ. ಆದರೆ, ಯೋಜನೆಗೆ ಅರಣ್ಯ ಇಲಾಖೆ ಅನುಮೋದನೆ ಇದುವರೆಗೂ ದೊರೆತಿಲ್ಲ.
ಮಂತ್ರಾಲಯ ಚೌಕಾಶಿ: ದೇವಿಮನೆ ಘಟ್ಟದಂಥ ಅತಿ ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಹೆದ್ದಾರಿ ಹಾದು ಹೋಗಲಿದೆ. 10 ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯಬೇಕಿದೆ. ಇದರಿಂದ ಯೋಜನೆಗೆ ಅನುಮೋದನೆ ನೀಡಲು ಅರಣ್ಯ ಮಂತ್ರಾಲಯ ಮೀನಮೇಷ ಎಣಿಸುತ್ತಿದೆ. 2018 ರ ಡಿಸೆಂಬರ್ನಿಂದ ಪ್ರಸಕ್ತ ಆಗಸ್ಟ್ 20ರವರೆಗೆ ಅರಣ್ಯ ಇಲಾಖೆ ವಿವಿಧ ಕಚೇರಿಗಳು ಹಾಗೂ ಎನ್ಎಚ್ಎಐ ನಡುವೆ 85 ಕ್ಕೂ ಹೆಚ್ಚು ಬಾರಿ ಪತ್ರ ವ್ಯವಹಾರ ನಡೆದ ದಾಖಲೆಗಳು ಅರಣ್ಯ ಮಂತ್ರಾಲಯದ ಪರಿವೇಶ್ ವೆಬ್ಸೈಟ್ನಲ್ಲಿ ದಾಖಲಾಗಿವೆ. ಈಗ ಅನುಮೋದನೆ ಅಂತಿಮ ಹಂತಕ್ಕೆ ಬಂದಿದೆ.
ಪ್ರಾರಂಭದಲ್ಲಿ ಎನ್ಎಚ್ಎಐ ಈ ಯೋಜನೆಗಾಗಿ ತಮಗೆ ಒಟ್ಟು 39.84 ಹೆಕ್ಟೇರ್ ಅರಣ್ಯ ಹಾಗೂ 8.39 ಹೆಕ್ಟೇರ್ ಅರಣ್ಯೇತರ ಜಮೀನು ಬೇಕು ಎಂದು ಅರಣ್ಯ ಮಂತ್ರಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈಗ ಅದನ್ನು ಶಿರಸಿ ಅರಣ್ಯ ವಿಭಾಗದಲ್ಲಿ 13.36 ಹಾಗೂ ಹೊನ್ನಾವರ ವಿಭಾಗದಲ್ಲಿ 15.88 ಹೆಕ್ಟೇರ್ ಸೇರಿ ಒಟ್ಟು 29.244 ಹೆಕ್ಟೇರ್ಗೆ ಇಳಿಸಲಾಗಿದೆ. ಮತ್ತಷ್ಟು ಇಳಿಕೆ ಮಾಡುವ ಬಗ್ಗೆ ಮಂತ್ರಾಲಯ ಚೌಕಾಶಿ ನಡೆಸಿದೆ.
10 ಸಾವಿರ ಮರಗಳ ಹನನ ಎನ್ಎಎಚ್ಎಐ ನಡೆಸಿದ ಪ್ರಾಥಮಿಕ ಸರ್ವೆಯಂತೆ ಹೊನ್ನಾವರ ಹಾಗೂ ಅರಣ್ಯ ಶಿರಸಿ ವಿಭಾಗದ ವ್ಯಾಪ್ತಿಯಲ್ಲಿ ಹೆದ್ದಾರಿಗಾಗಿ ಒಟ್ಟು 10,185 ಮರಗಳನ್ನು ಕಡಿಯಬೇಕಾಗುತ್ತದೆ. ಅದರಲ್ಲಿ 0 ದಿಂದ 30 ಸೆಂಮೀ ಗಾತ್ರದ 2856 ಮರಗಳು, 31 ರಿಂದ 60 ಸೆಂಮೀ ಗಾತ್ರದ 4471 ಮರಗಳು. 61 ರಿಂದ 90 ಸೆಂಮೀ ಗಾತ್ರದ 1775 ಮರಗಳು, 91 ರಿಂದ 120 ಸೆಂಮೀ ಗಾತ್ರದ 636 ಮರಗಳು, 121 ರಿಂದ 150 ಸೆಂಮೀ ಗಾತ್ರದ 269 ಮರಗಳು ಹಾಗೂ 150 ಸೆಂಮೀಗಿಂತ ಹೆಚ್ಚು ದೊಡ್ಡದಾದ 178 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿಯಬೇಕಿರುವುದರಿಂದ ಯೋಜನೆ ಕೈಬಿಡಬೇಕು ಎಂದು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಅದಕ್ಕಾಕ್ಕಾಗಿ ಕತಗಾಲ ಅರಣ್ಯ ವಲಯ ವ್ಯಾಪ್ತಿಯ ಸಂಡಳ್ಳಿ, ಮತ್ತಳ್ಳಿ ಅರಣ್ಯದಲ್ಲಿ 38.39 ಹೆಕ್ಟೇರ್ ಅರಣ್ಯವನ್ನು 1.20 ಕೋಟಿ ರೂ. ವೆಚ್ಚದಲ್ಲಿ ಬೆಳೆಸುವುದಾಗಿ ಎನ್ಎಚ್ಎಐ ಅರಣ್ಯ ಇಲಾಖೆಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದೆ.
ಶಿರಸಿ-ಕುಮಟಾ ರಸ್ತೆ ವಿಸ್ತರಣೆಗೆ ಜಿಲ್ಲಾಡಳಿತದಿಂದ ಎಲ್ಲ ಅನುಮೋದನೆ ನೀಡಲಾಗಿದೆ. ಅರಣ್ಯ ಇಲಾಖೆಯ ಅಂತಿಮ ಅನುಮೋದನೆ ದೊರೆತರೆ ಮಳೆಗಾಲ ಮುಗಿದ ನಂತರ ಕಾಮಗಾರಿ ಪ್ರಾರಂಭವಾಗುವ ಸಾಧ್ಯತೆ ಇದೆ. ಕಾಮಗಾರಿಗಾಗಿ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡುವ ಯಾವುದೇ ಪ್ರಸ್ತಾಪ ಇದುವರೆಗೂ ಇಲ್ಲ. ಮೊದಲು ಖಾಲಿ ಸ್ಥಳಗಳಲ್ಲಿ ರಸ್ತೆ ಕಾಮಗಾರಿ ನಡೆಸುವ ಕುರಿತು ರ್ಚಚಿಸಲಾಗಿದೆ. | ಡಾ. ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ, ಉತ್ತರ ಕನ್ನಡ
ಬದಲಾವಣೆ ಏನು ..? ಒಟ್ಟು 64 ಕಿಮೀ ರಾಷ್ಟ್ರೀಯ ಹೆದ್ದಾರಿಯನ್ನು ಚರಂಡಿ ಸೇರಿ 20 ಮೀಟರ್ ವಿಸ್ತರಣೆಗೆ ಎನ್ಎಚ್ಎಐ ಯೋಜಿಸಿದೆ. ದೇವಿಮನೆ ಘಟ್ಟದಲ್ಲಿ ಅತಿ ಸೂಕ್ಷ್ಮ ಸಸ್ಯಗಳಿವೆ. ಅಲ್ಲದೆ, ಘಟ್ಟದ ಪ್ರದೇಶವಾಗಿದ್ದರಿಂದ ಕೆಲವೆಡೆ ಗುಡ್ಡ ಕುಸಿಯುವ ಸಾಧ್ಯತೆ ಇದೆ. ಇದರಿಂದ ಹೆದ್ದಾರಿಯ ಅಗಲವನ್ನು ಆಯ್ದ ಸ್ಥಳಗಳಲ್ಲಿ 15 ಮೀಟರ್ಗೆ ಇಳಿಸುವಂತೆ ಮಂತ್ರಾಲಯ ಸೂಚಿಸಿದೆ. ಇನ್ನು ವನ್ಯಜೀವಿಗಳ, ಔಷಧಿ ಸಸ್ಯಗಳ ವನ, ಸಿಂಗಳಿಕ ಸಂರಕ್ಷಿತ ತಾಣ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ. ಅಪರೂಪದ ಕರಿ ಚಿರತೆಗಳ ತಾಣವಾಗಿದೆ. ಅವುಗಳ ರಕ್ಷಣೆಗೆ ಯಾವ ಕ್ರಮ ವಹಿಸಲಾಗಿದೆ ಎಂದು ಮಂತ್ರಾಲಯ ಪ್ರಾಧಿಕಾರದಿಂದ ಸ್ಪಷ್ಟನೆ ಕೇಳಿದೆ ಎಂದು ಡಿಎಫ್ಒ ಕೆ.ಗಣಪತಿ ತಿಳಿಸಿದ್ದಾರೆ.