ಪರಿಷ್ಕರಣೆಗೆ ವಿಶೇಷ ಅಭಿಯಾನ

bkt-9-1
ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್‌ಕುಮಾರ ಅಧ್ಯಕ್ಷತೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಭೆ ಜರುಗಿತು.
Published on

ಬಾಗಲಕೋಟೆ: ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣಾ ಕಾರ್ಯ ಪ್ರಾರಂಭಿಸಲಾಗಿದ್ದು, ಪರಿಷ್ಕರಣೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್‌ಕುಮಾರ ಹೇಳಿದರು.


ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಹಮ್ಮಿಕೊಂಡಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನವರಿ ೧, ೨೦೨೩ರ ಅರ್ಹತಾ ದಿನಾಂಕವನ್ನು ಆಧರಿಸಿ ಸಾರ್ವಜನಿಕರ ವೀಕ್ಷಣೆಗೆ ಕರಡು ಮತದಾರರ ಪಟ್ಟಿಯನ್ನು ತಹಸೀಲ್ದಾರ ಕಚೇರಿ, ಗ್ರಾಮ ಚಾವಡಿಗಳಲ್ಲಿ ಪ್ರಕಟಿಸಲಾಗಿದೆ. ಕರಡು ಪಟ್ಟಿಯನ್ನು ಪರೀಕ್ಷಿಸಿ ಹೊಸದಾರ ಹೆಸರು ಸೇರ್ಪಡೆ, ಪರಿಷ್ಕರಣೆ ಇದ್ದಲ್ಲಿ ಅವಶ್ಯವಿರುವ ದಾಖಲೆಗಳೊಂದಿಗೆ ಡಿ.೮ ವರೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದರು.


ಕರಡು ಮತದಾರರ ಪಟ್ಟಿಯನ್ನು ನ.೯ ರಂದು ಪ್ರಕಟಿಸಲಾಗಿದ್ದು, ಹಕ್ಕು ಮತ್ತು ಆಕ್ಷೇಣೆಗಳನ್ನು ಸಲ್ಲಿಸಲು ಡಿ.೮ ಕೊನೆಯ ದಿನವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ನ.೧೨ ಮತ್ತು ೨೦, ಡಿಸೆಂಬರ ೩ ಮತ್ತು ೪ ರಂದು ವಿಶೇಷ ಅಭಿಯಾನ ಸಹ ಹಮ್ಮಿಕೊಳ್ಳಲಾಗುತ್ತಿದೆ. ಅಂತಿಮ ಮತದಾರರ ಪಟ್ಟಿಯನ್ನು ಜನವರಿ ೫, ೨೦೨೩ ರಂದು ಪ್ರಕಟಿಸಲಾಗುತ್ತಿದೆ. ವೂಟರ್ ಹೆಲ್ಪಲೈನ್ ಆ್ಯಪ್ ಮೂಲಕವು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.


ಶುದ್ಧವಾದ ಮತದಾರರ ಪಟ್ಟಿ ತಯಾರಿಕೆ ಕಾರ್ಯದಲ್ಲಿ ವಿವಿಧ ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಾಗಿದೆ. ಈ ಕಾರ್ಯದಲ್ಲಿ ಮತಗಟ್ಟೆ ಮಟ್ಟದ ಅಽಕಾರಿಗಳಿಗೆ ಸಹಕಾರ ನೀಡಲು ತಿಳಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ನಮೂನೆ ೬ರಲ್ಲಿ, ಮತದಾರರ ಪಟ್ಟಿಯಿಂದ ತೆಗೆದು ಹಾಕಲು ನಮೂನೆ ೭ ಹಾಗೂ ತಿದ್ದುಪಡಿ, ಒಂದು ಮತಕ್ಷೇತ್ರದಿಂದ ಮತ್ತೊಂದು ಮತಕ್ಷೇತ್ರಕ್ಕೆ ವರ್ಗಾವಣೆಗೆ ಮಾಡಲು ನಮೂನೆ ೮ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ ೯, ೨೦೨೨ಕ್ಕೆ ಮತದಾರರ ಪಟ್ಟಿಯಲ್ಲಿ ಇದ್ದಂತೆ ಜಿಲ್ಲೆಯಲ್ಲಿ ಒಟ್ಟು ೧೪೮೬೧೯೬ ಮತದಾರರಿದ್ದು, ಅದರಲ್ಲಿ ಪುರುಷ ಮತದಾರರು ೭೪೨೧೨೪, ಮಹಿಳಾ ಮತದಾರರು ೭೪೪೦೦೦ ಇದ್ದಾರೆ ಎಂದರು.


ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಚುನಾವಣಾ ತಹಸೀಲ್ದಾರ ಎಸ್.ಎಸ್.ನಾಯ್ಕಲಮಠ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಸ್.ಜಿ.ನಂಜಯ್ಯನಮಠ, ಯಲ್ಲಪ್ಪ ಸನಕ್ಯಾನವರ, ಅಶೋಕ ರಾಜಾಪೂರ, ಯಲ್ಲಪ್ಪ ಸಿಂಧೆ, ಶಿಲ್ಪಿ ಆನಂದ, ಮಲ್ಲಿಕಾರ್ಜುನ ಕಾಂಬಳೆ, ಶಿವಾನಂದ ಸುರಪೂರ, ಕೃಷ್ಣಾ ಪಾಟೀಲ, ರಾಜೇಸಾಬ ದಂಡಿನ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net