ಪರಿಶಿಷ್ಟರಿಗೆ ಸರ್ಕಾರದ ಸವಲತ್ತು ತಲುಪಿಸಿ

IMG_20250518_140052
Published on

ಅರಸೀಕೆರೆ: ಪರಿಶಿಷ್ಟ ಜಾತಿ, ಪಂಗಡದ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಎಲ್ಲ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ನಗರದ ವೆಂಕಟೇಶ್ವರ ಕಲಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪಂಗಡದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ತೋಟಗಾರಿಕೆ ಇಲಾಖೆಯಲ್ಲಿ ಟ್ರ್ಯಾಕ್ಟರ್ ವಿತರಣೆಯಲ್ಲಿ ಲೋಪವಾಗಿದೆ ಎನ್ನುವ ದೂರುಗಳು ಕೇಳಿ ಬಂದಿವೆ. ಸರ್ಕಾರದ ಸವಲತ್ತು ಅರ್ಹ ಪರಿಶಿಷ್ಟ ಜಾತಿ/ಪಂಗಡದ ಬಡವರಿಗೆ ತಲುಪಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ತಪ್ಪು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಹಿಂದೇಟು ಹಾಕುವುದಿಲ್ಲ ಎಂದರು.

ತಕ್ಷಣವೇ ಉತ್ತರಿಸಿದ ಎಡಿಎ ಸೀಮಾ ಪರಿಶೀಲನೆ ನಡೆಸಿ ವರದಿ ನೀಡುವುದಾಗಿ ತಿಳಿಸಿದರು. ಭೂ ಅಭಿವೃದ್ಧಿ ಬ್ಯಾಂಕಿನಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರ ಷೇರು ಸ್ವೀಕಾರ ಮಾಡದೆ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎ.ಪಿ.ಚಂದ್ರಯ್ಯ ದೂರಿದರು.

ಪರಿಶಿಷ್ಟ ಜಾತಿ, ಪಂಗಡದ ಅನುದಾನವನ್ನು ಆಯಾ ಸಮುದಾಯಕ್ಕೆ ಖರ್ಚು ಮಾಡಬೇಕು. ಇದರಲ್ಲಿ ಲೋಪವಾದರೆ ಸಹಿಸುವುದಿಲ್ಲ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಖಂಡರಾದ ಕರಿಯಪ್ಪ, ಶಿವಮೂರ್ತಿ, ಮಂಜುನಾಥ್ ಸೇರಿದಂತೆ ಹಲವು ವಿವಿಧ ಇಲಾಖೆಗಳ ಕುಂದುಕೊರತೆಗಳನ್ನು ಸಭೆಯ ಗಮನಕ್ಕೆ ತಂದರು. ತಹಸೀಲ್ದಾರ್ ಎಂ.ಜಿ.ಸಂತೋಷ್‌ಕುಮಾರ್, ತಾಪಂ ಇಒ ಸತೀಶ್, ಡಿವೈಎಸ್ಪಿ ಲೋಕೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಶಿವಮೂರ್ತಿ, ಪೌರಾಯುಕ್ತ ಕೃಷ್ಣಮೂರ್ತಿ, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net