ಪರಸನಹಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ

PROTEST 1
Published on

ಹೊಳೆನರಸೀಪುರ: ಪರಸನಹಳ್ಳಿ ಗ್ರಾಮದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯುವುದನ್ನು ವಿರೋಧಿಸಿ ಮಳಲಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಮಹಿಳೆಯರು ಹಾಗೂ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ನಡೆಸಿದರು.

ತಾಲೂಕು ಹಳೆಕೋಟೆ ಹೋಬಳಿ ಮಳಲಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಬುಧವಾರ ಸುಮಾರು 200ಕ್ಕೂ ಹೆಚ್ಚು ಮಹಿಳೆಯರು ಹಾಗೂ ಗ್ರಾಮಸ್ಥರು ಸೇರಿ ಪರಸನಹಳ್ಳಿ ಗ್ರಾಮದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯಬಾರದೆಂದು ಹಾಗೂ ಇದಕ್ಕೆ ಗ್ರಾಮ ಪಂಚಾಯಿತಿ ಕಚೇರಿಯಿಂದ ಅನುಮತಿ ಕೊಡಬಾರದೆಂದು ಆಗ್ರಹಿಸಿದರು.

ಮಳಲಿ ಗ್ರಾಮದಲ್ಲಿ ಪ್ರಸಿದ್ಧ ಶ್ರೀಲಕ್ಷ್ಮಿದೇವಿ ದೇವಸ್ಥಾನವಿದ್ದು, ಭಾನುವಾರ, ಮಂಗಳವಾರ, ಶುಕ್ರವಾರ ಸಾವಿರಾರು ಭಕ್ತರು ಬಂದು ಕುರಿ, ಕೋಳಿ ನೀಡಿ ಹರಕೆ ತೀರಿಸುತ್ತಾರೆ ಹಾಗೂ ಮದುವೆ, ಬೀಗರ ಔತಣ ಇತರ ಕಾರ್ಯಗಳನ್ನು ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಇಲ್ಲಿಂದ 1ಕಿ.ಮೀ.ದೂರದ ಪರಸನಹಳ್ಳಿ ಗ್ರಾಮದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯಲು ಪರಸನಹಳ್ಳಿ ಗ್ರಾಮದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸ್ವಾಮಿ ಗೋವಿಂದೇಗೌಡ ಅನುಮತಿ ಕೋರಿ ಮಳಲಿ ಗ್ರಾಮ ಪಂಚಾಯಿತಿಗೆ 15 ದಿನಗಳ ಹಿಂದೆಯೇ ಅರ್ಜಿ ಸಲ್ಲಿದ್ದಾರೆ. ಪರಸನಹಳ್ಳಿ ಗ್ರಾಮದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯಲು ಸುಮಾರು 2 ವರ್ಷಗಳಿಂದ ಪ್ರಯತ್ನ ಪಡುತ್ತಿದ್ದಾರೆ. ಇದಕ್ಕೆ ಮಳಲಿ ಗ್ರಾಮದಲ್ಲಿ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದೇವೆ ಎಂದರು.

ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಮಳಲಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷರು, ಪಿಡಿಒ ಹಾಗೂ ಎಲ್ಲ ಸದಸ್ಯರು ಸಭೆ ಸೇರಿ ಪರಸನಹಳ್ಳಿ ಗ್ರಾಮದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡುವುದಿಲ್ಲ ಎಂದು ತೀರ್ಮಾನ ಕೈಗೊಂಡು ಪ್ರತಿಭಟನಾನಿರತ ಮಹಿಳೆಯರು, ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿಯ ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net