ಪರಕೀಯರ ದಾಸ್ಯದ ಅಸ್ಮಿತೆಗಳು ನಮ್ಮ ಗುರುತಾಗಬಾರದು-ಸಿ.ಟಿ.ರವಿ

19KWR3
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಪರಕೀಯರ ದಾಸ್ಯದ ಅಸ್ಮಿತೆಗಳು ನಮ್ಮ ಗುರುತಾಗಬಾರದು. ಛತ್ರಪತಿ ಶಿವಾಜಿ ಅವರ ಮೂಲಕ ನಮ್ಮತನ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕ್ಷತ್ರಿಯ ಮರಾಠಾ ಪರಿಷತ್ ನಿಂದ ನಗರದ ಟ್ಯಾಗೋರ್ ಕಡಲ ತೀರದ ಮಯೂರವರ್ಮ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ ರಾಜ್ಯ ಮಟ್ಟದ ಶಿವಾಜಿ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದುವೇಳೆ ಶಿವಾಜಿ ಇಲ್ಲದೇ ಇದ್ದರೆ, ವಿಜಯನಗರ ಸಾಮ್ರಾಜ್ಯ ನಿರ್ಮಾಣವಾಗದೇ ಇದ್ದರೆ, ರಾಣಾ ಪ್ರತಾಪ ಹುಟ್ಟದೇ ಇದ್ದರೆ ನಮ್ಮ ದೇಶದ ಪರಿಸ್ಥಿತಿ ಅಪಘಾನಿಸ್ತಾನಕ್ಕಿಂತ ಭಿನ್ನವಾಗಿ ಉಳಿಯುತ್ತಿರಲಿಲ್ಲ. ಇವತ್ತು ನಮ್ಮತನ, ನಮ್ಮ ತಾಯಂದಿರ ಮಾಂಗಲ್ಯ, ನಮ್ಮ ಹಣೆಯ ಮೇಲೆ ಸಿಂಧೂರ ಉಳಿದಿದೆ ಎಂದಾದರೆ ಎಂದಾದರೆ ಅದಕ್ಕೆ ಕಾರಣ ಶಿವಾಜಿಯಂಥ ಮಹಾ ಪುರುಷರು. ಅದನ್ನು ಮರೆಯದೇ ಸ್ವತಂತ್ರ ಭಾರತದ ಸುರಕ್ಷತೆಗೆ ನಾವೆಲ್ಲರೂ ದೇಶ ಮೊದಲು ಎಂಬ ತತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.
ಶಿವಾಜಿ, ಬಸವಣ್ಣನವರಂಥ ರಾಷ್ಟ್ರ ಪುರುಷರನ್ನು ಒಂದು ಭಾಷೆಗೆ, ಒಂದು ಪ್ರದೇಶಕ್ಕೆ ಕಟ್ಟಿ ಹಾಕಬಾರದು. ಅದು ಸಣ್ಣತನವಾಗುತ್ತದೆ. ರಾಷ್ಟ್ರ ಪುರುಷರಿಗೆ ಮಾಡುವ ಅಗೌರವವಾಗುತ್ತದೆ. ಅವರು ರಾಷ್ಟçಕ್ಕೆ ಸೇರಿದವರು.ನಮ್ಮೆಲ್ಲರಿಗೆ ಸೇರಿದವರು ಎಂದು ಹೇಳಿದರು.
ಶಾಹಿ ಆಡಳಿತದ ಕಾಲಘಟ್ಟದಲ್ಲಿ ಶಿವಾಜಿ ಮಹಾರಾಜರು ಜನಿಸಿದರು. ಬದುಕಿದರೆ ಸಾಕು ಎಂಬ ಪರಿಸ್ಥಿತಿಯಲ್ಲಿ ಹಿಂದವಿ ಸಾಮ್ರಾಜ್ಯದ ಕನಸು ಕಂಡವರು ಶಿವಾಜಿ ಮಹಾರಾಜರು. ಬೆಟ್ಟಗಳ ಜನರಿಗೆ ಕಬಡ್ಡಿಯ ಮೂಲಕ ತರಬೇತಿ ನೀಡಿ, ನೂರಾರು ಶೂರ ಯೋಧರನ್ನು ತಯಾರು ಮಾಡಿದರು. ನೌಕಾಸೇನೆಯ ಕೌಶಲಗಳನ್ನು ಕರಗತ ಮಾಡಿಕೊಂಡರು. ಸ್ವಾಭಿಮಾನಿ ದೇಶೀಯ ಸಾಮ್ರಾಜ್ಯ ಕಟ್ಟಿದರು. ಸನಾತನ ಸಂಸ್ಕೃತಿ ಎತ್ತಿ ಹಿಡಿದರು. ದೃಷ್ಟಾರರು, ಅಗ್ರಗಣ್ಯ ರಾಷ್ಟ್ರ ಪುರುಷರ ಸಾಲಿಗೆ ಸೇರಿದವರು ಶಿವಾಜಿ ಎಂದು ಬಣ್ಣಿಸಿದರು.
ಬೆಂಗಳೂರಿನ ಗೋಸಾಯಿ ಮಹಾ ಸಂಸ್ಥಾನ ಮಠದ ಮಂಜುನಾಥ ಭಾರತೀ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಮಾಜಕ್ಕೆ ನ್ಯಾಯ ಕೊಡುವ ಮಹಾ ಪುರುಷರು ಹುಟ್ಟಬೇಕು ಎಂದರೆ ಅವರಲ್ಲಿ ದೈವೀ ಭಕ್ತಿ ಇರಬೇಕು. ಅಲೌಕಿಕ ಕೆಲಸ ಮಾಡಲು ಪರಮಾತ್ಮನ ಕೃಪೆ ಬಹಳ ಮುಖ್ಯವಾದುದು. ಶಿವಾಜಿ ಮಹಾರಾಜರು ಅಪ್ಪಟ ದೈವೀ ಭಕ್ತರಾಗಿದ್ದರು. ಶಿವನನ್ನು, ಭವಾನಿಯನ್ನು ನೆನೆದೇ ಯುದ್ಧಕ್ಕೆ ಹೊರಡುತ್ತಿದ್ದರು. ಅವರ ಹುಟ್ಟಿಲ್ಲ ಎಂದರೆ ಇಂದು ಹಿಂದು ಸಂಸ್ಕೃತಿ ಸತ್ಯನಾಶವಾಗುತ್ತಿತ್ತು ಎಂದರು.
ಶಾಸಕಿ ರೂಪಾಲಿ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದು ಸಂಸ್ಕೃತಿಯ ರಕ್ಷಣೆ, ಪುನರುತ್ಥಾನಕ್ಕೆ ಕಾರಣರಾದವರು ಶಿವಾಜಿ ಮಹಾರಾಜರು. ಅವರ ರಾಜ್ಯಮಟ್ಟದ ಜಯಂತಿಯನ್ನು ಕಾರವಾರ ಕ್ಷೇತ್ರದಲ್ಲಿ ಆಚರಿಸುವುದು ಹೆಮ್ಮೆಯ ವಿಷಯ. ಮರಾಠಾ ನಿಗಮ ಸ್ಥಾಪಿಸಿ ಅನುದಾನ ನೀಡಿರುವುದು ಬಿಜೆಪಿ ಸರ್ಕಾರದ ಸಾಧನೆ ಎಂದರು.
ಕಾರವಾರ ಎಸಿ ಜಯಲಕ್ಷ್ಮಿ ರಾಯಕೋಡ ಸ್ವಾಗತಿಸಿದರು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಎಲ್‌ಸಿ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ,ಉಪಾಧ್ಯಕ್ಷ ಪ್ರಕಾಶ ನಾಯ್ಕ, ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಜುಬಿನ್ ಮಹಾಪಾತ್ರಾ, ಮಾಜಿ ಶಾಸಕ ಗಂಗಾಧರ ಭಟ್, ಕರ್ನಾಟಕ ಕ್ಷತ್ರಿ ಮರಾಠಾ ಪರಿಷತ್ ಜಿಲ್ಲಾಧ್ಯಕ್ಷ ಸಂದೀಪಕುಮಾರ್ ಬೊಬಾಟಿ, ಆಚರಣಾ ಸಮಿತಿಯ ಸಂಜಯ ಸಾಳುಂಕೆ, ಗಣೇಶ ಪ್ರಸಾದ ತೋಡೂರ್ ಕರ್,ಜ್ಞಾನೇಶ್ವರ ನಾಯ್ಕ ವೇದಿಕೆಯಲ್ಲಿದ್ದರು.
ಗಮನ ಸೆಳೆದ ಮೆರವಣಿಗೆ:
ಶಿವಾಜಿ ಮಹಾರಾಜರು ಭೇಟಿ ನೀಡಿದ ಸದಾಶಿವಗಡ ಕೋಟೆಯ ಮೇಲಿನ ದುರ್ಗಾದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಪ್ರಾರಂಭಿಸಲಾಯಿತು. ಕೋಡಿಬಾಗದ ಕಾಳಿ ನದಿಯಿಂದ ಟ್ಯಾಗೋರ್ ಕಡಲ ತೀರದವರೆಗೆ ಶಿವಾಜಿ ಮಹಾರಾಜರ ಪುತ್ಥಳಿಯ ಮೆರವಣಿಗೆ ಗಮನ ಸೆಳೆಯಿತು. ಕೇಸರಿ ಧ್ವಜಗಳು ಹಾರಾಡಿದವರು. ಕಂಸಾಳೆಯAಥ ವಿವಿಧ ಜಾನಪದ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ಮೆರಗು ನೀಡಿತು. ಶಿವಾಜಿ, ಜೀಜಾಬಾಯಿ ಮುಂತಾದವರ ಛದ್ಮವೇಷ ಧರಿಸಿದ ಮಕ್ಕಳು ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net