ಪದಚ್ಯುತಿ, ಸದಸ್ಯತ್ವ ರದ್ದು ಆದೇಶಕ್ಕೆ ಹೈಕೋರ್ಟ್ ತಡೆ

Published on

ಅರಸೀಕೆರೆ: ನಗರಸಭೆಯಲ್ಲಿ ನಿಯಮಾನುಸಾರ ಸಾಮಾನ್ಯ ಸಭೆ ನಡೆಸಿಲ್ಲ ಎಂಬ ದೂರಿನಡಿ ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಪದಚ್ಯುತಿ ಜತೆಗೆ ಸದಸ್ಯತ್ವ ರದ್ದುಗೊಳಿಸಿ ಪ್ರಾದೇಶಿಕ ಆಯುಕ್ತರು ನೀಡಿದ್ದ ಆದೇಶಕ್ಕೆ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.
ಅಧ್ಯಕ್ಷ ಗಾದಿ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದ ಸಿ.ಗಿರೀಶ್ 2021ರ ಏಪ್ರಿಲ್‌ನಲ್ಲಿ ಹುದ್ದೆಗೇರಿದ್ದರು. ಪೌರಾಡಳಿತ ಇಲಾಖೆ ನಿಯಮಾನುಸಾರ ಕಾಲ ಕಾಲಕ್ಕೆ ಸಭೆ ನಡೆಸದೆ ಲೋಪವೆಸಗಲಾಗಿದೆ ಎಂದು ಜೆಡಿಎಸ್‌ನ ಕೆಲ ಸದಸ್ಯರು ಕೆಲ ತಿಂಗಳ ಹಿಂದೆ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದರು. ಅರ್ಜಿದಾರರ ಅಹವಾಲು ಪರಿಶೀಲಿಸಿದ್ದ ಪ್ರಾದೇಶಿಕ ಆಯುಕ್ತರು ಸಿ.ಗಿರೀಶ್‌ರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸುವ ಜತೆಗೆ ಸದಸ್ಯತ್ವ ರದ್ದುಗೊಳಿಸಿ ಆದೇಶ ಹೊರಡಿಸಿದ್ದರು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಸಿ.ಗಿರೀಶ್ ಕಾನೂನು ಹೋರಾಟ ಮುಂದುವರಿಸಿದ್ದರು. ಇದೀಗ ನ್ಯಾಯಾಲಯದಿಂದ ರಿಲೀಫ್ ಸಿಕ್ಕಂತಾಗಿದೆ.

ಸಂವಿಧಾನದ ಅನುಸಾರ ಲಭಿಸಿರುವ ಮೀಸಲಾತಿಯಿಂದ ನಗರಸಭೆ ಅಧ್ಯಕ್ಷನಾಗಿ ಕೆಲಸ ಮಾಡುತ್ತಿರುವ ನನಗೆ ರಾಜಕೀಯ ವಿರೋಧಿಗಳು ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ. 15 ವರ್ಷದಿಂದ ಎಷ್ಟು ತಿಂಗಳಿಗೊಮ್ಮೆ ಸಭೆ ನಡೆಸಲಾಗಿದೆ ಎಂಬುದನ್ನು ಜನರೆದುರು ತೆರೆದಿಡುತ್ತೇನೆ. ನ್ಯಾಯಾಲಯದಲ್ಲಿ ನನ್ನ ಹೋರಾಟಕ್ಕೆ ಜಯ ದೊರೆಯುವ ವಿಶ್ವಾಸವಿದ್ದು, ನಗರ ನಿವಾಸಿಗಳ ಹಿತಕಾಯಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ.
ಸಿ.ಗಿರೀಶ್, ಅಧ್ಯಕ್ಷ, ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net