ಪತ್ನಿಯನ್ನು ಬೆಂಕಿ ಹಚ್ಚಿ ಕೊಂದವನಿಗೆ ಜೀವಾವಧಿ ಶಿಕ್ಷೆ

Untitled
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಪತ್ನಿಗೆ ಬೆಂಕಿ ಹಚ್ಚಿ ಕೊಂದವನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಕುಮಟಾದ ಮೂರೂರಿನ ದುಗ್ಗು ಕರಿಯಪ್ಪ ಗೌಡ ಎಂಬಾತನಿಗೆ ಜೈಲು ಶಿಕ್ಷೆ, 5 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ತಪ್ಪಿದಲ್ಲಿ 3 ತಿಂಗಳು ಸಾಧಾ ಕಾರಾಗೃಹ ವಾಸ ನೀಡುವಂತೆ ಆದೇಶಿಸಲಾಗಿದೆ.
ಗಣಪಿ ಎಂಬಾಕೆಯನ್ನು ಮದುವೆಯಾದಾಗಿನಿಂದ ಆತ ಪೀಡಿಸುತ್ತಿದ್ದ ಎನ್ನಲಾಗಿದೆ. ನಿನ್ನನ್ನು ವಿವಾಹವಾಗಲು ಇಷ್ಟವಿಲ್ಲ ಎಂದು ಕಿರುಕುಳ ನೀಡುತ್ತಿದ್ದ. 2016 ಮಾರ್ಚ್ 20 ರಂದು ಸಂಬಂಧಿಕರು ಕರೆದು ರಾಜಿ ಪಂಚಾಯಿತಿ ಮಾಡಿಸಿದ್ದರು. ಆದರೆ, ಇದರಿಂದ ಇನ್ನಷ್ಟು ದ್ವೇಷ ಹೆಚ್ಚಿಸಿಕೊಂಡ ದುಗ್ಗು ಅಂದೇ ಪತ್ನಿ ಗಣಪಿಯ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ತೀವ್ರವಾಗಿ ಗಾಯಗೊಂಡಿದ್ದ ಆಕೆ ಚಿಕಿತ್ಸೆಗೆ ಸ್ಪಂದಿಸದೇ ಮಾ.27 ರಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸೆಶನ್ಸ್ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ ಅವರು, ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net