ಪತಿ ಕೊಂದಿದ್ದ ಪತ್ನಿ, ಪ್ರಿಯಕರನ ಬಂಧನ

Published on

ಗುಂಡ್ಲುಪೇಟೆ: ತನ್ನ ಭಾವನೊಂದಿಗಿದ್ದ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಬೆಂಕಿ ಹಚ್ಚಿದ್ದ ಆರೋಪಿಗಳನ್ನು ತೆರಕಣಾಂಬಿ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಮೂಡಗೂರು ಗ್ರಾಮದ ಸವಿತಾ ಮತ್ತು ಆಕೆಯ ಅಕ್ಕನ ಗಂಡ (ಭಾವ) ನಂಜನಗೂಡು ತಾಲೂಕಿನ ಹೆಮ್ಮರಗಾಲ ಗ್ರಾಮದ ಸಿದ್ದರಾಜು ಬಂಧಿತರು.

ಘಟನೆಯ ವಿವರ: ಮೂಡಗೂರು ಗ್ರಾಮದ ಸಿದ್ದೇಶ್(40) ಎಂಬುವರು ಏ 3ರಂದು ತಮ್ಮ ಮನೆಯಲ್ಲಿ ಮಲಗಿದ್ದಾಗ ಮನೆಗೆ ಬೆಂಕಿಬಿದ್ದು ಗಾಯಗೊಂಡಿದ್ದರು. ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಸ್ಪಂದಿಸದೆ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟರು. ಮನೆಗೆ ಬೆಂಕಿ ಬಿದ್ದ ಘಟನೆಯಲ್ಲಿ ನನ್ನ ಸೊಸೆ ಸವಿತಾಳ ಮೇಲೆ ಅನುಮಾನವಿದೆ ಎಂದು ಮೃತನ ತಾಯಿ ಮಹದೇವಮ್ಮ ತೆರಕಣಾಂಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು, ಸರ್ಕಲ್ ಇನ್ಸ್‌ಪೆಕ್ಟರ್ ವನರಾಜು ನೇತೃತ್ವದಲ್ಲಿ ತನಿಖೆ ಕೈಗೊಂಡಾಗ ಸವಿತಾ ಮತ್ತು ಸಿದ್ದರಾಜು ನಡುವೆ ಅನೈತಿಕ ಸಂಬಂಧವಿದ್ದುದು ಪತ್ತೆಯಾಗಿದೆ. ತನ್ನ ಹಾಗೂ ಸವಿತಾಳ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಷಡ್ಕನನ್ನು ಮುಗಿಸಲು ಸಂಚು ಹೂಡಿದ ಸಿದ್ದರಾಜು ಕಬ್ಬಹಳ್ಳಿ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಖರೀದಿಸಿ ಗುರುವಾರ ರಾತ್ರಿ ಮನೆಯಲ್ಲಿ ನಿದ್ರಿಸುತ್ತಿದ್ದ ಸಿದ್ದೇಶ್ ಮೇಲೆ ಎರಚಿ ಇಬ್ಬರೂ ಸೇರಿ ಬೆಂಕಿ ಹಚ್ಚಿದ್ದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net