

ತಿ.ನರಸೀಪುರ: ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟವಾಗುವುದಕ್ಕೆ ಕಡಿವಾಣ ಹಾಕಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಮಹಾದೇವಪ್ರಭು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ತಿ ನರಸೀಪುರ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯರಾದ ಮಹದೇವಸ್ವಾಮಿ ಹಾಗೂ ಎಸ್.ಅಭಿಲಾಷ್ ಅವರು ರಾಜ್ಯ ಸರ್ಕಾರದ ಮಹತ್ವದ ಅನ್ನಭಾಗ್ಯ ಯೋಜನೆ ಪಡಿತರ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವ ಬಗ್ಗೆ ವ್ಯಾಪಕವಾಗಿ ದೂರಿದರು. ಈ ಹಿನ್ನೆಲೆಯಲ್ಲಿ ಪಡಿತರ ಅಕ್ಕಿಯನ್ನು ಮಾರುವವರು ಮತ್ತು ಖರೀದಿಸುವವರ ಮೇಲೆ ಕಾನೂನು ಕ್ರಮ ಕೈಗೊಂಡು ಅಕ್ರಮ ಮರಾಟ ತಡೆಗಟ್ಟುವಂತೆ ಆಹಾರ ನಿರೀಕ್ಷಕಿ ಎನ್.ರಾಜಮ್ಮ ಅವರಿಗೆ ತಾಕೀತು ಮಾಡಿದರು.
ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ಎನ್.ರಾಜಮ್ಮ, ಪಡಿತರ ಅಕ್ಕಿ ಅಕ್ರಮ ಮಾರಾಟ ಮತ್ತು ಸಾಗಣೆ ಸಂಬಂಧ ಈಗಾಗಲೇ ಆರೇಳು ಪ್ರಕರಣಗಳಲ್ಲಿ ದಾಳಿ ಮಾಡಿ, ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ದಾಖಲಿಸಿದ್ದೇವೆ. ಆಹಾರ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆ ಇರುವುದರಿಂದ ಕಾರ್ಯಾಚರಣೆ ಕಷ್ಟವಾಗುತ್ತಿದೆ. ಅಕ್ರಮ ಪಡಿತರ ಮಾರಾಟ ಮತ್ತು ಸಾಗಣೆ ಬಗ್ಗೆ ಮಾಹಿತಿ ನೀಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.
ಸಮಿತಿಯ ಮತ್ತೊಬ್ಬ ಸದಸ್ಯ ಡಿ.ಎಂ.ಪರಶಿವಮೂರ್ತಿ ಮಾತನಾಡಿ, ಅನರ್ಹರು ಕೂಡ ಬಿಪಿಎಲ್ ಕಾರ್ಡ್‌ಗಳನ್ನ ಪಡೆದುಕೊಂಡು ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಮಾರಿಕೊಳ್ಳುತ್ತಿದ್ದಾರೆ. ಅಂತಹವರನ್ನು ಪತ್ತೆ ಹಚ್ಚಿ, ಪಡಿತರ ಕಾರ್ಡ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಬಡವರಿಗೆ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಕಾರ್ಡ್‌ಗಳು ಸದ್ಬಳಕೆಯಾಗಲಿ. ಈ ಬಗ್ಗೆಯೂ ಆಹಾರ ಇಲಾಖೆ ಅಧಿಕಾರಿಗಳು ಅರ್ಹರನ್ನು ಗುರುತಿಸಬೇಕು ಎಂದರು.
ಸೆಸ್ಕ್ ಎಇಇ ಕೆ.ವಿ.ವೀರೇಶ್ ಮಾತನಾಡಿ, ಪಟ್ಟಣ ಪ್ರದೇಶದಲ್ಲಿನ ಅನುಕೂಲಸ್ಥರು ಗೃಹ ಜ್ಯೋತಿ ವಿದ್ಯುತ್ ಸೌಲಭ್ಯವನ್ನು ನಿರಾಕರಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಅರ್ಹ ಫಲಾನುಭವಿಗಳಿಗೆ ಗೃಹ ಜ್ಯೋತಿ ಸೌಲಭ್ಯವನ್ನು ನೀಡುತ್ತಿದ್ದೇವೆ. ಗ್ರಾಮಾಂತರ ಪ್ರದೇಶಗಳಲ್ಲಿ ಹೊಸಬರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ನಿಗದಿತ ಯುನಿಟ್ ಬಳಕೆ ಮತ್ತು 200 ಯುನಿಟ್ ಮೇಲಿನ ವಿದ್ಯುತ್‌ಗೆ ಬಿಲ್ ಪಾವತಿಸಬೇಕಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನನುಕೂಲದ ಬಗ್ಗೆ ಸದಸ್ಯರಿಂದ ವ್ಯಾಪಕವಾಗಿ ದೂರುಗಳು ಕೇಳಿಬಂದವು. ಯುವ ನಿಧಿ ಯೋಜನೆ ಬಗ್ಗೆ ಉದ್ಯೋಗ ಮತ್ತು ವಿನಿಮಯ ಕಚೇರಿಯ ಪ್ರಥಮ ದರ್ಜೆ ಸಹಾಯಕ ಎಸ್.ಆರ್.ರಾಹುಲ್ ಮಾಹಿತಿ ನೀಡಿದರು. ತಾಪಂ ಯೋಜನಾಧಿಕಾರಿ ರಂಗಸ್ವಾಮಿ, ಸೆಸ್ಕ್ ಬನ್ನೂರು ಉಪ ವಿಭಾಗದ ಎಇಇ ಎಂ.ಹರ್ಷನ್, ಸಾರಿಗೆ ಸಂಸ್ಥೆಯ ನಂಜನಗೂಡು ಡಿಪೋ ನಿರೀಕ್ಷಕ ಶ್ರೀಕಂಠರಾಜೇ ಅರಸು, ಶಾರದಾದೇವಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಸಲೀಂ ಅಹಮದ್, ಎಸ್. ಮಂಜುನಾಥ್, ಮಹದೇವಸ್ವಾಮಿ, ಎಸ್.ಗವಿಸಿದ್ದಯ್ಯ, ಆರ್.ಸಿ.ಗುರುಶ್ರೀ, ಎನ್.ಮೊಹಮ್ಮದ್ ಸಲ್ಮಾನ್ ಇದ್ದರು.