ಪಡಸಾಲೆ ಕೇಂದ್ರದಲ್ಲಿ ವಿದ್ಯುತ್ ಸಮಸ್ಯೆ

05 HANUR 1
????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಹನೂರು: ಪಟ್ಟಣದ ತಹಸೀಲ್ದಾರ್ ಕಚೇರಿಯ ಪಡಸಾಲೆ ಕೇಂದ್ರದಲ್ಲಿ ಕಳೆದ 3 ದಿನಗಳಿಂದ ವಿದ್ಯುತ್ ಇಲ್ಲದ ಪರಿಣಾಮ ಕೆಲಸ ಕಾರ್ಯಗಳು ಸ್ಥಗಿತಗೊಂಡಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು.

ಪಟ್ಟಣದ ಮುಖ್ಯ ರಸ್ತೆಯ ಬದಿಯಲ್ಲಿನ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಹಿನ್ನೆಲೆಯಲ್ಲಿ ಸೆಸ್ಕ್ ಕಾರ್ಯನಿರ್ವಹಣೆಯಲ್ಲಿ ತೊಡಗಿದೆ. ಇದರಿಂದ ಕಳೆದ 3 ದಿನಗಳಿಂದ ಪಟ್ಟಣದಲ್ಲಿ ಬೆಳಗ್ಗೆ 10ರಿಂದ 6ರವರೆಗೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ್ದು, ವಿದ್ಯುತ್ ಸಮಸ್ಯೆ ತಲೆದೋರಿದೆ. ಇತರ ಕಚೇರಿಯಲ್ಲಿ ಯುಪಿಎಸ್ ಸೌಕರ್ಯ ಇರುವುದರಿಂದ ಕೆಲಸ ಕಾರ್ಯಗಳು ನಡೆಯುತ್ತಿವೆ. ಆದರೆ ತಹಸೀಲ್ದಾರ್ ಕಚೇರಿಯ ಪಡಸಾಲೆ ಕೇಂದ್ರದಲ್ಲಿ ಈ ಹಿಂದೆ ಅಳವಡಿಸಲಾಗಿದ್ದ ಸೋಲಾರ್ ಹಾಗೂ ಯುಪಿಎಸ್ ಯೂನಿಟ್ ನಿಷ್ಕ್ರಿಯವಾಗಿದೆ. ಇದರಿಂದ ಕಳೆದ 3 ದಿನಗಳಿಂದ ವಿದ್ಯುತ್ ಇಲ್ಲದ ಪರಿಣಾಮ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ.

ಈ ಕೇಂದ್ರದಲ್ಲಿ ಜಾತಿ, ವರಮಾನ ಪ್ರಮಾಣ ಪತ್ರ, ವಾಸಸ್ಥಳ, ವಂಶವೃಕ್ಷ, ವಿಧವೆ, ವೃದ್ಧಾಪ್ಯ, ಅಂಗವಿಕಲ ಹಾಗೂ ಇನ್ನು ಅನೇಕ ಸರ್ಕಾರ ಯೋಜನೆಗಳಿಗೆ ಅರ್ಜಿ ಸಲ್ಲಿಸಲಾಗುತ್ತದೆ. ಜತೆಗೆ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕಾರ್ಯವನ್ನು ಮಾಡಲಾಗುತ್ತದೆ. ಅಲ್ಲದೇ ಅರ್ಜಿ ವಿಲೇವಾರಿ ಕಾರ್ಯಗಳು ನಡೆಯುತ್ತವೆ. ಹಾಗಾಗಿ ತಾಲೂಕು ವ್ಯಾಪ್ತಿಯ ಜನರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಕಳೆದ 3 ದಿನಗಳಿಂದ ವಿದ್ಯುತ್ ಸ್ಥಗಿತಗೊಂಡಿರುವ ಪರಿಣಾಮ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸಿದ ಜನರು ತೊಂದರೆ ಅನುಭವಿಸುವಂತಾಯಿತು. ಈ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಯಿತು.

ಕಾದು ಕುಳಿತು ತೊಂದರೆ: ಹನೂರಿನಲ್ಲಿ ವಿದ್ಯುತ್ ವ್ಯತ್ಯಯವಾಗಿರುವುದು ಹಾಗೂ ಪಡಸಾಲೆ ಕೇಂದ್ರದಲ್ಲಿ ಯುಪಿಎಸ್ ನಿಷ್ಕ್ರಿಯೆಗೊಂಡಿರುವ ಬಗ್ಗೆ ಆಗಮಿಸುವ ಜನರಿಗೆ ತಿಳಿದಿಲ್ಲ. ಹಾಗಾಗಿ ಕಳೆದ 3 ದಿನಗಳಿಂದಲೂ ಕೆಲಸ ಕಾರ್ಯಗಳ ನಿಮಿತ್ತ ಜನರು ಬೆಳಗ್ಗೆ 10.30ಕ್ಕೂ ಮುನ್ನವೇ ಆಗಮಿಸಿ ಕೇಂದ್ರದ ಮುಂಭಾಗ ಕಾದು ಕುಳಿತುಕೊಳ್ಳುವಂತಾಗಿದೆ. ಬಳಿಕ ನೌಕರರು ಹಾಗೂ ಅಧಿಕಾರಿಗಳು ಆಗಮಿಸಿದ ವೇಳೆ ವಿದ್ಯುತ್ ಇಲ್ಲದಿರುವುದರ ಬಗ್ಗೆ ತಿಳಿದು ಹಿಂತಿರುಗುತ್ತಿದ್ದು, ತೊಂದರೆ ಅನುಭವಿಸುತ್ತಿದ್ದಾರೆ. ಇತ್ತ ಬುಧವಾರ ಬೆಳಗ್ಗೆ 9.30ರಲ್ಲಿ ತಾಲೂಕು ಕೇಂದ್ರದಿಂದ ಸುಮಾರು 100 ಕಿ.ಮೀ. ಅಂತರವನ್ನು ಹೊಂದಿರುವ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಾಡಿ ಗ್ರಾಮದ 6 ಕುಟುಂಬಗಳು ತಮ್ಮ ಮಕ್ಕಳೊಂದಿಗೆ ಆಧಾರ್ ನೋಂದಣಿ ಹಾಗೂ ತಿದ್ದುಪಡಿಗಾಗಿ ಪಡಸಾಲೆ ಕೇಂದ್ರಕ್ಕೆ ಆಗಮಿಸಿ ಕಾದು ಕುಳಿತಿದ್ದರು. ಆದರೆ ವಿದ್ಯುತ್ ಇಲ್ಲದ ಪರಿಣಾಮ ಕೆಲಸ ಕಾರ್ಯಗಳು ಸ್ಥಗಿತಗೊಂಡಿರುವುದರ ಬಗ್ಗೆ ತಿಳಿದ ಗ್ರಾಮಸ್ಥರು ಹಿಂತಿರುಗಿದರು. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಯುಪಿಎಸ್ ಅಳವಡಿಕೆಗೆ ಒತ್ತಾಯ: ಪಡಸಾಲೆ ಕೇಂದ್ರದಲ್ಲಿ ಕಂದಾಯ ಇಲಾಖೆಯ ಸೇವೆಗಳನ್ನು ಒದಗಿಸುತ್ತಿದ್ದು, ಪ್ರಸ್ತುತ ಎಲ್ಲವೂ ಆನ್‌ಲೈನ್ ವ್ಯವಸ್ಥೆಯಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಆರಂಭದಲ್ಲಿ ಯುಪಿಎಸ್ ಹಾಗೂ ಸೋಲಾರ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕಳೆದ ಮೂರ‌್ನಾಲ್ಕು ವರ್ಷಗಳಿಂದ ಘಟಕಗಳು ನಿಷ್ಕ್ರಿಯವಾಗಿವೆ. ಇದರಿಂದ ಇಲ್ಲಿ ವಿದ್ಯುತ್ ಇರುವ ವೇಳೆಯಲ್ಲಿ ಮಾತ್ರ ಕಾರ್ಯ ನಿರ್ವಹಿಸಬಹುದಾಗಿದೆ. ವಿದ್ಯುತ್ ಕಡಿತಗೊಂಡರೆ ಸಾರ್ವಜನಿಕರು ಕಾದು ಕುಳಿತು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿದಿದೆ. ಆದರೆ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಪಡಸಾಲೆ ಕೇಂದ್ರದಲ್ಲಿ ಯುಪಿಎಸ್ ಯೂನಿಟ್ ಅಳವಡಿಸುವುದರ ಮೂಲಕ ಸೇವೆಯಲ್ಲಿ ವಿಳಂಬವಾಗದಂತೆ ಅಗತ್ಯ ಕ್ರಮವಹಿಸಿ ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಂದಾಯ ಇಲಾಖೆಯ ಎಲ್ಲ ಸೇವೆಗಳು ಆನ್‌ಲೈನ್ ವ್ಯವಸ್ಥೆಯಾಗಿದೆ. ಹಾಗಾಗಿ ವಿದ್ಯುತ್ ಸ್ಥಗಿತವಾದ ವೇಳೆ ಯಾವುದೇ ಕೆಲಸ ಕಾರ್ಯವನ್ನು ಕೈಗೊಳ್ಳಲು ಸಾಧ್ಯವಿಲ್ಲ. ಇದೀಗ ಕಳೆದ 3 ದಿನಗಳಿಂದಲೂ ವಿದ್ಯುತ್ ಸ್ಥಗಿತಗೊಂಡಿರುವುದು ಗಮನಕ್ಕೆ ಬಂದಿದೆ. ತಾಲೂಕು ಕಚೇರಿಗೆ 8 ಯುಪಿಎಸ್ ಯೂನಿಟ್ ಅಗತ್ಯವಿದೆ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಈ ಸಂಬಂಧ ಜಿಲ್ಲಾಧಿಕಾರಿ ಅವರ ಗಮನಕ್ಕೂ ತರಲಾಗಿದೆ. ವೈ.ಕೆ.ಗುರುಪ್ರಸಾದ್, ತಹಸೀಲ್ದಾರ್, ಹನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net