

ಹಾಸನ: ಒಂದೊಂದು ವರ್ಷದಲ್ಲೂ ಒಂದೊಂದು ರೀತಿ ಪಠ್ಯಪುಸ್ತಕ ಬದಲಾವಣೆ ಮಾಡುತ್ತಿರುವುದರಿಂದ ಉಪನ್ಯಾಸಕರಿಗೆ ಗೊಂದಲ ಉಂಟಾಗುತ್ತದೆ ಎಂದು ಪದವಿ ಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಟಿ.ಸುರೇಶ್ ಬೇಸರ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶುಕ್ರವಾರ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ವೇದಿಕೆಯಿಂದ ಹಮ್ಮಿಕೊಂಡಿದ್ದ ಪಠ್ಯಾಧಾರಿತ ಸಾಹಿತ್ಯ ಚಿಂತನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲಘಟ್ಟಕ್ಕೆ ಅನುಗುಣವಾಗಿ ಪಠ್ಯಪುಸ್ತಕಗಳು ಬದಲಾವಣೆ ಮಾಡಿಬೇಕಿರುವುದು ಅನಿವಾರ್ಯ. ಆದರೆ, ಆಗಾಗ್ಗೆ ಬದಲಾವಣೆ ಮಾಡುತ್ತಿರುವುದು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಲ್ಲಿ ಗೊಂದಲದ ಜತೆಗೆ ಆತಂಕವನ್ನೂ ಉಂಟು ಮಾಡುತ್ತಿದೆ ಎಂದರು.
ಕೋವಿಡ್ ಸಮಯದಲ್ಲಿ ಉಪನ್ಯಾಸಕರು ಪಾಠ ಮಾಡುವ ಬದಲು ಪರೀಕ್ಷೆ ಮಾಡುವ ಅನಿವಾರ್ಯತೆ ಎದುರಾಯಿತು. ಅಲ್ಲದೇ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳನ್ನು ಏಕಾಏಕಿ ತೇರ್ಗಡೆ ಮಾಡುವ ಸ್ಥಿತಿ ಬಂದೊದಗಿತು. ಇಂತಹ ಆತಂಕವನ್ನು ದೂರ ಮಾಡಿ, ಮುಂದಿನ ದಿನಗಳಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ ಉತ್ತಮ ಮಾರ್ಗದರ್ಶನ ನೀಡಲು ಇಂತಹ ಕಾರ್ಯಕ್ರಮಗಳು ಹೆಚ್ಚು ಉಪಯೋಗವಾಗಿವೆ ಎಂದು ತಿಳಿಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಎಂ.ಮಹಾಲಿಂಗಯ್ಯ, ನಿವೃತ್ತ ಪ್ರಾಂಶುಪಾಲ ಎನ್.ಎಲ್. ಮುಕುಂದರಾಜು, ಕನ್ನಡ ಉಪನ್ಯಾಸಕ ಆರ್.ಎನ್.ರವಿ, ಕನ್ನಡ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ವೇದಿಕೆ ಅಧ್ಯಕ್ಷ ವೆಂಕಟೇಶ್ ದೇವಿಪುರ, ಜಿಲ್ಲಾ ಪದವಿಪೂರ್ವ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಗೋಪಾಲ್, ಆರ್.ಕಾಂತಮ್ಮ, ಎ.ಹೇಮಲತಾ, ಎಚ್.ಡಿ.ಕಾಂತರಾಜು ಇತರರು ಉಪಸ್ಥಿತರಿದ್ದರು.