

ಹಾವೇರಿ: ವಿಶ್ವ ಗುಬ್ಬಚ್ಚಿಗಳ ದಿನದ ಅಂಗವಾಗಿ ಶುಕ್ರವಾರ ತಾಲೂಕಿನ ಚಿಕ್ಕಲಿಂಗದಹಳ್ಳಿಯ ಬಸವೇಶ್ವರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಶಾಲಾ ಆವರಣದ ಗಿಡಗಳಲ್ಲಿ ಗುಬ್ಬಚ್ಚಿಗಳಿಗೆ ನೀರುಣಿಸಲು ನೀರಿನ ಬಾಟಲಿಗಳನ್ನು ಅರ್ಧ ಕೊರೆದು ನೀರು ತುಂಬಿಸಿ ಅಲ್ಲಲ್ಲಿ ತೂಗಿ ಹಾಕಿದರು.
ಮುಖ್ಯಶಿಕ್ಷಕ ಜಿ.ಎಂ. ಮುಂದಿನಮನಿ ಮಾತನಾಡಿ, ಮನೆಯಂಗಳದ ಗುಬ್ಬಚ್ಚಿಗಳು ಹಾಗೂ ಇನ್ನಿತರ ಪಕ್ಷಿಗಳು ಅವುಗಳ ಸಂಕುಲಕ್ಕೆ ಉಂಟಾಗಿರುವ ಭೀತಿಯನ್ನು ತಡೆಯುವ ಉದ್ದೇಶದಿಂದ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಶಾಲೆಯ ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರು ತಮ್ಮ ಮನೆಯ ಛಾವಣಿಯ ಮೇಲೆ ಪಕ್ಷಿಗಳಿಗೆ ನೀರು ಹಾಗೂ ಆಹಾರವನ್ನಿಟ್ಟು ಅವುಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದರು. ಚಿತ್ರಕಲಾ ಶಿಕ್ಷಕ ಪ್ರಭಾಕರ ರಿತ್ತಿ ಮಾನತಾಡಿ, ನಮ್ಮ ಶಾಲೆಯಲ್ಲಿರುವ ಪ್ರತಿಯೊಂದು ಗಿಡದಲ್ಲಿಯೂ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು. ಶಿಕ್ಷಕರಾದ ರವೀಂದ್ರ ಮಳಗಿ, ಪಿ.ಎಂ. ಮೂರಮಟ್ಟಿ, ಡಿ.ಎಚ್. ಹೆಬ್ಬಾಳ, ಎಂ. ಉಷಾ, ಸೀತಾ ಕಡಕೋಳ, ಪುಷ್ಪಾ ಬಗಾಡೆ, ಭಾರತಿ ರಾಠೋಡ ಇತರರಿದ್ದರು.