ಪಂಪ್​ಸೆಟ್​ಗಳಿಗೆ ಸೋಲಾರ್ ವಿದ್ಯುತ್

14byd-1
Published on

ಬ್ಯಾಡಗಿ: ಕೇಂದ್ರ ಸರ್ಕಾರ ಅಟಲ್ ಭೂಜಲ ಯೋಜನೆಯಡಿ ರೈತರ ಪಂಪ್​ಸೆಟ್​ಗಳಿಗೆ ಸೋಲಾರ್ ಅಳವಡಿಸುವ ಮೂಲಕ ವಿದ್ಯುತ್ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

ತಾಲೂಕಿನ ಅರಬಗೊಂಡದಲ್ಲಿ ದೀನದಯಾಳ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆಯಡಿ 5.75 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿದ 33 ಕೆವಿ ವಿದ್ಯುತ್ ಪರಿವರ್ತಕ ಘಟಕಕ್ಕೆ (ಗ್ರಿಡ್) ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ 74 ಲೋಕಸಭೆ ಕ್ಷೇತ್ರಗಳಲ್ಲಿ ಅಟಲ್ ಭೂಜಲ ಯೋಜನೆ ಜಾರಿಗೊಳಿಸುತ್ತಿದ್ದು, ಒಟ್ಟು 8300 ಗ್ರಾಪಂಗಳು ಈ ಯೋಜನೆ ವ್ಯಾಪ್ತಿಗೆ ಸೇರಿವೆ. ಅದರಲ್ಲಿ ಹಾವೇರಿ ಜಿಲ್ಲೆ ಆಯ್ಕೆಗೊಂಡಿದ್ದು, ಮುಂಬರುವ ದಿನಗಳಲ್ಲಿ ಸರ್ಕಾರ ರೈತರ ಪಂಪ್​ಸೆಟ್​ಗಳಿಗೆ ಸೋಲಾರ್ ವಿದ್ಯುತ್ ಅಳವಡಿಸಿ, ಕಾಯಂ ಪರಿಹಾರ ಕಲ್ಪಿಸಲಿದೆ. ಹಾವೇರಿಗೆ 33 ಕೋಟಿ ರೂ, ರಾಣೆಬೆನ್ನೂರಿಗೆ 22 ಕೋಟಿ ರೂ, ಗದಗಕ್ಕೆ 22 ಕೋಟಿ ರೂ. ವಿದ್ಯುತ್ ಕಾಮಗಾರಿಗೆ ಬಿಡುಗಡೆಯಾಗಿದೆ ಎಂದರು.

ದೇಶದ ಎಲ್ಲೆಡೆ ಪರಿವರ್ತಕ, ಹಳೆಯ ಲೈನ್ ಬದಲಾವಣೆ, ಲೋಡ್ ಶೆಡ್, ಫೀಡರ್​ಲೈನ್ ಸಮಸ್ಯೆ ಸೇರಿ ಹಲವು ವಿದ್ಯುತ್ ಘಟಕಗಳಲ್ಲಿ ಸಮಸ್ಯೆಗಳಿದ್ದವು. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ದೀನದಯಾಳ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆಗೆ ಚಾಲನೆ ನೀಡಿದ್ದರು. ದೇಶದಲ್ಲಿ 2.49 ಲಕ್ಷ ಮೆಗಾವಾಟ್ ಉತ್ಪಾದನೆಯಾಯಿತು. ಕಳೆದ ಐದು ವರ್ಷಗಳಿಂದ 3.10 ಲಕ್ಷ ಮೆಗಾವಾಟ್ ಉತ್ಪಾದಿಸಲಾಗುತ್ತಿದೆ. ಪರಿಸರ ಹಾನಿ ತಪ್ಪಿಸಲು ಕಲ್ಲಿದ್ದಲು ಉತ್ಪಾದನೆ ಸ್ಥಗಿತಗೊಳಿಸಿ, ಸೋಲಾರದಂತಹ ನೈಸರ್ಗಿಕ ಉತ್ಪಾನೆಗೆ ಒತ್ತು ನೀಡಿದೆ ಎಂದರು.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ತಾಲೂಕಿನ ದೊಡ್ಡ ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶೀಘ್ರದಲ್ಲಿ ಚಾಲನೆ ನೀಡಲಿದ್ದಾರೆ. 500 ಕೋಟಿ ರೂ. ಅನುದಾನ ತಾಲೂಕಿಗೆ ಬಿಡುಗಡೆಯಾಗಿದೆ. 7500 ಕೊಳವೆಬಾವಿಗಳು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿವೆ. 5 ಎಚ್​ಪಿ ಬದಲಾಗಿ 10 ಎಚ್​ಪಿ ಅಳವಡಿಸಿಕೊಂಡಿದ್ದು, ವಿದ್ಯುತ್ ಪರಿವರ್ತಕ ಸಮಸ್ಯೆಯಾಗುತ್ತಿದೆ. ಹನುಮನಮಟ್ಟಿ, ಕುಳೇನೂರು, ಕಾಗಿನೆಲೆಗಳಲ್ಲಿ 110 ಕೆವಿ ವಿದ್ಯುತ್ ಘಟಕ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಹೊಸ ಗ್ರಿಡ್ ಆರಂಭವಾಗಿ ಸಾಕಷ್ಟು ವಿದ್ಯುತ್ ಇದ್ದರೂ ಹೆಸ್ಕಾಂ ಅಧಿಕಾರಿಗಳು ರೈತರಿಗೆ ಹಗಲು ವಿದ್ಯುತ್ ಪೂರೈಸಲು ತಾಂತ್ರಿಕ ಸಮಸ್ಯೆ ಹೇಳುತ್ತಿದ್ದಾರೆ. ಗುಣಮಟ್ಟದ ವಿದ್ಯುತ್ ಪೂರೈಸಿ ಎಂದು ಆಗ್ರಹಿಸಿದರು.

ಜಿಪಂ ಸದಸ್ಯೆ ಅನುಸೂಯಾ ಕುಳೇನೂರು, ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ, ಸದಸ್ಯ ಯಲ್ಲನಗೌಡ್ರ ಕರೇಗೌಡ್ರ, ಮುಖಂಡರಾದ ಸುರೇಶ ಯತ್ನಳ್ಳಿ, ಶಂಕರಪ್ಪ ಮಾತನವರ, ರೇಣುಕಾ ಬರಡಿ, ಸುರೇಶ ಆಸಾದಿ, ನಾಗರಾಜ ಹಾವನೂರು, ಗಂಗಣ್ಣ ಎಲಿ, ಹೆಸ್ಕಾಂ ಇಂಜಿನಿಯರ್ ಎಂ.ಬಿ. ಪಾಟೀಲ, ಎಂ.ಪಿ. ಫಣಿರಾಜ ಗುಪ್ತ, ನಾಗಪ್ಪ ಬೆಳಕೇರಿ, ಹಾಲೇಶ ಅಂತರವಳ್ಳಿ ಇದ್ದರು. ಸಹಾಯಕ ಇಂಜಿನಿಯರ್ ಗೋಪಾಲ ಲಮಾಣಿ, ಎಸ್. ಲಕ್ಕಣ್ಣನವರ ನಿರ್ವಹಿಸಿದರು.

ಬೇಸಿಗೆ ಮುನ್ನವೇ ಹೆಸ್ಕಾಂ ವಲಯಕ್ಕೆ 13 ಸಾವಿರ ಮೆಗಾವಾಟ್ ವಿದ್ಯುತ್ ಬೇಡಿಕೆ ಬಂದಿದೆ. ಕೃಷಿ, ಕೈಗಾರಿಕೆಗೆ ಆದ್ಯತೆ ನೀಡಬೇಕಿದೆ. ಅರಬಗೊಂಡ ವ್ಯಾಪ್ತಿಯ 14 ಗ್ರಾಮಗಳ ರೈತರ ಕೊಳವೆಬಾವಿಗಳಿಗೆ ಹಗಲು 7 ತಾಸು ವಿದ್ಯುತ್ ಪೂರೈಸಲಾಗುವುದು. ಸಾಮರ್ಥವ್ಯನ್ನು 33 ಕೆವಿ ಬದಲಾಗಿ 110ಕ್ಕೆ ಹೆಚ್ಚಿಸಲಾಗುವುದು. | ಎಂ.ಎಂ. ಬೇವಿನಮರ, ಹೆಸ್ಕಾಂ ಮುಖ್ಯ ಇಂಜಿನಿಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net