

ಕಾಗವಾಡ:ಸೆಪ್ಟಂಬರ್ 3ರಿಂದ ಪಂಚಮಸಾಲಿ 2ಎ ಮೀಸಲಾತಿಗಾಗಿ ನಿಪ್ಪಾಣಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ಕಾಗವಾಡ ಪಟ್ಟಣದಲ್ಲಿ ಬುಧವಾರ ತಾಲೂಕು ಪಂಚಮಸಾಲಿ ಸಮುದಾಯದ ಮುಖಂಡರ ಸಭೆ ನಡೆಸಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರ 2ಡಿ ಮೀಸಲಾತಿ ನೀಡಿತ್ತು. ನಮಗೆ 2ಎ ಮೀಸಲಾತಿ ಅವಶ್ಯವಿದೆ. ಇಲ್ಲಿಯವರೆಗೆ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿವೇಶನ ಮುಗಿದ ಬಳಿಕ ಚರ್ಚಿಸಿ ಮೀಸಲಾತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಅಧಿವೇಶನ ಮುಗಿದು ಒಂದುವರೆ ತಿಂಗಳ ಕಳೆದರೂ ಅದರ ಬಗ್ಗೆ ಚರ್ಚೆಗೆ ಅವಕಾಶ ನೀಡಿಲ್ಲ. ಆದ್ದರಿಂದ ಮತ್ತೆ ಹೋರಾಟ ಅನಿವಾರ್ಯವಾಗಿದೆ.
ಸಮುದಾಯದ ಮುಖಂಡರ ನೇತೃತ್ವದಲ್ಲಿ ಬೃಹತ್ ಹೋರಾಟ ರೂಪಿಸಿ ಮೀಸಲಾತಿಪಡೆದುಕೊಳ್ಳುತ್ತೇವೆ ಎಂದರು.ಬಿಜೆಪಿ ಸರ್ಕಾರ ಹೋರಾಟಕ್ಕೆ ಮಣಿದು 2 ಡಿ ಮೀಸಲಾತಿ ನೀಡಿದ್ದರ ತಡೆಗಾಗಿ ಕೋರ್ಟ್ ಮೆಟ್ಟಿಲೇರಿದ್ದೆವು. ನಮಗೆ 2ಎ ಮೀಸಲಾತಿ ಬೇಕಾಗಿದೆ. ಕಾಂಗ್ರೆಸ್ ಸರ್ಕಾರ ಮನಸ್ಸು ಮಾಡಿದರೆ ಅದನ್ನು ತೆರವುಗೊಳಿಸಿ ಮೀಸಲಾತಿ ನೀಡುವ ಎಲ್ಲ ಅವಕಾಶಗಳಿವೆ. ಹೀಗಾಗಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಈ ಹೋರಾಟವು ನಿಪ್ಪಾಣಿಯಿಂದ ಪ್ರಾರಂಭವಾಗಿ ಮೀಸಲಾತಿ ದೊರೆಯುವವರೆಗೂ ರಾಜ್ಯಾದ್ಯಂತ ಮುಂದುವರಿಯಲಿದೆ ಎಂದರು.
ಕಾಗವಾಡ ಪಂಚಮಸಾಲಿ ಸಮಾಜದ ಅಧ್ಯಕ್ಷ ಪ್ರಕಾಶ ಪಾಟೀಲ, ಜ್ಯೋತಿಕುಮಾರ ಪಾಟೀಲ, ಕಾಕಾ ಪಾಟೀಲ, ರಾಜಗೌಡ ಪಾಟೀಲ, ಉಮೇಶಗೌಡ ಪಾಟೀಲ, ಬಸನಗೌಡ ಪಾಟೀಲ, ಬಿ.ಎ.ಪಾಟೀಲ, ಜೆ.ಕೆ.ಪಾಟೀಲ್, ಅಥಣಿ ಪಂಚಮಸಾಲಿ ಅಧ್ಯಕ್ಷ ಅವಿನಾಶ ನಾಯಕ ಇತರರಿದ್ದರು.