ಪಂಚನಾರಾಯಣ ಕ್ಷೇತ್ರ ಎಲ್ಲೋಡು ಬೆಟ್ಟದಲ್ಲಿ ಬೆಂಕಿ, ಅರಣ್ಯ ದಹನ ನಡುವೆ ದೇವಾಲಯಕ್ಕೆ ಹಾನಿ ಇಲ್ಲ

Published on

ಚಿಕ್ಕಬಳ್ಳಾಪುರ: ಸೂಕ್ಷ್ಮ ಜೈವಿಕ ತಾಣ, ಪುರಾಣ ಪ್ರಸಿದ್ಧ  ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದಾಗಿರುವ ಗುಡಿಬಂಡೆ ತಾಲ್ಲೂಕಿನ ಎಲ್ಲೋಡು ಶ್ರೀ ಆದಿನಾರಾಯಣ ಸ್ವಾಮಿ ಬೆಟ್ಟದ 15 ರಿಂದ 20 ಎಕರೆಯಷ್ಟು ಅರಣ್ಯವು ಅಗ್ನಿಗೆ ಆಹುತಿಯಾಗಿದೆ.

ಸಕಾಲಕ್ಕೆ ಅರಣ್ಯ ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ. ಅದೃಷ್ಟವಶಾತ್‌ ಕಾಡ್ಗಿಚ್ಚಿಗೆ ಯಾವುದೇ ಪ್ರಾಣಿಗಳು ಬಲಿಯಾಗಿಲ್ಲ. ಬೆಂಕಿ ಕಂಡೊಡನೆ ಪ್ರಾಣಿಗಳೆಲ್ಲ ಸುರಕ್ಷಿತ ಪ್ರದೇಶಗಳಿಗೆ ಹೋಗಿ ಜೀವ ಉಳಿಸಿಕೊಂಡಿವೆ. ಹಾಗೆಯೇ ಆದಿನಾರಾಯಣ ಸ್ವಾಮಿ ದೇವಾಲಯಕ್ಕೆ ಬೆಂಕಿ ತಾಕಿಲ್ಲ. ದೇವಸ್ಥಾನದ ಹಿಂಭಾಗದವರೆಗೂ ಬೆಂಕಿ ಬಂದಿದೆ.

ಸಾಮಾನ್ಯವಾಗಿ ಈ ಬೆಟ್ಟದಲ್ಲಿ ಯಾರೂ ಮರ ಗಿಡಗಳನ್ನು ಕಡಿಯಲ್ಲ. ಅಷ್ಟೇ ಅಲ್ಲ, ಒಣಗಿಯೋ ಅಥವಾ ಮರದಿಂದ ಮುರಿದು ಬಿದ್ದಿರುವ ಕಡ್ಡಿಗಳನ್ನು ಯಾರೂ ತೆಗೆದುಕೊಂಡು ಹೋಗುವುದಿಲ್ಲ. ಹೀಗಾಗಿ ಈ ಬೆಟ್ಟ ಸುರಕ್ಷಿತ. ಇದನ್ನು ಎಲ್ಲರೂ ದೇವರ ಕಾಡು ಎಂದು ನಂಬುತ್ತಾರೆ. ಹೀಗಾಗಿ ಇಲ್ಲಿ ಕಾಡು ಚೆನ್ನಾಗಿದೆ. ಅದೇ ಆದಿನಾರಾಯಣ ಬೆಟ್ಟದ ಅಕ್ಕಪಕ್ಕದ ಬೆಟ್ಟಗುಡ್ಡಗಳಲ್ಲಿ ಜನರು ಮರಗಿಡ ಕಡಿಯುತ್ತಾರೆ.

ಶ್ರೀಗಂಧ, ಉಲುಬೆ, ಮತ್ತಿ, ಬೇವು ಸೇರಿ ಎಲ್ಲ ಜಾತಿಯ ಮರಗಳೂ ಇವೆ. ನೈಸರ್ಗಿಕವಾಗಿ ಶ್ರೀಗಂಧ, ಕಾಡು ಜಾತಿ ಮರಗಿಡಗಳು ಜಾತಿ ಮರಗಳು‌ ಬಯಲು ಸೀಮೆಯಲ್ಲಿ ಕಾಣುವ ಎಲ್ಲ ರೀತಿಯ ಮರಗಳೂ ಬೆಟ್ಟ ಪ್ರದೇಶದಲ್ಲಿವೆ. ಜತೆಗೆ ಇಲ್ಲಿ ಅಪರೂಪದ ಕೃಷ್ಣಮೃಗಗಳು, ಕರಡಿಗಳು, ಮಂಗಗಳಿವೆ. ಅಪಾರ ಸಂಖ್ಯೆಯಲ್ಲಿ ನವಿಲುಗಳೂ ಇವೆ. ಕೆಲ ದಿನಗಳ ಹಿಂದೆ ಚಿರತೆ ಕಾಣಿಸಿಕೊಂಡಿತ್ತು.

ಬೆಟ್ಟದ ಹಿಂಭಾಗ ಇರುವ ಆಂಧ್ರದ ವೀರಾಪುರ ಗ್ರಾಮದ ಕಡೆಯಿಂದ ಬೆಂಕಿ ಹೊತ್ತಿಕೊಂಡಿರುವ ಅನುಮಾನವಿದೆ. “ಕಾಡಿನಲ್ಲಿ ಆಕಸ್ಮಿಕವಾಗಿಯೂ ಬೆಂಕಿ ಬೀಳುತ್ತದೆ. ರೈತರು ಅರಣ್ಯದ ಪಕ್ಕದ ತಮ್ಮ ಹೊಲಗಳ ಬದುಗಳಲ್ಲಿ ಹುಲ್ಲು ಚೆನ್ನಾಗಿ ಬೆಳೆಯಲಿ ಎಂದು ಬೆಂಕಿ ಹಚ್ಚುತ್ತಾರೆ. ಇನ್ನು ಕೆಲವರು ಬೇಜಾಬ್ದಾರಿಯಿಂದ ಬೀಡಿ ಸಿಗರೇಟ್‌ ಸೇದಿ ಬಿಸಾಡುತ್ತಿರುವುದರಿಂದ ಬೆಂಕಿ ಅವಘಡಗಳು ಸಂಭವಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net