ಪೌರ ಕಾರ್ಮಿಕರನ್ನು ಗೌರವಿಸುವ ಕೆಲಸವಾಗಲಿ

ಪೌರ ಕಾರ್ಮಿಕರನ್ನು ಗೌರವಿಸುವ ಕೆಲಸವಾಗಲಿ
Published on

ಬೇಲೂರು: ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇಗುಲ ಆವರಣ ಹಾಗೂ ಪಟ್ಟಣ ಸ್ವಚ್ಛವಾಗಿರುವ ಬಗ್ಗೆ ದೇಶ ವಿದೇಶಗಳ ಪ್ರವಾಸಿಗರು, ಭಕ್ತರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಈ ಗೌರವ ಪೌರ ಕಾರ್ಮಿಕರಿಗೆ ಸಲ್ಲುತ್ತದೆ ಎಂದು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಹೇಳಿದರು.

ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಚ್ಛತೆಯ ಮೂಲಕ ಜನರ ಆರೋಗ್ಯ ಕಾಪಾಡುವ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕಿದೆ. ಪೌರ ಕಾರ್ಮಿಕರು ನಗರದ ಸ್ವಚ್ಛತೆಗೆ ಮನೆಯ ಬಳಿ ಆಗಮಿಸಿದ ಸಂದರ್ಭ ಅವರನ್ನು ಗೌರವಿಸಬೇಕು. ಪೌರ ಕಾರ್ಮಿಕರು ಮತ್ತು ನೀರು ಸರಬರಾಜು ಮಾಡುವವರು ಕತ್ತಲ ಸಮಯ ಕೆಲಸಕ್ಕೆ ಹೋಗುವುದರಿಂದ ಅವರಿಗೆ ಪುರಸಭೆಯಿಂದ ಸಮವಸ್ತ್ರ ಹಾಗೂ ಗುರುತಿನ ಚೀಟಿ ವಿತರಿಸಲಾಗುತ್ತಿದೆ. ಕಾರ್ಮಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು. ಪೌರ ಕಾರ್ಮಿಕರ ದಿನಾಚರಣೆಯನ್ನು ಹಬ್ಬದ ರೀತಿ ಆಚರಿಸಬೇಕೆಂಬುವುದು ನಮ್ಮೆಲ್ಲರ ಆಶಯವಾಗಿತ್ತು. ಅದರಂತೆ ದೇಗುಲ ಆವರಣದಿಂದ ಮಳೆಯ ನಡುವೆಯೂ ಮೆರವಣಿಗೆ ಮೂಲಕ ಕುಣಿದು ಕುಪ್ಪಳಿಸಿದ್ದು ಸಂತೋಷ ತಂದಿದೆ ಎಂದರು.

ಪುರಸಭೆ ಸದಸ್ಯೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಸ್ವಚ್ಚತಾ ಕಾರ್ಯದಲ್ಲಿ ಪೌರ ಕಾರ್ಮಿಕರು ವೈಯಕ್ತಿಕ ಕೆಲಸ ಮರೆತು ನಿಷ್ಠೆಯಿಂದ ತೊಡಗುತ್ತಿರುವುದರಿಂದ ಸ್ವಚ್ಚತೆಯಲ್ಲಿ ಬೇಲೂರು ಪುರಸಭೆ ಉತ್ತಮ ಹೆಸರು ಪಡೆದಿದೆ. ಅವರಿಗೆ ಪುರಸಭೆಯಿಂದ ಸಿಗುವ ಸವಲತ್ತುಗಳನ್ನು ನೇರವಾಗಿ ಕೊಡಬೇಕು. ಮನೆಗಳಿಂದ ಜನರು ಕಸವನ್ನು ಕೊಡುವ ಸಂದರ್ಭ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ಕೊಟ್ಟಲ್ಲಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ಸರ್ಕಾರ ಸಹ ಪೌರ ಕಾರ್ಮಿಕರು, ನೀರು ಸರಬರಾಜುದಾರರಿಗೆ ಹೆಚ್ಚಿನ ಸೌಲಭ್ಯ ಕೊಡಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್, ಹಾಸನ ನಗರಾಭಿವೃದ್ಧಿ ಕೋಶ ಘನತ್ಯಾಜ್ಯ ತಜ್ಞ ಚಂದ್ರಶೇಖರ್, ಉಪಾಧ್ಯಕ್ಷೆ ಉಷಾ, ಸದಸ್ಯ ಜಮಾಲ್, ಜಗದೀಶ್, ಪ್ರಭಾಕರ್, ಶ್ರೀನಿವಾಸ್, ರತ್ನಕ್ಕ, ಸೌಮ್ಯಾ, ಜಮೀಲಾ, ಆಶಾರಾಣಿ, ಸೌಭಾಗ್ಯ ಆಂತೋಣಿ, ಆರೋಗ್ಯ ನಿರೀಕ್ಷಕ ಜ್ಯೋತಿ, ಲೋಹಿತ್, ಮೇಸ್ತ್ರಿ ಹರೀಶ್ ತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net