ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಲ್ಲ

avanna mayakeri
Published on

ಕಲಬುರಗಿ: ಕೋಲಿ, ಕಬ್ಬಲಿಗ ಸಮಾಜದ ಜನರ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಕೋಲಿ, ಕಬ್ಬಲಿಗ ಸಮನ್ವಯ ಸಮಿತಿ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ ಹೇಳಿದರು.

ಕಲಗುರ್ತಿಯಲ್ಲಿ ಕೋಲಿ ಸಮಾಜದ ಯುವಕ ದೇವಾನಂದ ಕೊರಬಾ ಸಾವಿಗೆ ಕಾರಣರಾದ ಆರೋಪಿ ಮತ್ತು ಕಿರುಕುಳ ನೀಡಿರುವ ಪೊಲೀಸರನ್ನು ವಜಾಗೊಳಿಸುವಂತೆ ಆಗ್ರಹಿಸಿ ಒಂದು ತಿಂಗಳಿಂದ ಹೋರಾಟ ಮಾಡುತ್ತಿದ್ದು, ನಮ್ಮ ಧ್ವನಿ ಅಡಗಿಸಲು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಇಂತಹ ನೂರು ಕೇಸ್ ಹಾಕಿದರೂ ಹೋರಾಟ ನಿಲ್ಲುವುದಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕ್ರಮ ಕೈಗೊಂಡು, ವರದಿ ಸಲ್ಲಿಸುವಂತೆ ಸೂಚನೆ ನೀಡಿದರೂ ಇಲ್ಲಿವರೆಗೂ ಯಾವುದೇ ಕೆಲಸ ಆಗಿಲ್ಲ ಎಂದು ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ದೂರಿದರು.

ಜಿಲ್ಲಾ ಉಸ್ತುವಾರಿ ಸಚಿವರು ಆರೋಪಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಸಚಿವರು ಕೀಳು ಮಟ್ಟದ ರಾಜಕೀಯ ಬಿಟ್ಟು ಕೋಲಿ ಸಮಾಜಕ್ಕೆ ನ್ಯಾಯ ಕಲ್ಪಿಸಬೇಕು. ದೇವಾನಂದ ಸಾವಿನ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ತಪ್ಪು ಮಾಡಿದ ಪೊಲೀಸರನ್ನು ವಜಾಗೊಳಿಸಬೇಕು. ಮೃತನ ಕುಟುಂಬಕ್ಕೆ ೨೫ ಲಕ್ಷ ರೂ. ಪರಿಹಾರ ಮತ್ತು ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು. ಕಲಗುರ್ತಿ ಬಾಲಕಿ ಅಪಹರಣವಾಗಿ ೮೦ ದಿನವಾದರೂ ಇನ್ನು ಪತ್ತೆಯಾಗಿಲ್ಲ. ಬಾಲಕಿ ಪತ್ತೆ ಮಾಡಿ ಕುಟುಂಬಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಬಸವರಾಜ, ಮೋಹನ ಪಾಟೀಲ್​, ನಿಂಗಪ್ಪ ದೇವಣಗಾಂವ್, ಗುಂಡು ಐನಾಪುರ, ಬಸವರಾಜ ಗುಂಡರಗೇರಿ, ಅಮೃತ ಡಿಗ್ಗಿ, ಸುರೇಶ ಹುಡಗಿ, ರವಿ ಡೊಂಗರಗಾಂವ್, ಪ್ರೇಮ ಕೋಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net