

ಬೆಳಗಾವಿ: ಕಾನೂನು ವಿದ್ಯಾರ್ಥಿಗಳು ಕೇವಲ ಪದವಿಗಾಗಿ ಅಧ್ಯಯನ ಮಾಡದೇ, ಪದವಿ ಜತೆಗೆ ಸಮಾಜದಲ್ಲಿ ಜನರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ವಕೀಲ ವೃತ್ತಿಯ ಮೂಲಕ ಶ್ರಮಿಸಬೇಕು ಎಂದು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ.ಸಿ.ಬಸವರಾಜು ಹೇಳಿದರು.
ನಗರದ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ 2024-25ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಒಕ್ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿನ ಅನ್ಯಾಯ, ಭ್ರಷ್ಟಾಚಾರಗಳನ್ನು ತಡೆಗಟ್ಟಲು ಮತ್ತು ನೊಂದವರಿಗೆ ನ್ಯಾಯ ಕೊಡಿಸಲು ಕಾನೂನು ವಿಷಯಗಳ ಅಧ್ಯಯನ ಮಹತ್ವದಾಗಿದೆ. ಕಾನೂನು ವಿದ್ಯಾರ್ಥಿಗಳು ಸಮಾಜ ಸುಧಾರಣೆಗಾಗಿ ಜ್ಞಾನವನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಸಮಾಜಕ್ಕೆ ಮಾರ್ಗದರ್ಶಕರಿದ್ದಂತೆ, ನ್ಯಾಯದ ಪರವಾಗಿ ಸದಾ ಕೆಲಸ ಮಾಡಬೇಕು ಎಂದರು. ಜಿಮಖಾನ್ ಯೂನಿಯನ್ ಅಧ್ಯಕ್ಷ ಡಾ.ಡಿ.ಪ್ರಸನ್ನಕುಮಾರ್, ಅಮಿತ್ ಬಿ.ಜಾಧವ, ವೈಷ್ಣವಿ ಕೊಣ್ಣೂರ ನಿರೂಪಿಸಿ, ವಂದಿಸಿದರು.