

ಬಾಗಲಕೋಟೆ: ಕಾನೂನು, ಸಂವಿಧಾನ ಎಲ್ಲರಿಗೂ ಒಂದೇ. ಇದರಲ್ಲಿ ತಿಳಿದುಕೊಂಡು ನಡೆದುಕೊಳ್ಳುವುದು ಬಹಳಷ್ಟು ಅಗತ್ಯವಾಗಿದೆ. ಹೀಗಾಗಿ ಕಾನೂನು ಕಾರ್ಯಾಗಾರ ಕಾಲ ಕಾಲಕ್ಕೆ ಮಾಡಬೇಕು. ನ್ಯಾಯಾಧೀಶರು, ವಕೀಲರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅನೀಲ ಕಟ್ಟಿ ಹೇಳಿದರು.
ನವನಗರದ ವಕೀಲರ ಭವನದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು, ನ್ಯಾಯಾವಾದಿಗಳ ಸಂಘ ಬಾಗಲಕೋಟೆ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಾನೂನು ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂತಹ ಕಾರ್ಯಾಗಾರ ವಕೀಲರ ವೃತ್ತಿ ನೈಪುಣ್ಯತೆ ಹೆಚ್ಚುತ್ತದೆ. ನ್ಯಾಯಾಧೀಶರಿಗೂ ಅತ್ಯವಶ್ಯಕ. ಇಂತಹ ಕಾರ್ಯಾಗಾರಗಳು ಹೊಸ ಹೊಸ ಕಾನೂನುಗಳ ಮೇಲೆ ಬೆಳಕು ಚೆಲ್ಲುತ್ತವೆ. ಇದರಿಂದ ಪ್ರಕರಣಗಳು ಸ್ಪಷ್ಟವಾಗಿ, ನಿಽðಷ್ಟವಾಗಿ ಇತ್ಯರ್ಥವಾಗುವ ಮೂಲಕ ನೊಂದ ಪಕ್ಷಗಾರರಿಗೆ ನ್ಯಾಯ ಒದಗಿಸಲು ಸಹಕಾರಿಯಾಗಲಿವೆ. ಬಾಗಲಕೋಟೆಯಲ್ಲಿ ಕಾನೂನು ಪಂಡಿತರು ಸೇವೆ ಸಲ್ಲಿಸಿದ್ದಾರೆ. ಬಾಗಲಕೋಟೆ ವಕೀಲರ ಸಹಕಾರ ಮರೆಯಲು ಸಾಧ್ಯವಿಲ್ಲ ಎಂದರು.
ಮಾಜಿ ಸಚಿವ, ನ್ಯಾಯವಾದಿ ಎಸ್.ಆರ್.ಪಾಟೀಲ ಮಾತನಾಡಿ, ನಾನು ಬಾಗಲಕೋಟೆ ವಕೀಲರ ಸಂಘದ ಸದಸ್ಯ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ವಕೀಲರ ಸಂಘ ಆಯೋಜಿಸಿದ್ದ ಈ ವೃತ್ತಿ ನೈಪುಣ್ಯತೆ ಉನ್ನತಿಗಾಗಿ ನಡೆದ ಕಾರ್ಯಾಗಾರ ಪದೇ ಪದೇ ನಡೆಯುಂತಾಗಬೇಕು. ವಕೀಲರು ಕೇವಲ ನ್ಯಾಯಾಲಯದ ಆವರಣದಲ್ಲಿ ಕೆಲಸ ಮಾಡಿದರೆ ಸಾಲದು ಸಮಾಜದ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಅನ್ಯಾಯಕ್ಕೆ ಒಳಗದ ಸಮಾಜಗಳ ಏಳಿಗೆಗಾಗಿ ಹಗಲಿರುಳು ಹೋರಾಡಬೇಕು. ಕೃಷ್ಣ ಮುಳುಗಡೆ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿಗಾಗಿ ಸರ್ಕಾರಗಳ ಮೇಲೆ ಒತ್ತಡ ಹೇರಲು ಹೋರಾಟ ರೂಪಿಸಬೇಕು ಎಂದು ಸಲಹೆ ನೀಡಿದರು.
ವಿ.ಪ ಸದಸ್ಯ ಹಿರಿಯ ನ್ಯಾಯವಾದಿ ಪಿ.ಎಚ್.ಪೂಜಾರ ಮಾತನಾಡಿ, ನಾನು ಈ ಹಂತಕ್ಕೆ ಏರಲು ಬಾಗಲಕೋಟೆ ವಕೀಲರ ಸಂಘದ ಪಾತ್ರ ಮಹತ್ವದಾಗಿದೆ. ವಕೀಲರ ಸಂಘದಲ್ಲಿರುವ ಗ್ರಂಥಾಲಯ ಮೇಲ್ದರ್ಜೆಗೆ ಏರಿಸಬೇಕು. ಇ ಲೈಬ್ರರಿ ಅಭಿವೃದ್ಧಿ ಪಡಿಸಲು ಈ ಸದ್ಯ ೫ ಲಕ್ಷ ರೂ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ವಿ.ಪ ಸದಸ್ಯ, ನ್ಯಾಯವಾದಿ ಹನುಮಂತ ನಿರಾಣಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ರಮೇಶ ಬದ್ನೂರ, ಕಾರ್ಯದರ್ಶಿ ಪಿ.ಎಚ್.ನಾರಾಯಣಕರ ಉಪಸ್ಥಿತರಿದ್ದರು. ನ್ಯಾಯವಾದಿ ಸುಲೀಲ ಕಿರಸೂರ ನಿರೂಪಿಸಿದರು.