

ಸೋಮವಾರಪೇಟೆ: ತಾಲೂಕಿನ ನೇರುಗಳಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿಗೆ ಆಂಗ್ಲ ಮಾಧ್ಯಮದಲ್ಲಿ ಒಂದನೇ ತರಗತಿಗೆ ಪ್ರಾರಂಭ ಮಾಡಲು ಸರ್ಕಾರ ಅನುಮತಿ ನೀಡಿದ್ದು, ಉದ್ಯಮಿ ವಿ.ಎಂ.ವಿಜಯ ಬುಧವಾರ ಚಾಲನೆ ನೀಡಿದರು.
ಗ್ರಾಮೀಣ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಮಕ್ಕಳು ಉದ್ಯೋಗ ಪಡೆಯಬೇಕು. ಪ್ರಾಥಮಿಕ ಹಂತದಲ್ಲೇ ಗ್ರಾಮೀಣ ಮಕ್ಕಳಿಗೂ ಎಲ್ಲ ರೀತಿಯ ತರಬೇತಿ ಸಿಗಬೇಕು. ಸರ್ಕಾರವೂ ಸೌಲಭ್ಯಗಳನ್ನು ನೀಡಬೇಕು. ಇದರ ಜತೆಯಲ್ಲಿ ದಾನಿಗಳ ಸಹಕಾರವೂ ಅತ್ಯವಶ್ಯಕವಾಗಿದೆ ಎಂದು ವಿ.ಎಂ.ವಿಜಯ ಅಭಿಪ್ರಾಯಪಟ್ಟರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ.ಡಿಸಿಲ್ವಾ ಮಾತನಾಡಿ, ಅಂಕುರಂ ಹಿರಿಯ ವಿದ್ಯಾರ್ಥಿಗಳ ಎಜುಕೇಷನ್ ಟ್ರಸ್ಟ್ ವತಿಯಿಂದ ಸುಮಾರು 20 ಲಕ್ಷ ರೂ.ವೆಚ್ಚದಲ್ಲಿ 5 ಕೊಠಡಿಗಳನ್ನು ನವೀಕರಣ ಮಾಡುವ ಮೂಲಕ ಅದರಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಗಿದೆ. ನಮ್ಮೂರಿನ ಶಾಲೆಯಲ್ಲಿ ಹೆಚ್ಚು ಮಕ್ಕಳು ದಾಖಲಾಗಬೇಕು. ಪಾಲಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಕುಮಾರ್ ಮಾತನಾಡಿ, ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಸರ್ಕಾರ ನೀಡಿರುವ ಈ ಸವಲತ್ತನ್ನು ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಪಾಲಕರು ಬಳಸಿಕೊಳ್ಳಬೇಕೆಂದರು
ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ದಿಲೀಪ್ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಪುಷ್ಪಾ, ಪ್ರಕಾಶ್, ಅಜಿತ್‌ಕುಮಾರ್, ವಿನಯ್, ಸಂಭ್ರಮ್, ಅಂಕುರಂ ಹಿರಿಯ ವಿದ್ಯಾರ್ಥಿಗಳ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಭೋಜೆಗೌಡ, ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರವಿಕಮಾರ್, ಪ್ರೌಢಶಾಲಾ ಮುಖ್ಯಶಿಕ್ಷಕಿ ರಾಜೇಶ್ವರಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಎಸ್ತೆಲಾ ಇದ್ದರು.