

ಕಲಬುರಗಿ: ಪಿಎಸ್ಐ ನೇಮಕ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ನಡೆಸಿ ಸಿಐಡಿ ವಶದಲ್ಲಿರುವ ಕಿಂಗ್ಪಿನ್ ರುದ್ರಗೌಡ ಪಾಟೀಲ್ ಆಂಡ್ ಗ್ಯಾಂಗ್ ಕರೊನಾ ಸಮಯದಲ್ಲಿ ಸತ್ತ ವ್ಯಕ್ತಿಯೊಬ್ಬರಿಗೆ ಸೇರಿದ ಎರಡು ಸಿಮ್ ಕಾರ್ಡ್ ಮೂಲಕ ಅಕ್ರಮ ಎಸಗಿರುವುದು ಬೆಳಕಿಗೆ ಬಂದಿದೆ.
ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಲಕ್ಷ್ಮೀಪುತ್ರ ಎಂಬುವರು ಕೋವಿಡ್ಗೆ ಬಲಿಯಾಗಿದ್ದರು. ಅವರಿಗೆ ಸೇರಿದ್ದ ಎರಡು ಮೊಬೈಲ್ಗಳನ್ನು ತಂದು ಅದರಲ್ಲಿನ ಸಿಮ್ ಬಳಸಲಾಗಿದೆ. ಪಿಎಸ್ಐ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸುವಾಗ ಕರೆ ಮಾಡಲು ಈ ಮೊಬೈಲ್ ಸಂಖ್ಯೆಗಳನ್ನೇ ಬಳಸಿಕೊಂಡಿದ್ದರು ಎಂಬುದು ಸಿಐಡಿ ತನಿಖೆಯಲ್ಲಿ ಗೊತ್ತಾಗಿದೆ. ಅಕ್ರಮ ನಡೆಸಿದರೂ ಸಿಕ್ಕಿ ಬೀಳಬಾರದು ಎಂದು ಸತ್ತ ವ್ಯಕ್ತಿಯ ಹೆಸರಿನಲ್ಲಿದ್ದ ಸಿಮ್ಳನ್ನು ಬಳಸಿಕೊಳ್ಳಲಾಗಿದೆ.
ಈ ಬಗ್ಗೆ ಸಿಐಡಿ ವಿಚಾರಣೆ ವೇಳೆ ರುದ್ರಗೌಡ ಪಾಟೀಲ್ ಹೇಳಿದ್ದು, ಪಿಎಸ್ಐ ಇತರ ಪರೀಕ್ಷೆಗಳಲ್ಲಿ ಹೀಗೆ ಮಾಡಿರುವ ಶಂಕೆ ಬಲಗೊಂಡಿದೆ. ಅಕ್ರಮ ಮಾಡುವಾಗ ಮತ್ತೊಬ್ಬರ ಮೊಬೈಲ್ ಬಳಸಬೇಕೆಂದು ಡೀಲ್ ಮಾಡಿಕೊಂಡ ಅಭ್ಯರ್ಥಿಗಳಿಗೆ ಸಲಹೆ ನೀಡುತ್ತಿದ್ದ. ಇದೇ ಕಾರಣಕ್ಕೆ ಶಾಸಕರ ಗನ್ವ್ಯಾನ್ ಹಯ್ಯಾಳಿ ದೇಸಾಯಿ, ಸಿಎಆರ್ ಪೇದೆ ರುದ್ರಗೌಡ ಎಂಬುವರ ಸಿಮ್ ಬಳಸಿದ್ದಾನೆ ಎನ್ನಲಾಗಿದೆ.
ಪರೀಕ್ಷೆ ಬರೆದ ಅಭ್ಯರ್ಥಿಗಳು ಸಹ ಬೇರೆಯವರ ಮೊಬೈಲ್ ಬಳಸಿರುವ ಶಂಕೆ ಹೆಚ್ಚಿರುವುದರಿಂದ ಈಗ ಉಳಿದವರು ಯಾರಿಗೆ ಸೇರಿದ ಸಂಖ್ಯೆ ಬಳಸಿದ್ದಾರೆ ಎಂಬ ಮಾಹಿತಿ ಕಲೆ ಹಾಕಲು ಸಿಐಡಿ ಟೀಮ್ ಶುರುವಿಟ್ಟಿದೆ. ಸಿಐಡಿ ಕಸ್ಟಡಿಯಲ್ಲಿರುವ ಬಂಧಿತರನ್ನು ಡ್ರಿಲ್ ಮಾಡುವ ಮೂಲಕ ತೀವ್ರ ವಿಚಾರಣೆಗೆ ಒಳಪಡಿಸುತ್ತಿದೆ. ಕ್ಷಣಕ್ಷಣಕ್ಕೂ ಸ್ಪೋಟಕ ಮಾಹಿತಿಗಳ ಜತೆಗೆ ಅಕ್ರಮದ ಕರಾಳಮುಖಗಳು ಬಯಲಿಗೆ ಬರುತ್ತಿವೆ.
ಒಡಿಶಾದಲ್ಲಿ ಡಿವೈಸ್ ಖರೀದಿ: ಪಿಎಸ್ಐ ನೇಮಕ ಪರೀಕ್ಷೆಯಲ್ಲಿ ನಕಲು ಮಾಡಲು ಡೀಲ್ ಕುದುರಿದ ಅಭ್ಯರ್ಥಿಗಳಿಗೆ ರುದ್ರಗೌಡ ಪಾಟೀಲ್ ಗ್ಯಾಂಗ್ನವರು ನೀಡಿದ ಬ್ಲೂಟೂತ್ ಡಿವೈಸ್ ಒಡಿಶಾದಲ್ಲಿ ಖರೀದಿಸಿದ ಮಾಹಿತಿ ಲಭ್ಯವಾಗಿದೆ. ಮೊದಲೇ ಪ್ರಶ್ನೆ ಪತ್ರಿಕೆಗಳನ್ನಾಧರಿಸಿ ಉತ್ತರಗಳನ್ನು ಸಿದ್ಧಪಡಿಸಿಕೊಂಡು ಇರುತ್ತಿದ್ದರು. ಬಳಿಕ ಬ್ಲೂಟೂತ್ ಡಿವೈಸ್ ಮೂಲಕ ಮೊಬೈಲ್ ಬಳಸಿ ಅಭ್ಯರ್ಥಿಗಳಿಗೆ ಹೇಳಲಾಗುತ್ತಿತ್ತು. ಕೇಂದ್ರದ ಮೇಲ್ವಿಚಾರಕರ ಮೂಲಕವೇ ಆ ಡಿವೈಸ್ಗಳನ್ನು ಅಭ್ಯರ್ಥಿಗಳಿಗೆ ತಲುಪಿಸಲಾಗಿತ್ತು ಎಂದು ಹೇಳಲಾಗಿದೆ. ಪರೀಕ್ಷೆ ಮುಗಿದ ನಂತರ ಅವನ್ನು ಮರಳಿ ಸಂಗ್ರಹಿಸಲಾಗುತ್ತಿತ್ತು ಎಂದು ವಿಚಾರಣೆ ವೇಳೆ ಗೊತ್ತಾಗಿದೆ.
ಸೆಲ್ನಲ್ಲೂ ರಾಜಾತಿಥ್ಯ!: ಕಿಂಗ್ಪಿನ್ ರುದ್ರಗೌಡ ಪಾಟೀಲ್ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ ಸಿಗುತ್ತಿರುವಂತಿದೆ. ಸಿಐಡಿ ಕಸ್ಟಡಿಯಲ್ಲಿರುವ ಅವರನ್ನು ವಿಚಾರಣೆ ಬಳಿಕ ಎಂಬಿ ನಗರ ಠಾಣೆ ಸೆಲ್ನಲ್ಲಿ ಇಡಲಾಗುತ್ತಿದೆ. ಸೆಲ್ನಲ್ಲಿರುವಾಗಲೂ ಆತನಿಗೆ ಕುರ್ಚಿ ನೀಡಲಾಗಿದೆ. ಸೆಲ್ನಲ್ಲಿ ಆತ ಕುರ್ಚಿ ಮೇಲೆ ಕುಳಿತಿದ್ದರೆ, ಆತನೊಂದಿಗೆ ಬಂಧಿತರಾಗಿರುವ ತಾಪಂ ಮಾಜಿ ಸದಸ್ಯ ಮಲ್ಲುಗೌಡ ಬಿದನೂರ ಇದ್ದಾರೆ. ಬಂಧಿತ ಸಹೋದರರಾದ ರುದ್ರಗೌಡ ಪಾಟೀಲ್ ಮತ್ತು ಮಹಾಂತೇಶ ಪಾಟೀಲ್ ಅವರ ಉಡಾಫೆ ಮುಂದುವರಿದಂತಿದೆ. ನಿನ್ನೆ ರುದ್ರಗೌಡ ಪುಕ್ಕಟೆ ಪ್ರಚಾರ ಕೊಡುತ್ತೀರಿ ಎಂದರೆ, ಸೋಮವಾರ ಮಹಾಂತೇಶ ಸಹ ಮಾಧ್ಯಮದವರಿಗೆ ಥ್ಯಾಂಕ್ಸ್ ಎಂದಿದ್ದಾರೆ. ನಮಗೆ ಬಿಟ್ಟಿ ಪ್ರಚಾರ ಕೊಡಲಾಗುತ್ತಿದೆ ಎಂದು ಹೇಳುವಾಗ ಸಿಐಡಿಯವರು ಮುಂದಕ್ಕೆ ಎಳೆದುಕೊಂಡು ಹೋದರು.
ಅಧಿಕಾರಿಗಳೊಂದಿಗೆ ಸಿಐಡಿ ಡಿಜಿಪಿ ಸಭೆ: ಪಿಎಸ್ಐ ಪರೀಕ್ಷೆ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ ತಂಡದ ಅಧಿಕಾರಿಗಳೊಂದಿಗೆ ಸಿಐಡಿ ಡಿಜಿಪಿ ಪಿ.ಎಸ್. ಸಂಧು ಸೋಮವಾರ ನಗರದಲ್ಲಿ ಸಭೆ ನಡೆಸಿದರು. ಸಿಐಡಿ ಎಸ್ಪಿ ರಾಘವೇಂದ್ರ ಭಟ್, ಡಿವೈಎಸ್ಪಿ ಗಳಾದ ಶಂಕರಗೌಡ ಪಾಟೀಲ್, ಪ್ರಕಾಶ ರಾಠೋಡ್, ಇನ್ಸ್ಪೆಕ್ಟರ್ ದಿಲೀಪಕುಮಾರ ಇತರರ ಜತೆ ಸಭೆ ನಡೆಸಿ ತನಿಖೆಯ ಪ್ರಗತಿ ಕುರಿತು ಮಾಹಿತಿ ಪಡೆದು ಹಲವು ಸಲಹೆಗಳನ್ನು ನೀಡಿದರು. ಅಕ್ರಮದಲ್ಲಿ ಯಾರೇ ಶಾಮೀಲಾಗಿರಲಿ, ಸೆರೆ ಹಿಡಿಯಿರಿ. ಅಲ್ಲದೆ ಬಿಜೆಪಿ ನಾಯಕಿ ದಿವ್ಯಾರನ್ನು ಬೇಗ ಬಂಧಿಸುವಂತೆ ಸೂಚಿಸಿದರು ಎಂದು ಗೊತ್ತಾಗಿದೆ.
2 ವಾರವಾದರೂ ಪತ್ತೆಯಾಗದ ದಿವ್ಯಾ ಹಾಗರಗಿ: ಪಿಎಸ್ಐ ಪರೀಕ್ಷೆ ಅಕ್ರಮ ಬಯಲಿಗೆ ಬಂದು 15 ದಿನಗಳಾದರೂ ಅಕ್ರಮದ ತಾಣವಾದ ಜ್ಞಾನಜ್ಯೋತಿ ಶಾಲೆ ಒಡತಿ ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಪತ್ತೆಯಾಗದಿರುವುದು ಸೋಜಿಗ. ರುದ್ರಗೌಡ ಪಾಟೀಲನಂತಹ ಕುಳವನ್ನೇ ಹಿಡಿದಿರುವಾಗ ದಿವ್ಯಾ ಬಂಧನ ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ದಿವ್ಯಾಗೆ ಬಂಧಿಸುತ್ತಿಲ್ಲ ಎಂದರೆ ಯಾರಾದರೂ ಪ್ರಭಾವಿ ರಾಜಕಾರಣಿಯ ಆಶ್ರಯ ಪಡೆದಿರಬೇಕು ಎಂಬ ಚರ್ಚೆ ನಡೆದಿದೆ. ದಿನಕ್ಕೊಂದು ಸಿಮ್ ಬದಲಿಸಿ ದಿವ್ಯಾ ಓಡಾಡುತ್ತಿದ್ದಾರೆ ಎನ್ನಲಾಗುತ್ತಿದೆ. ದಿವ್ಯಾ ಹಾಗರಗಿಗಾಗಿ ಕರ್ನಾಟಕ, ಮಹಾರಾಷ್ಟ್ರ , ತೆಲಂಗಾಣದಲ್ಲಿ ಸಿಐಡಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಜೆಇ-ಎಇಯಲ್ಲೂ ಅಕ್ರಮ: ಇತ್ತೀಚೆಗೆ ಜರುಗಿರುವ ಲೋಕೋಪಯೋಗಿ ಇಲಾಖೆಯ ಜೆಇ ಮತ್ತು ಎಇ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ಸೇಂಟ್ ಜಾನ್ ಪ್ರೌಢಶಾಲೆ ಕೇಂದ್ರದಲ್ಲಿ ಅಕ್ರಮ ನಡೆದಿತ್ತು. ಅಲ್ಲದೆ ಪ್ರಶ್ನೆಪತ್ರಿಕೆ ಪರೀಕ್ಷೆಗೂ ಮುನ್ನವೇ ಲೀಕ್ ಮಾಡಲಾಗಿತ್ತು. ಇದು ಬೆಳಕಿಗೆ ಬಂದರೂ ತನಿಖೆ ಮಾಡಿಸಲಿಲ್ಲ ಎಂಬುದು ಗೊತ್ತಾಗಿದೆ.
ತಂತ್ರಜ್ಞಾನಕ್ಕೆ ಮೊರೆ: ಪರೀಕ್ಷಾ ಅಕ್ರಮದ ಜಾಡು ಹಿಡಿದು ಹೊರಟಿರುವ ಸಿಐಡಿ ತಂಡ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳ ಜನ್ಮ ಜಾಲಾಡಲು ಮುಂದಾಗಿದೆ. ಅಕ್ರಮ ಪತ್ತೆಗೆ ತಂತ್ರಜ್ಞಾನದ ಮೊರೆ ಹೋಗಿರುವ ಸಿಐಡಿ ಅಧಿಕಾರಿಗಳು ಸ್ಮಾರ್ಟ್ ಐಡಿಯಾಗಳನ್ನು ಮಾಡುತ್ತಿದ್ದಾರೆ.
ಬೆಂಗಳೂರು: ಪೊಲೀಸ್ ಸಬ್ಇನ್ಸ್ಪೆಕ್ಟರ್ ನೇಮಕ ಅಕ್ರಮಕ್ಕೆ ಸಂಬಂಧಿಸಿದಂತೆ ಸಾಕ್ಷಿ ಕೊಡುವಂತೆ ಸೂಚಿಸಿ ಸಿಐಡಿ ನೀಡಿದ್ದ ನೋಟಿಸ್ಗೆ ಶಾಸಕ, ಕಾಂಗ್ರೆಸ್ ವಕ್ತಾರ ಪ್ರಿಯಾಂಕ್ ಖರ್ಗೆ ಗರಂ ಆಗಿದ್ದು, ವಿಚಾರಣೆಯಿಂದ ದೂರ ಉಳಿದು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಈ ನೋಟೀಸ್ನಿಂದ ಈ ಸರ್ಕಾರ ಹಾಗೂ ಗೃಹ ಇಲಾಖೆಯ ಕಾರ್ಯವೈಖರಿ, ಅಸಮರ್ಥತೆಗೆ ಸಾಕ್ಷಿಯಾಗಿದೆ. ನನ್ನಿಂದ ಸಾಕ್ಷಿ ಕೇಳುವುದಾದರೆ, ನೀವೇನು ಕತ್ತೆ ಕಾಯುತ್ತಿದ್ದೀರಾ? ಗೃಹ ಇಲಾಖೆ ಏನು ಮಾಡುತ್ತಿದೆ? ಈ ಆಡಿಯೋ ಬಹಿರಂಗವಾಗಿ 3-4 ದಿನಗಳಾದರೂ ಎಫ್ಐಆರ್ ಏಕೆ ದಾಖಲಾಗಿಲ್ಲ? ಇದಕ್ಕೆ ಮೂರು ದಿನ ಕಾಲಾವಕಾಶ ಬೇಕೆ? ಇದರಿಂದ ಈ ಅಕ್ರಮದಲ್ಲಿ ಗೃಹ ಇಲಾಖೆ, ಗೃಹ ಸಚಿವರು ಶಾಮೀಲಾಗಿದ್ದಾರೆ ಎಂದು ಭಾವಿಸಬಹುದೇ? ಎಂದು ಪ್ರಶ್ನಿಸಿದರು. ನಾನು ಯಾವುದೇ ಪತ್ರಿಕಾಗೋಷ್ಠಿಯಲ್ಲಿ ನನ್ನ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಹೇಳಿಕೊಂಡಿಲ್ಲ. ನಾನು ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ಸಾಕ್ಷ್ಯಾಧಾರಗಳನ್ನಷ್ಟೇ ಮಾಧ್ಯಮಗಳ ಮುಂದಿಟ್ಟಿದ್ದೇನೆ. ಸಾರ್ವಜನಿಕ ವಲಯಗಳಲ್ಲಿ ಇರುವ ಮಾಹಿತಿ ಅವರ ಬಳಿ ಇಲ್ಲ ಎಂದು ಹೇಳುತ್ತಿರುವುದು ಬಹಳ ಆಶ್ಚರ್ಯವಾಗುತ್ತಿದೆ ಎಂದರು.
ಅಕ್ರಮ ಬಯಲು ಮಾಡಿದ ನಾಯಕರಿಗೆ ನೋಟೀಸ್ ಜಾರಿ ಮಾಡಿ ಮುಂದೆ ಯಾರೂ ನಿಮ್ಮ ವಿರುದ್ಧ ಧ್ವನಿ ಎತ್ತದಂತೆ ಮಾಡಲು ಪ್ರಯತ್ನಿಸುತ್ತಿದ್ದೀರಾ? ಹೆದರಿಸುತ್ತಿ ದ್ದೀರಾ? ಪ್ರಾಣ ಹೋದರೂ ಸರಿಯೇ, ನಮ್ಮ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸಿಐಡಿ ಪೊಲೀಸರು ಪ್ರಿಯಾಂಕ್ ಖರ್ಗೆ ವಿಚಾರಣೆಗೆ ನೋಟೀಸ್ ನೀಡಿದ್ದನ್ನು ನೋಡಿದರೆ, ಬಿಜೆಪಿ ನಾಯಕರು ಹಗರಣದ ಬಗ್ಗೆ ಮಾತನಾಡುವವರ ಬಾಯಿಮುಚ್ಚಿಸುವ ಹುನ್ನಾರ ನಡೆಸುತ್ತಿರುವಂತೆ ಕಾಣುತ್ತಿದೆ. | ಸಿದ್ದರಾಮಯ್ಯ ವಿಧಾನಸಭೆ ವಿಪಕ್ಷ ನಾಯಕ ಸಿಐಡಿ ಅಧಿಕಾರಿಗಳ ಮುಂದೆ ಪ್ರಿಯಾಂಕ್ ಖರ್ಗೆ ಹಾಜರಾಗಿ, ತನಿಖೆಗೆ ಸಹಕರಿಸುವ ಬದಲು ಪಲಾಯನ ಮಾಡಿದ್ದಾರೆ. ಸಾಕ್ಷ್ಯಾಧಾರಗಳನ್ನು ನೀಡದೆ ಇರುವ ನಿರ್ಧಾರದ ಹಿಂದೆ ಬಂಧಿತರಾದ ತಮ್ಮ ಆಪ್ತರ ರಕ್ಷಿಸುವ ಇರಾದೆಯಿದೆ ಎಂಬ ಸಂಶಯವಿದೆ. ನಿಷ್ಪಕ್ಷಪಾತ ತನಿಖೆ ನಡೆಯುತ್ತಿದ್ದು, ಎಷ್ಟೇ ದೊಡ್ಡವರಾದರೂ ರಕ್ಷಿಸುವ ಪ್ರಶ್ನೆಯಿಲ್ಲ. | ಆರಗ ಜ್ಞಾನೇಂದ್ರ ಗೃಹ ಸಚಿವ
ಸಚಿವರ ಸಮರ್ಥನೆ: ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಿ, ವಿಚಾರಣೆಗೆ ಆಹ್ವಾನಿಸಿದ ಸಿಐಡಿ ಅಧಿಕಾರಿಗಳ ಕ್ರಮವನ್ನು ಸಚಿವರಾದ ಆರ್.ಅಶೋಕ್, ಎಸ್.ಟಿ. ಸೋಮಶೇಖರ್ ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗಾರರಿಗೆ ಪ್ರತ್ಯೇಕವಾಗಿ ಪ್ರತಿಕ್ರಿಯಿಸಿದ ಸಚಿವರು, ಪಿಎಸ್ಐ ಹುದ್ದೆಗಳಿಗೆ ನೇರ ನೇಮಕ ಪರೀಕ್ಷಾ ಅಕ್ರಮದ ಬಗ್ಗೆ ಸಿಐಡಿ ತನಿಖೆ ಚುರುಕಾಗಿ ಸಾಗಿದೆ. ಇದೇ ವೇಳೆ ಅಕ್ರಮಕ್ಕೆ ಸಂಬಂಧಿಸಿದ್ದು ಎಂದು ಆಡಿಯೋವೊಂದನ್ನು ಪ್ರಿಯಾಂಕ್ ಬಿಡುಗಡೆ ಮಾಡಿದ್ದು, ಅವರ ಬಳಿ ಇನ್ನೂ ಹೆಚ್ಚಿನ ದಾಖಲೆಗಳಿರಬಹುದು ಎಂಬ ಕಾರಣ ತನಿಖಾ ತಂಡ ನೋಟಿಸ್ ಜಾರಿ ಮಾಡಿರುವ ಸಾಧ್ಯತೆಗಳಿವೆ ಎಂದರು.
ಬೆಂಗಳೂರು: ಜಿಲ್ಲಾ ಹಾಲು ಒಕ್ಕೂಟಗಳ ನೇಮಕದಲ್ಲಿ ಅಕ್ರಮಗಳಾಗಿವೆ ಎಂದು ಸಾರಾಸಗಟು ಆರೋಪಿಸುವುದನ್ನು ಬಿಟ್ಟು ನಿರ್ದಿಷ್ಟ ದಾಖಲೆಗಳನ್ನು ನೀಡಿದರೆ ತನಿಖೆಗೆ ಆದೇಶಿಸುವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸವಾಲೆಸೆದರು. ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಎಲ್ಲ 15 ಹಾಲು ಒಕ್ಕೂಟಗಳಲ್ಲಿ ನೇಮಕ ಪಾರದರ್ಶಕವಾಗಿ ನಡೆಯುತ್ತಿಲ್ಲ. ಪ್ರತಿಯೊಂದು ಹುದ್ದೆಗೆ 25ರಿಂದ 50 ಲಕ್ಷ ರೂ. ಲಂಚ ನಿಗದಿಪಡಿಸಿದ್ದು, ಹಿಂದೆ ಆಡಳಿತ ನಡೆಸಿದವರು, ಈಗ ಆಡಳಿತ ನಡೆಸುತ್ತಿರುವವರಿಗೆ ಗೊತ್ತು ಎಂದು ಕುಮಾರಸ್ವಾಮಿ ಆಪಾದಿಸಿದ್ದಾರೆ. ಹಿಂದೆ ಅವರದೇ ನೇತೃತ್ವದ ಸಮ್ಮಿಶ್ರ ಸರ್ಕಾರವಿತ್ತು. ಬಂಡೆಪ್ಪ ಖಾಶೆಂಪುರ ಸಹಕಾರ ಸಚಿವರಾಗಿದ್ದರು. ಅವರ ಹಿರಿಯ ಸೋದರ ಎಚ್.ಡಿ.ರೇವಣ್ಣ ಕೆಎಂಎಫ್ ಅಧ್ಯಕ್ಷರಾಗಿದ್ದರು. ಆಗ ಅಕ್ರಮ ತಡೆಯಲು ಪ್ರಯತ್ನಿಸಲಿಲ್ಲವೇಕೇ? ನಿರ್ದಿಷ್ಟ ದಾಖಲೆಗಳನ್ನು ಇಟ್ಟು ಮಾತನಾಡಲಿ ಎಂದು ವಾಗ್ದಾಳಿ ನಡೆಸಿದರು. ಕರೊನಾ ಸಂದರ್ಭದಲ್ಲಿ ಬಮೂಲ್ ಸೇರಿ 15 ಹಾಲು ಒಕ್ಕೂಟಗಳ ಪೈಕಿ 10 ಒಕ್ಕೂಟಗಳ ಐದು ಸಾವಿರ ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಲಾಗಿತ್ತು. ಆದರೆ ಎಲ್ಲ ಒಕ್ಕೂಟಗಳಲ್ಲಿ ಅವ್ಯವಹಾರ ಆಗಿವೆ ಎಂಬ ಎಚ್ಡಿಕೆ ಹೇಳಿಕೆ ಹಾಸ್ಯಾಸ್ಪದ ಎಂದರು. ನೇಮಕ ಪರೀಕ್ಷೆಯಲ್ಲಿ ಅಕ್ರಮಗಳಾಗಿವೆ ಎಂದು ಸಂಸದ ಡಿ.ಕೆ.ಸುರೇಶ್ ದೂರು ನೀಡಿದ ಹಿನ್ನೆಲೆಯಲ್ಲಿ ತನಿಖೆಗೆ ಹಿರಿಯ ಅಧಿಕಾರಿಯೊಬ್ಬರನ್ನು ನೇಮಿಸಿದ್ದು, ಸಂಬಂಧಿಸಿದ ಅಧಿಕಾರಿ ವರದಿ ನೀಡಿದ್ದಾರೆ. ಅದೇ ರೀತಿ ಎಚ್ಡಿಕೆ ದೂರು ಸಲ್ಲಿಸಿದರೆ ತನಿಖೆ ನಡೆಸಿ ಕ್ರಮವಹಿಸಲು ಸಿದ್ಧ ಎಂದರು.