

ಬಾಗಲಕೋಟೆ: ವೃತ್ತಿಪರ ನೇಕಾರರಿಗೆ ಕಟ್ಟಡ ಕಾರ್ಮಿಕರಿಗೆ ಒಂದು ಬಾರಿ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಕೆಎಚ್‌ಡಿಸಿ ನಿಗಮದ ನೇಕಾರರಿಗೆ ನಿವೇಶನ ಹಂಚಿಕೆ ಮಾಡಬೇಕು, ೫೫ ಮೇಲ್ಪಟ್ಟ ನೇಕಾರರಿಗೆ ೫ ಸಾವಿರ ರೂ. ಮಾಶಾಸನ ಜಾರಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ನೇತೃತ್ವದಲ್ಲಿ ನೇಕಾರರು ಜಿಲ್ಲಾಡಳಿತ ಭವನ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ನೇಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಅಪರ ಜಿಲ್ಲಾಽಕಾರಿ ಅಶೋಕ ತೇಲಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ವೃತ್ತಿಪರ ನೇಕಾರರಿಗೆ ಕಟ್ಟಡ ಕಾರ್ಮಿಕರಿಗೆ ಮಾದರಿಯ ಕಾರ್ಮಿಕ ಸೌಲಭ್ಯಗಳನ್ನು ಜಾರಿ ಮಾಡಬೇಕು, ಗುರುತಿನ ಚೀಟಿ ಹಂಚಿ ಮಾಡಬೇಕು, ರಾಜ್ಯದಲ್ಲಿ ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡ ೫೨ ಜನ ನೇಕಾರರ ಕುಟುಂಬಗಳಿಗೆ ೧೦ ಲಕ್ಷ ರೂ. ಪರಿಹಾರ ಧನ ಒದಗಿಸಬೇಕು, ರಾಜ್ಯದ ನೇಕಾರರಿಗೆ ಒಂದು ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
೫೫ ಮೇಲ್ಪಟ್ಟ ನೇಕಾರರಿಗೆ ೫ ಸಾವಿರ ರೂ. ಮಾಶಾಸನ ಜಾರಿ ಮಾಡಬೇಕು, ನೇಕಾರಿಕೆ ವೃತ್ತಿಯಲ್ಲಿರುವ ಮತ್ತು ಕೆಎಚ್‌ಡಿಸಿಯ ಸಾವಿರಾರು ಜನರಿಗೆ ಸಿಟಿಎಸ್ ಉತಾರಗಳಿಲ್ಲ. ಅನೇಕ ಜನರಿಗೆ ನಿವೇಶನಗಳು ಇಲ್ಲ. ಅಂತಹವರಿಗೆ ನ್ಯಾಯ ಒದಗಿಸಬೇಕು, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ, ಗದಗ, ಬೆಟಗೇರಿ, ನರಸಾಪುರ, ಹುಬ್ಬಳ್ಳಿಯಲ್ಲಿರುವ ನೇಕಾರರು ನಿವೇಶನಗಳಿಗೆ ಹಕ್ಕು ಪತ್ರ ಇಲ್ಲದೇ ನಿತ್ಯವು ಗೋಳಾಟ ನಡೆಸುತ್ತಿದ್ದಾರೆ ಎಂದು ದೂರಿದರು.
ರಾಜ್ಯದ ಕೆಎಚ್‌ಡಿಸಿ ನಿಗಮದಲ್ಲಿ ಆಗಿರುವ ನೂರಾರರು ಕೋಟಿ ರೂ. ಅವ್ಯವಹಾರ ಸಮಗ್ರ ತನಿಖೆ ಮಾಡಬೇಕು, ತಪ್ಪಿತಸ್ಥರಿಗೆ ಶಿಕ್ಷೆ ವಿಽಸಿ ಹಣವನ್ನು ನಿಗಮಕ್ಕೆ ವರ್ಗಾವಹಿಸಬೇಕು. ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ ಯೋಜನೆ ಅಡಿಯಲ್ಲಿ ನೇಕಾರರನ್ನು ಒಳಪಡಿಸಬೇಕು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೈ ಮಗ್ಗ ಮತ್ತು ಜವಳಿ ಇಲಾಖೆ ಸೆಂಟ್ರಲ್ ಸಿಲ್ಕ್ ಬೋರ್ಡಗೆ ಮತ್ತು ನಿಗಮಗಳಿಗೆ ಯಾವುದೇ ಅನುದಾನವಿಲ್ಲದೇ ಯೋಜನೆ ಕೊಡಲಾಗುತ್ತಿಲ್ಲ. ಆದ್ದರಿಂದ ಸಾವಿರಾರರು ಕೋಟಿ ರೂ. ಅನುದಾನ ಒದಗಿಸಬೇಕು, ನೇಕಾರರು ಉತ್ಪಾದಿಸಿದ ಉತ್ಪಾದನೆಗಳಿಗೆ ಮಾರುಕಟ್ಟೆ ಒದಗಿಸಿ ವ್ಯಾಪಾರಕ್ಕೆ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.
ಬಸವರಾಜ ಜಮಖಂಡಿ, ಉದಯ ಕುಲಗೋಡು, ಗಂಗಪ್ಪ ಒಂಟಗೂಡಿ, ನವೀನ ಕ್ವಾನೂರ, ಲಕ್ಕಪ್ಪ ಪವಾರ, ಕೆ.ಎಸ್.ಸೂಳಿಕೇರಿ, ಬಸವರಾಜ ಚಿತ್ತರಗಿ, ಮಲ್ಲಿಕಜಾನ ಜಮಾದಾರ, ಸೋಮಶೇಖರ ನಾಲವತವಾಡ ಸೇರಿದಂತೆ ಇತರರು ಇದ್ದರು.