ನೇಕಾರರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಯತ್ನ

20kkr=1(10-25 nagendra kumar
Published on

ಕಿಕ್ಕೇರಿ: ನೇಕಾರಿಕೆ ವೃತ್ತಿ ನಂಬಿ ಬದುಕುತ್ತಿರುವ ಜೀವಗಳ ಸಂಕಷ್ಟಕ್ಕೆ ಸ್ಪಂದಿಸಲು ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದು ರಾಜ್ಯ ಕೈಮಗ್ಗ ನಿಗಮದ ನೂತನ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ಹೇಳಿದರು.

ಕಿಕ್ಕೇರಿ ಸೇರಿದಂತೆ ಸಾಸಲು ಮತ್ತಿತರ ಗ್ರಾಮಗಳಿಗೆ ಇತ್ತೀಚೆಗೆ ಭೇಟಿ ನೀಡಿ ಮಾತನಾಡಿದ ಅವರು, ನನಗೆ ಸಿಕ್ಕಿರುವ ಅಧ್ಯಕ್ಷ ಸ್ಥಾನದಿಂದ ನೇಕಾರರಿಗೆ ಶಕ್ತಿ ತುಂಬುವ ಕೆಲಸ ಮಾಡುವೆ. ತಾಲೂಕಿನ ಕಿಕ್ಕೇರಿ, ಹೊಸಹೊಳಲು, ಊಗಿನಹಳ್ಳಿ ಗ್ರಾಮಗಳಲ್ಲಿ ಅಧಿಕವಾಗಿ ಕೈಮಗ್ಗಗಳಿವೆ. ಇವರ ಸಮಸ್ಯೆಗಳಿಗೆ ಸ್ಪಂದಿಸಲು ಮೊದಲು ಯತ್ನಿಸುವೆ ಎಂದರು.

ತಾನು ಹಿಂದುಳಿದ ಹಾಲುಮತಸ್ಥ ಸಮುದಾಯದವನಾಗಿದ್ದು ಸರ್ವ ಜನಾಂಗ, ವಿಶೇಷವಾಗಿ ನೇಕಾರರ ಅಭಿವೃದ್ಧಿಗೆ ಶ್ರಮಿಸಲು ಮುಂದಾಗಿರುವೆ. ನನ್ನ ಅವಧಿಯಲ್ಲಿ ತಾಲೂಕಿನಲ್ಲಿರುವ ನೇಕಾರರ ಮನೆಗೆ ತೆರಳಿ ವಾಸ್ತವ ಸಮಸ್ಯೆ ತಿಳಿದುಕೊಳ್ಳುವೆ. ನೇಕಾರ ವೃತ್ತಿಯಲ್ಲಿ ಕಾಡುತ್ತಿರುವ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲು ಯತ್ನಿಸುವೆ ಎಂದರು.

ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ರೂ.ಅನುದಾನ ನೀಡಲಾಗಿದೆ. ಮತ್ತಷ್ಟು ಅನುದಾನಕ್ಕೆ ಸರ್ಕಾರಕ್ಕೆ ಮನವಿ ಮಾಡುವೆ. ನಿಗಮದಲ್ಲಿ ಸುಮಾರು 175 ಸಿಲ್ಕ್, 3,260 ಕಾಟನ್ ಕೈಮಗ್ಗಗಳು ಸೇರಿದಂತೆ ಒಟ್ಟು 3,435 ಕೈಮಗ್ಗ ನೇಕಾರರಿದ್ದಾರೆ. ಈಗಾಗಲೇ 3,868 ಮನೆಗಳನ್ನು ನೇಕಾರರಿಗೆ ಒದಗಿಸಲಾಗಿದೆ. 196 ಮನೆಗಳಿಗಾಗಿ ನೇಕಾರರು ಬೇಡಿಕೆ ನೀಡಿದ್ದು, ಆದ್ಯತೆ ಮೇರೆ ನೀಡಲಾಗುವುದು ಎಂದರು.

ಕೈಮಗ್ಗದ ರೇಷ್ಮೆ ಸೀರೆ, ಶಾಲು ಮತ್ತಿತರ ಉತ್ಪನ್ನಗಳ ಮೇಲೆ ಶೇ.20 ರಿಂದ 30 ರಿಯಾಯಿತಿ ಇದೆ. ಆರ್ಥಿಕ ಸಂಪನ್ಮೂಲ ಕೊರತೆ ಸಾಕಷ್ಟು ಇದ್ದು ಪರಿಹರಿಸಲು ಯತ್ನಿಸಲಾಗುವುದು. ನಿಗಮದಿಂದ ವಿದ್ಯಾ ವಿಕಾಸ ಯೋಜನೆಯಡಿ ಪ್ರತಿ ಶಾಲೆಗಳಿಗೆ ಸಮವಸ್ತ್ರ ವಿತರಣೆ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗುವುದು. ನೇಕಾರರ ಆರ್ಥಿಕ ಸ್ಥಿತಿ ಉತ್ತಮಪಡಿಸಲು ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದು ತಿಳಿಹೇಳಿದರು.

ಕೈಮಗ್ಗ ನೇಕಾರ ಭಜನೆಮನೆ ಅಣ್ಣಯ್ಯ ಮಾತನಾಡಿ, ಕೆಎಚ್‌ಡಿಸಿ ಜಿಲ್ಲಾ ಕಚೇರಿಯಿಂದ ತಮಗೆ ಮಗ್ಗ ನೇಯ್ಗೆ ಮಾಡಲು ಕಚ್ಛಾ ನೂಲು ನೀಡುತ್ತಿದ್ದರು. ಬಹಳ ವರ್ಷದಿಂದ ನೂಲು ನೀಡದೆ ಕೈಮಗ್ಗ ಕಸುಬು ಮಾಡದಂತಾಗಿದೆ. ಕಿಕ್ಕೇರಿಯಲ್ಲಿದ್ದ ಕಚೇರಿಯನ್ನು ಮುಚ್ಚಲಾಗಿದೆ. ನೇಕಾರರು ಬೀದಿಗೆ ಬಿದ್ದಂತಾಗಿದೆ. ನೇಕಾರರು ಬದುಕಲು ಅವಕಾಶ ಕಲ್ಪಿಸಿಕೊಡಿ ಎಂದು ಅಲವತ್ತುಕೊಂಡರು.

ಮಾದಾಪುರ ರಾಮಕೃಷ್ಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net