ನೇಕಾರರ ಬದುಕು ಹಸನಗೊಳ್ಳಲಿ

bkt-15-2
ಬಾಗಲಕೋಟೆ ಕಲಾಭವನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಜವಳಿ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು.
Published on

ಬಾಗಲಕೋಟೆ: ನೇಕಾರರ ಬದುಕು ತೀವ್ರ ಕಷ್ಟದಲ್ಲಿದೆ. ಅವರ ಬದುಕು ಹಸನಗೊಳ್ಳಲಿ ಎನ್ನುವ ಉದ್ದೇಶದಿಂದ ೫ ಗ್ಯಾರಂಟಿ ಯೋಜನೆಗಳ ನಡುವೆಯೂ ೧೩೦ ಕೋಟಿ ರೂ. ಹೊರೆಯಾದರು ೧೦ ಎಚ್.ಪಿ ವರೆಗೆ ವಿದ್ಯುತ್ ಉಚಿತ ನೀಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಚುನಾವಣೆಯಲ್ಲಿ ತಾವು ನೀಡಿದ ಮಾತಿನಂತೆ ನಡೆದುಕೊಂಡಿದ್ದಾರೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನವನಗರದ ಕಲಾಭವನದಲ್ಲಿ ಶುಕ್ರವಾರ ಸಂಜೆ ಕರ್ನಾಟಕ ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟ ರಾಜ್ಯ ಹಾಗೂ ಜಿಲ್ಲಾ ಘಟಕದ ಆಶ್ರಯದಲ್ಲಿ ಸಮಗ್ರ ನೇಕಾರರಿಂದ ಮಾನ್ಯ ಜವಳಿ ಸಚಿವರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

೧೦ ಎಚ್.ಪಿ ಯಿಂದ ೨೦ ಎಚ್.ಪಿ ವರೆಗೆ ವಿಸ್ತರಿಸಲು ಕ್ರಮ ವಹಿಸಲಾಗುವುದು. ನೇಕಾರ ಸಮ್ಮಾನ ಯೋಜನೆ ಹಣ ದ್ವಿಗುಣಗೊಳಿಸಲಾಗಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಅಂತ ವಿರೋಧ ಪಕ್ಷಗಳು ಹೇಳುತ್ತೀವೆ. ಆದರೇ ಯಾವ ಸಮಸ್ಯೆ ಇಲ್ಲ. ಮಾನ ಕಾಪಾಡುವ ನೇಕಾರರ ನೆರವಿಗೆ ಸರ್ಕಾರ ನಿಂತಿದೆ. ದೇಶದ ೩೦ ರಾಜ್ಯಗಳಲ್ಲಿ ಬರಗಾಲವಿದೆ. ಅಲ್ಲಿನ ಸರ್ಕಾರಗಳು ಜನರಿಗೆ ನಮ್ಮ ರೀತಿಯ ಯೋಜನೆಗಳನ್ನು ನೀಡಿಲ್ಲ. ಬಸ್, ವಿದ್ಯುತ್, ಮಹಿಳೆಯರಿಗೆ ೨ ಸಾವಿರ ರೂ. ನೀಡುತ್ತಿದ್ದೇವೆ. ಜೊತೆಗೆ ರಸ್ತೆ, ಕುಡಿಯುವ ನೀರು, ಶಾಲಾ ಕೊಠಡಿ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೊರತೆ ಮಾಡಿಲ್ಲ. ಮುಂದಿನ ವರ್ಷ ವರುಣ ದೇವನ ಕೃಪೆ ಉಂಟಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೇಕಾರರಿಗೆ ಗುರುತಿನ ಚೀಟಿ, ಕಾರ್ಮಿಕ ಇಲಾಖೆಯ ಸೌಲಭ್ಯ, ಹ್ಯಾಂಡಲೂಮ್ ನೇಕಾರರಿಗೆ ೧ ಎಚ್.ಪಿ ವರೆಗೆ ಯಂತ್ರ ನೀಡಿಕೆ, ಕಚ್ಚಾ ಮಾಲು ಪೂರೈಕೆಗೆ ವಿಶೇಷ ಯೋಜನೆ ಜಾರಿಗೊಳಿಸಲು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ನಡೆಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಮಾತನಾಡಿ, ನಾನು ನೇಕಾರರ ಜೊತೆಗೆ ಜೀವನ, ರಾಜಕೀಯ ಹುದ್ದೆ ಅಲಂಕರಿಸಿದ್ದೇನೆ. ಅವರ ಜೀವನ ಕಷ್ಟ ನೋಡಿದರೇ ಕಣ್ಣೀರು ಬರುತ್ತದೆ. ನೇಕಾರರ ಮಹಾಮಂಡಳದ ಮೊದಲ ಅಧ್ಯಕ್ಷನಾನು. ತಮ್ಮ ಸಮಸ್ಯೆ ಪರಿಹಾರಕ್ಕೆ ಶಿಕ್ಷಣ ಒಂದೇ ಸ್ಪಷ್ಟ ಮಾರ್ಗವಾಗಬೇಕು. ನಾನು ಶಾಸಕನಾಗಿದ್ದ ವೇಳೆ ನೇಕಾರರ ಸಮಸ್ಯೆ ಬಗ್ಗೆ ಸರ್ಕಾರ ಗಮನ ಸೆಳೆದಿದ್ದು, ಅಂದಿನ ಸಿಎಂ ರಾಮಕೃಷ್ಣ ಹೆಗಡೆ ೧೯೮೬-೮೯ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಿದ್ದರು. ನಂತರ ಸಿಎಂ ಸಿದ್ದರಾಮಯ್ಯ ಬಹಳಷ್ಟು ಕೊಡುಗೆ ನೀಡಿದ್ದಾರೆ. ೧೦ ಎಚ್.ಪಿ ವರೆಗೆ ವಿದ್ಯುತ್ ಉಚಿತ ವಿದ್ಯುತ್ ನೀಡುವುದು ಸಾಮಾನ್ಯ ಕೆಲಸವಲ್ಲ ಎಂದರು.

ಒಕ್ಕೂಟದ ರಾಜ್ಯ ಉಪಾಧ್ಯಕ್ಷ ರವೀಂದ್ರ ಕಲಬುರಗಿ ಮಾತನಾಡಿ, ನೇಕಾರರ ಅಭಿವೃದ್ಧಿ ನಿಗಮ ಕಾರ್ಯಾರಂಭಿಸಿ ೧೦೦ ಕೋಟಿ ರೂ. ಬಿಡುಗಡೆ ಮಾಡಬೇಕು. ವೃತ್ತಿ ನೇಕಾರರಿಗೆ ೨೦ ಎಚ್.ಪಿ ವರೆಗೆ ವಿದ್ಯುತ್ ನೀಡಬೇಕು. ಕಾರ್ಮಿಕ ಇಲಾಖೆಯ ಸೌಲಭ್ಯ ನೀಡಬೇಕು ಎಂದು ಮನವಿ ಮಾಡಿದ ಅವರು, ನೇಕಾರರ ಬೇಡಿಕೆಗಳಿಗೆ ಸ್ಪಂದಿಸದ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.

ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ್ ಕಡ್ಲಿಮಟ್ಟಿ, ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಸೋಮಶೇಖರ, ಉಪಾಧ್ಯಕ್ಷ ರವೀಂದ್ರ ಕಲಬುರಗಿ, ಜಿಲ್ಲಾ ಅಧ್ಯಕ್ಷ ಚಂದ್ರಕಾಂತ ಶೇಖಾ, ವಿ.ವಿ.ಶಿರಗಣ್ಣವರ, ಮನೋಹರ ರಕ್ಕಸಗಿ, ರಮೇಶ್ ಜಮಖಂಡಿ, ವಿಷ್ಣು ಗೌಡರ, ಜವಳಿ ಇಲಾಖೆ ಆಯುಕ್ತ ಪಿ.ಎಂ.ಶ್ರೀಧರ, ಇಲಾಖೆ ಜಿಲ್ಲಾ ಅಽಕಾರಿ ಎಂ.ಜಿ.ಕೊಣ್ಣೂರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net