ನೆರೆ ಪರಿಹಾರ ಅಕ್ರಮ ತನಿಖೆಗೆ ಆದೇಶ

4-hvr-03
Published on

ಹಾವೇರಿ: ಅತಿವೃಷ್ಟಿ ಹಾಗೂ ನೆರೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಸಮರ್ಪಕವಾಗಿ ವಿತರಣೆಯಾಗಿಲ್ಲ. ಒಂದೇ ಸರ್ವೆ ನಂಬರ್​ಗೆ 2 ಬಾರಿ ಪರಿಹಾರ ನೀಡಲಾಗಿದೆ. ಈ ಕುರಿತು ಪ್ರಾದೇಶಿಕ ಆಯುಕ್ತರ ಕಚೇರಿಯ ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಆದೇಶಿಸಿದರು.

ನಗರದ ಜಿ.ಪಂ. ಸಭಾಭವನದಲ್ಲಿ ಶನಿವಾರ ತ್ರೖೆಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಸಚಿವರು, ನೆರೆ ಹಾಗೂ ಅತಿವೃಷ್ಟಿಯಿಂದಾದ ಹಾನಿಗೆ ಪರಿಹಾರ ಕುರಿತು ಪ್ರಗತಿ ಪರಿಶೀಲಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ ಬೆಳೆ ನಷ್ಟವಾದ ರೈತರಿಗೆ ಸರ್ಕಾರ 174 ಕೋಟಿ ರೂ. ಪರಿಹಾರ ಬಿಡುಗಡೆಗೊಳಿಸಿದೆ. ಜಿಲ್ಲೆಯಲ್ಲಿ 1,45,500 ರೈತರಿಗೆ ಪರಿಹಾರ ನೀಡಬೇಕಿದ್ದು, ಇಲ್ಲಿಯವರೆಗೆ 1,00,768 ರೈತರಿಗೆ ಪರಿಹಾರ ವಿತರಿಸಲಾಗಿದೆ. ಇನ್ನೂ 45 ಸಾವಿರ ರೈತರಿಗೆ ಪರಿಹಾರ ಮುಟ್ಟಿಲ್ಲ. ಮೇಲ್ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯ ದುರಪಯೋಗಪಡಿಸಿಕೊಂಡ ಕೆಳಹಂತದ ಅಧಿಕಾರಿಗಳು ಒಂದೇ ಸರ್ವೆ ನಂಬರ್​ಗೆ ಎರಡೆರೆಡು ಬಾರಿ ಪರಿಹಾರ ನೀಡಿದ್ದಾರೆ. ನನ್ನ ಬಳಿ ಎಲ್ಲ ದಾಖಲೆಗಳಿವೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಬೆಳೆಹಾನಿ ಪರಿಹಾರ ಡಬಲ್ ಆಗಿರುವ ಕುರಿತು ನಿಮಗೆ ಮಾಹಿತಿ ಇದೆಯಾ? ಎಂಬ ಸಚಿವರ ಪ್ರಶ್ನೆಗೆ ಜಂಟಿ ನಿರ್ದೇಶಕ ಬಿ. ಮಂಜುನಾಥ ‘ಅಂತಹ ಯಾವುದೇ ಪ್ರಕರಣ ನಡೆದಿಲ್ಲ’ ಎಂದು ಉತ್ತರಿಸಿದರು.

ತನಿಖೆಗೆ ಉನ್ನತ ಮಟ್ಟದ ಸಮಿತಿ: ಇದರಿಂದ ಗರಂ ಆದ ಸಚಿವರು, ಈ ಹೇಳಿಕೆಗೆ ನೀನು ಬದ್ಧನಾಗಿರಬೇಕು. ಪ್ರಾದೇಶಿಕ ಆಯುಕ್ತರ ಕಚೇರಿಯಿಂದಲೇ ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆ ಮಾಡಿಸುತ್ತೇನೆ. ತಪ್ಪಿತಸ್ಥರೆಂದು ಕಂಡುಬರುವ ಅಧಿಕಾರಿಗಳೆಲ್ಲರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಖಾರವಾಗಿ ನುಡಿದರು.

ಫಲಾನುಭವಿಗಳ ಪಟ್ಟಿ ಪ್ರಕಟಿಸಿ: ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಬೆಳೆಹಾನಿ ಪರಿಹಾರ ಪಡೆದಿರುವ ಫಲಾನುಭವಿಗಳ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಈಗಾಗಲೇ ಸೂಚನೆ ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ತಿಳಿಸಿದರು. ಅದನ್ನು ಕೂಡಲೆ ಪ್ರಕಟಿಸುವಂತೆ ಸಚಿವ ಬೊಮ್ಮಾಯಿ ಜಿಲ್ಲಾಧಿಕಾರಿಗೆ ಸೂಚಿಸಿದರು.

ಮನೆ ಪರಿಹಾರದಲ್ಲಿಯೂ ಅವ್ಯವಹಾರ: ರಾಣೆಬೆನ್ನೂರನಲ್ಲಿ ಮನೆ ಹಾನಿ ಪರಿಹಾರವೂ ಅರ್ಹರಿಗೆ ತಲುಪಿಲ್ಲ. ಮರು ಸಮೀಕ್ಷೆ ನಡೆಸಲು ಆದೇಶಿಸಿ ಎಂದು ಶಾಸಕ ಅರುಣಕುಮಾರ ಪೂಜಾರ ಸಚಿವರ ಗಮನ ಸೆಳೆದರು.

ಪ್ರತಿಕ್ರಿಯಿಸಿದ ಸಚಿವ ಬಸವರಾಜ ಬೊಮ್ಮಾಯಿ, ಮನೆಹಾನಿ ಪರಿಹಾರ ವಿತರಣೆಯಲ್ಲಿಯೂ ಅವ್ಯವಹಾರವಾಗಿದೆ. ರೊಕ್ಕಾ ತಂಗೊಂಡು ಮನೆ ಬೀಳದೇ ಇದ್ದರೂ ಪರಿಹಾರ ಕೊಟ್ಟೀರಿ. ಅದಕ್ಕೆಂದೇ ಏಜೆಂಟರೂ ನೇಮಕವಾಗಿದ್ದಾರೆ. ಸರ್ಕಾರ ಬಡವರಿಗಾಗಿ ದೇಶದಲ್ಲಿಯೇ ಮೊದಲ ಬಾರಿಗೆ 5 ಲಕ್ಷ ರೂ. ಪರಿಹಾರ ನೀಡುತ್ತಿದೆ. ಸರ್ಕಾರ ಹಣ ಹೆಚ್ಚಿಸಿರುವುದು ಬಡವರಿಗಾಗಿ. ಅದರಲ್ಲಿಯೂ ನೀವು ರೊಕ್ಕಾ ಹೊಡಿಯೋ ಯೋಚನೆ ಮಾಡಬೇಡಿ. ಹುಲಗೂರನಲ್ಲಿ ಮನೆ ಪೂರ್ಣ ಬಿದ್ದ ಬಡವನಿಗೆ ನಿಮ್ಮ ತಲಾಠಿ ಇದು ಖಾಲಿ ಜಾಗೆ ಎಂದು ತೋರಿಸಿದ್ದಾನೆ. ಯಾವ ಗ್ರಾಮದಲ್ಲಿ ಏಜೆಂಟರಿದ್ದಾರೆ ಅಲ್ಲಿ ಬಿದ್ದ ಮನೆಗಳ ಸಂಖ್ಯೆ ಹೆಚ್ಚಿದೆ. ಇದೇನಾ ಜಿಲ್ಲಾಡಳಿತದ ಕಾರ್ಯವೈಖರಿ ಎಂದು ಡಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆಗ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಅನರ್ಹರಿಗೆ ಪರಿಹಾರ ಹೋಗಿದ್ದರೆ ಅದನ್ನು ಮರುಪಾವತಿ ಮಾಡಿಕೊಳ್ಳುತ್ತೇವೆ. ಪ್ರತಿ ತಾಲೂಕಿಗೆ ಅನರ್ಹರ ಪತ್ತೆಗೆ ನೋಡಲ್ ಅಧಿಕಾರಿ ನೇಮಿಸಲಾಗಿದೆ ಎಂದರು. ಇದರಿಂದ ಮತ್ತಷ್ಟು ಕೆರಳಿದ ಸಚಿವರು, ನೀವು ಮರು ಸಮೀಕ್ಷೆ ನಡೆಸಿ ವರದಿ ಕೊಡಿ, ನನ್ನ ಬಳಿಯೂ ಮಾಹಿತಿಯಿದೆ. ಎರಡನ್ನೂ ಸೇರಿಸಿ ಎಸಿಬಿ ತನಿಖೆಗೆ ವಹಿಸುತ್ತೇನೆ ಎಂದರು.

ಜನರ ದೂರು ಸ್ವೀಕರಿಸಿ: ತಹಸೀಲ್ದಾರ್​ಗಳೇ ನೀವು ಕಚೇರಿಯಲ್ಲಿಯೇ ಇರಬೇಡಿ. ಗ್ರಾಮಗಳಲ್ಲಿ ಸಂಚರಿಸಿ. ನಿಮಗೆ ನಿಮ್ಮದೇ ಆದ ಪವರ್ ಇದೆ. ಜನರ ಸಮಸ್ಯೆ ಪರಿಹರಿಸಿ. ಜಿಲ್ಲಾಧಿಕಾರಿಗಳೇ ನೀವೂ ಕಚೇರಿಯಲ್ಲಿಯೇ ಕುಳಿತರೆ ನಿಮ್ಮ ಕೆಳಹಂತದ ಅಧಿಕಾರಿಗಳು ಮಾಡಿರುವ ತಪ್ಪಿನ ಮಾಹಿತಿ ಸಿಗೋದಿಲ್ಲ. ವಾರದಲ್ಲಿ ಎರಡರಿಂದ ಮೂರು ದಿನ ಪ್ರತಿಯೊಂದು ತಹಸೀಲ್ದಾರ್ ಕಚೇರಿಗೆ ಹೋಗಿ ಮನೆ ಹಾಗೂ ಬೆಳೆಹಾನಿ ಪರಿಹಾರದಲ್ಲಿ ಲೋಪವಾಗಿದ್ದರೆ ಜನರಿಂದ ದೂರು ಸ್ವೀಕರಿಸಿ. ನೀವು ಯಾವ ತಾಲೂಕಿಗೆ ಹೋಗುತ್ತೀರಿ ಎಂಬುದನ್ನು ಮೊದಲೇ ಮಾಧ್ಯಮಗಳು, ಅಧಿಕಾರಿಗಳ ಮೂಲಕ ಜನರಿಗೆ ತಿಳಿಸಿ. ಆಗ ಎಲ್ಲೆಲ್ಲಿ ಏನೇನು ತಪ್ಪಾಗಿದೆ ಎಂಬುದು ತಿಳಿಯುತ್ತದೆ. ದಾಖಲೆಗಳ ಸಮೇತ ದೂರು ಬಂದರೆ ಸ್ಥಳದಲ್ಲಿಯೇ ಪರಿಹರಿಸಿ ಎಂದು ಸಚಿವರು ಸೂಚಿಸಿದರು.

ತಪ್ಪು ಮಾಹಿತಿ ನೀಡಿದರೆ ಕ್ರಮ: ಬಜೆಟ್ ಕಾರ್ಯಕ್ರಮಗಳ ಅನುಷ್ಠಾನದ ವಾರ್ಷಿಕ ಕೊನೆಯ ಘಟ್ಟದಲ್ಲಿದ್ದೇವೆ. ಅಧಿಕಾರಿಗಳು ಗಮನಹರಿಸಿ ಕೆಲಸ ಮಾಡಬೇಕು. ನೀವು ಕ್ಷೇತ್ರದಲ್ಲಿ ಏನೆಲ್ಲ ಮಾಡುತ್ತೀರಿ ಎಂಬುದು ಗೊತ್ತಿದೆ. ಹಿಂದಿನ ಸಭೆಗಳಲ್ಲಿ ಹೇಗೆ ನಡೆದುಕೊಂಡಿದ್ದೀರಿ ಎಂಬುದೂ ಗೊತ್ತಿದೆ. ನಿಮ್ಮ ಹಾರಿಕೆ ಉತ್ತರ ಕೇಳಿ ಹೋಗಲು ಬಂದಿಲ್ಲ. ಸಮರ್ಪಕ ಮಾಹಿತಿ ನೀಡಲು ನೀವು ರೆಡಿಯಾಗಿ ಬಂದಿರಬೇಕು. ನಿಮ್ಮಲ್ಲಿ ಮಾಹಿತಿ ಇಲ್ಲವಾದರೆ ಇಲ್ಲ ಎಂದು ಹೇಳಿ. ಸುಳ್ಳು ಹೇಳಿ ಬಚಾವ್ ಆಗುವ ಯತ್ನ ನನ್ಮುಂದೆ ನಡೆಯೋದಿಲ್ಲ. ತಪ್ಪು ಮಾಹಿತಿ ನೀಡಿದ್ದು ಪರಿಶೀಲನೆ ವೇಳೆ ಗೊತ್ತಾದರೆ ಕ್ರಮ ನಿಶ್ಚಿತ ಎಂದು ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.

ನೀರಿನ ವೆಚ್ಚ ತನಿಖೆಗೆ: ಕಳೆದ ಐದು ವರ್ಷಗಳಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ವೆಚ್ಚ ಮಾಡಿದ ಹಣದ ಕುರಿತು ಎಸಿಬಿಯಿಂದ ಸಮಗ್ರ ತನಿಖೆ ನಡೆಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗೆ ಸೂಚಿಸಿದರು. ನಗರಸಭೆ, ಪುರಸಭೆ, ಪ.ಪಂ.ಗಳಲ್ಲಿ ಕುಡಿಯುವ ನೀರಿಗಾಗಿ ಅನಗತ್ಯವಾಗಿ ಹಣ ಪೋಲು ಮಾಡಲಾಗುತ್ತಿದೆ. ಈ ಕುರಿತಂತೆ ಸಮಗ್ರ ತನಿಖೆಯ ಅವಶ್ಯಕತೆ ಇದೆ. ಎಸಿಬಿ ತನಿಖೆಗೆ ನೀಡಲು ಈ ಸಭೆಯಲ್ಲಿ ಠರಾವು ಪಾಸು ಮಾಡಿ ನಾಳೆ ಸಂಜೆಯೊಳಗಾಗಿ ಠರಾವಿನ ಪ್ರತಿ ಕೊಡಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳುವ ಕಾಮಗಾರಿಗಳು ಕಳಪೆಯಾಗಿವೆ. ಮೂರನೇ ದರ್ಜೆಯ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಟ್ರ್ಯಾಕ್ಟರ್ ಕಂಟ್ರೋಲ್​ನಿಂದ ಹೊರಬನ್ನಿ: ಪಿಡಬ್ಲ್ಯುಡಿ, ಪಿಆರ್​ಇಡಿ ಯಿಂದ ನಿರ್ವಣವಾಗುತ್ತಿರುವ ರಸ್ತೆಗಳಿಗೆ ಗುತ್ತಿಗೆದಾರರು ಗುಣಮಟ್ಟದ ಸಾಮಗ್ರಿಗಳನ್ನು ಉಪಯೋಗಿಸುವಂತೆ ನೋಡಿಕೊಳ್ಳಬೇಕು. ಕೆಲಸ ನಡೆಯುವ ಸ್ಥಳದಲ್ಲಿ ಇಂಜಿನಿಯರ್ ಇರಲೇಬೇಕು. ಗುತ್ತಿಗೆದಾರರ ಮೇಲೆ ನಿಗಾ ಇಡಬೇಕು. ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕು. ಆದರೆ, ಇಲ್ಲಿ ಎರಡೂ ಇಲಾಖೆಗಳ ಕಂಟ್ರೋಲ್​ನಲ್ಲಿ ಇರಬೇಕಿದ್ದ ಕಾಂಟ್ರ್ಯಾಕ್ಟರ್​ಗಳ ಕಂಟ್ರೋಲ್​ನಲ್ಲಿ ನೀವಿದ್ದೀರಿ. ಅದನ್ನು ತಪ್ಪಿಸಿ, ಕಾಂಟ್ರ್ಯಾಕ್ಟರ್​ಗಳನ್ನು ನಿಮ್ಮ ಕಂಟ್ರೋಲ್​ಗೆ ತೆಗೆದುಕೊಳ್ಳಿ ಎಂದು ಸಚಿವ ಬೊಮ್ಮಾಯಿ ಸೂಚಿಸಿದರು.

ವೈದ್ಯರ, ರಸ್ತೆ ಸಮಸ್ಯೆ ನಿವಾರಿಸಿ: ಶಾಸಕ ಸಿ.ಎಂ. ಉದಾಸಿ ಮಾತನಾಡಿ, ಹಾನಗಲ್ಲ, ಅಕ್ಕಿಆಲೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಒಬ್ಬರೇ ಅರವಳಿಕೆ ವೈದ್ಯರಿದ್ದು, ತೀವ್ರ ತೊಂದರೆಯಾಗುತ್ತಿದೆ ಎಂದರು. ಅರಳವಳಿಕೆ ವೈದ್ಯರನ್ನು ನೇಮಿಸುವಂತೆ ಸಚಿವರು ಅಧಿಕಾರಿಗೆ ಸೂಚಿಸಿದರು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಅಳಲಗೇರಿ, ಬುಡಪನಹಳ್ಳಿ ಮಾರ್ಗದಲ್ಲಿ ಅರಣ್ಯ ಪ್ರದೇಶವಿದೆ. ಅಲ್ಲಿ ರಸ್ತೆ ನಿರ್ವಣಕ್ಕೆ ಅರಣ್ಯ ಇಲಾಖೆಯವರು ಅವಕಾಶ ಕೊಡುತ್ತಿಲ್ಲ ಎಂದರು. ಪ್ರತಿಕ್ರಿಯಿಸಿದ ಸಚಿವ ಬೊಮ್ಮಾಯಿ, ‘ಅರಣ್ಯ ಪ್ರದೇಶದಲ್ಲಿ ರಾಜ್ಯ ಸರ್ಕಾರ, ಜಿಲ್ಲಾಧಿಕಾರಿಗಳಿಗೆ ಯಾವುದೇ ಅಧಿಕಾರವಿಲ್ಲ. ಅದೇನಿದ್ದರೂ ಕೇಂದ್ರ ಸರ್ಕಾರಕ್ಕಿದೆ. ಕೇಂದ್ರದಿಂದ ಕಾಯ್ದೆಯಲ್ಲಿ ಕೆಲ ಮಾರ್ಪಾಡು ಮಾಡಿಕೊಳ್ಳಬೇಕಿದೆ. ಆದರೆ, ಅಳಲಗೇರಿ, ಬುಡಪನಹಳ್ಳಿ ರಸ್ತೆಯ ಸಮಸ್ಯೆಯೇ ಬೇರೆಯಿದ್ದರೆ ಈ ಕುರಿತು ಪ್ರಸ್ತಾವನೆ ಸಲ್ಲಿಸಿ ಎಂದು ಅರಣ್ಯ ಅಧಿಕಾರಿಗೆ ಸೂಚಿಸಿದರು.

ಅರ್ಹತೆ ಇದ್ದವರಿಗೆ ಕೊಳವೆಬಾವಿ ಕೊಡಿ: ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಕಳೆದ ಮೂರು ವರ್ಷದಿಂದ ಕೊಳವೆಬಾವಿ ಕೊರೆಸಿಲ್ಲ. ಶಾಸಕರು ಆಯ್ಕೆ ಮಾಡಿದ ಬಳಿಕ ಅನರ್ಹರು ಎಂದು ಹೆಸರು ತೆಗೆದು ಗೊಂದಲ ಮೂಡಿಸುತ್ತಾರೆ ಎಂದರು. ಆಗ ಸಮರ್ಪಕ ಉತ್ತರ ನೀಡದೆ ತಡವರಿಸಿದ ನಿಗಮದ ಜಿಲ್ಲಾ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ‘ಹೋಮ್ ವರ್ಕ್ ಮಾಡಿಕೊಂಡು ಸಭೆಗೆ ಬರಬೇಕು. ಬರೀ ದುಡ್ಡು ಹೊಡೆಯುವ ಯೋಚನೆ ಕೈಬಿಡಿ. ಅರ್ಹತೆ ಇದ್ದವರಿಗೆ ಕೊಳವೆಬಾವಿ ಕೊಡಿ’ ಎಂದು ಸೂಚಿಸಿದರು. ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲಿಸಿದ ಸಚಿವರು, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳ ಮಕ್ಕಳಿಗೆ ಇಲಾಖೆಯಿಂದ ತಕ್ಷಣ ಇನ್ನೊಂದು ಜೊತೆ ಸಮವಸ್ತ್ರ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net