ನೆರವಾದವರ ನೆನಪು ಅಜರಾಮರ

24 vpt. 2
Published on

ವಿರಾಜಪೇಟೆ: ದೇಶದ ಇತಿಹಾಸವನ್ನು ಇಣುಕಿ ನೋಡಿದರೆ ಸಮಾಜದ ಏಳಿಗೆಗೆ ಶ್ರಮಿಸಿದವರು, ಬಡವರ ಕಷ್ಟಕ್ಕೆ ನೆರವಾದವರು, ನೊಂದವರಿಗೆ ನೆರವಾಗಿ ನಿಂತವರನ್ನು ಸದಾ ನೆನಪಿಸಿಕೊಳ್ಳುತ್ತಾ ಬರುತ್ತಿದ್ದಾರೆಯೇ ಹೊರತು ಶ್ರೀಮಂತರನ್ನು ನೆನಪಿಸಿಕೊಳ್ಳುವುದಿಲ್ಲವೆಂದು ಕಾವೇರಿ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ದಾನ ಹೇಳಿದರು.

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಎನ್‌ಎಸ್‌ಎಸ್ ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಕನಸಿನ ಕೂಸಾಗಿ ಹುಟ್ಟಿತು. ವಿದ್ಯಾರ್ಥಿಗಳನ್ನು ಶಿಕ್ಷಣದ ಹಂತದಲ್ಲಿಯೇ ಸಮಾಜಮುಖಿಯಾಗಿ ಬೆಳೆಸುವ ಗುರಿಯನ್ನು ಇದು ಹೊಂದಿದೆ. ಮದರ್ ತೆರೇಸಾ, ಸರೋಜಿನಿ ನಾಯ್ಡು ಅವರಂತಹ ಪ್ರಮುಖ ಸಮಾಜ ಸುಧಾರಕರು, ಸಮಾಜ ಸೇವಕರನ್ನು ನಾವು ನೆನಪಿಟ್ಟುಕೊಂಡಿರುವುದು ಅವರ ಶ್ರೀಮಂತಿಕೆಯಿಂದಲ್ಲ, ಬದಲಾಗಿ ಸಮಾಜಕ್ಕೆ ಅವರು ನೀಡಿರುವ ಸೇವೆಯ ಕಾರಣದಿಂದ ಎಂದರು.

ವಿದ್ಯಾರ್ಥಿಗಳು ಸಮಾಜಕ್ಕೆ ತಮ್ಮಿಂದಾಗುವ ಸೇವೆಯನ್ನು ಸಲ್ಲಿಸಲು ಸದಾ ಸಿದ್ಧರಾಗಿರಬೇಕು. ಸೇವಾ ಮನೋಭಾವನೆ ಇದ್ದವರು ಸದಾ ಇತರರ ಹಿತವನ್ನು ಕಾಪಾಡುತ್ತಾ ಶ್ರೇಷ್ಠ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾರೆ ಎಂದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಮಾಜಿ ಅಧಿಕಾರಿ ಎಚ್.ವಿ.ನಾಗರಾಜು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಸ್ವಯಂಸೇವಕರಲ್ಲಿ ಸಮಾಜದಲ್ಲಿ ಹೀಗೆ ಬದುಕಬೇಕು ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ಕಲಿಸುವುದರೊಂದಿಗೆ ಸಮಾಜದ ಸಮಸ್ಯೆಗಳ ಬಗ್ಗೆ ಗಮನಹರಿಸಿ ಅವುಗಳನ್ನು ಹೇಗೆ ಬಗೆಹರಿಸಬೇಕೆಂದು ಕಲಿಸುವ ಬಹುದೊಡ್ಡ ವೇದಿಕೆ. ಇದು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವುದರೊಂದಿಗೆ ಸಹಜೀವನ, ಸಹ ಭೋಜನ, ಶಿಸ್ತು, ಸಹಕಾರ, ದೇಶಭಕ್ತಿಯನ್ನು ಬೆಳೆಸುತ್ತದೆ ಎಂದರು.

ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರಿಯಾ ಮುದ್ದಪ್ಪ, ಎನ್‌ಎಸ್‌ಎಸ್ ಯೋಜನಾಧಿಕಾರಿ ಸುನಿಲ್ ಕುಮಾರ್, ಉಪನ್ಯಾಸಕರಾದ ಡಾ.ವೀಣಾ, ರಾಘವೇಂದ್ರ, ಅಂಬಿಕಾ, ಸೋಮಣ್ಣ, ನಿರ್ಮಿತಾ, ಅಕ್ಷಿತಾ, ಮಾಣಿಕ್ಯ, ವನಿತಾ, ಬೋಜಮ್ಮ, ಕಾವೇರಮ್ಮ, ಗುಲ್ನಾರ್ ಬಾನು, ಆಡಳಿತಾತ್ಮಕ ಸಿಬ್ಬಂದಿ, ಸ್ವಯಂ ಸೇವಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net