ನೆಮ್ಮದಿ ಬದುಕಿಗೆ ಮುಳುವಾದ ವೃಷಭಾವತಿ!

29-bidadi-1 (1)
Published on

* ಕೊಳಚೆ ನೀರಿನಿಂದ ಸಮಸ್ಯೆ ಉಲ್ಬಣ

* ನರಕಯಾತನೆ ಅನುಭವಿಸುತ್ತಿರುವ ಬೈರಮಂಗಲ ಕೆರೆಯ ಸುತ್ತಮುತ್ತಲಿನ ನಿವಾಸಿಗಳು

ಚೇತನ್ ಚಕ್ಕೆರೆ ಬಿಡದಿ

ಬೆಂಗಳೂರಿನ ಕೊಳಚೆ ನೀರನ್ನು ಪ್ರತಿದಿನ ಹೊತ್ತು ತರುವ ವೃಷ‘ಾವತಿ ನದಿಯಿಂದಾಗಿ ಬೈರಮಂಗಲ ಕೆರೆಯ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಾನಾ ಅವಾಂತರ ಸೃಷ್ಟಿಯಾಗಿವೆ. ಇದಕ್ಕೆಲ್ಲ ಕಡಿವಾಣ ಯಾವಾಗ ಎಂಬುದೆ ಆ ಭಾಗದ ಜನರ ಯಕ್ಷ ಪ್ರಶ್ನೆಯಾಗಿದೆ.

ಹೌದು... ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಬಿಡದಿ ಹೋಬಳಿ ವ್ಯಾಪ್ತಿಯ ಬೈರಮಂಗಲ, ವೃಷಭಾವತಿಪುರ, ಚಿಕ್ಕಬೈರಮಂಗಲ, ಇಟ್ಟಮಡು, ತೊರೆದೊಡ್ಡಿ, ರಾಮನಹಳ್ಳಿ, ಚೌಕಹಳ್ಳಿ, ಕೆ.ಗೋಪಹಳ್ಳಿ, ಬಾನಂದೂರು, ಶ್ಯಾನುಮಂಗಲ, ಅಂಚಿಪುರ ಸೇರಿ ಹಲವು ಹಳ್ಳಿಗಳಲ್ಲಿ ಕಲುಷಿತ ನೀರಿನಿಂದ ನಾನಾ ರೀತಿಯ ಅನಾರೋಗ್ಯ ಸಮಸ್ಯೆ ಬಿಟ್ಟು ಬಿಡದಂತೆ ಕಾಡುತ್ತಿವೆ. ಅಲ್ಲದೇ, ಅಲ್ಲಿನ ರೈತರು ಅನಿವಾರ್ಯವಾಗಿ ಈ ನೀರಿನಿಂದಲೇ ಬೆಳೆ ಬೆಳೆಯುತ್ತಿದ್ದಾರೆ. ಇನ್ನಾದರೂ ಈ ನದಿಯ ಸ್ವಚ್ಛತೆ ಬಗ್ಗೆ ಸಂಬಂ‘ಪಟ್ಟವರು ಕ್ರಮ ಕೈಗೊಳ್ಳಬೇಕೆಂದು ನದಿ ಪಾತ್ರದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೊಳಚೆಯಿಂದ ಹೆಚ್ಚಿದ ಸಮಸ್ಯೆ

ವೃಷಭಾವತಿ ನದಿ ಬೆಂಗಳೂರಿನಿಂದ ಹರಿದುಬಂದು, ಬೈರಮಂಗಲ ಕೆರೆಯಲ್ಲಿ ಸಂಗ್ರಹವಾಗಿ ನಂತರ ಚಾನಲ್ ಗಳಲ್ಲಿ ತುಂಬಿ ಹರಿಯುವ ನೀರಿನಲ್ಲಿ ಸೂಕ್ಷ್ಮಾಣುಗಳ ಜತೆಗೆ ಕಾರ್ಖಾನೆಗಳಿಂದ ಹೊರಬರುವ ಅಸಂಸ್ಕರಿತ ಹಾಗೂ ಆಸಿಡ್ ಮಿಶ್ರಿತ ನೀರು ಯಥೇಚ್ಚವಾಗಿದೆ. ಇದೇ ನೀರಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ರೈತಾಪಿ, ಕೂಲಿ ಕಾರ್ಮಿಕರಿಗೆ ವಿವಿ‘ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎನ್ನಲಾಗಿದೆ.

ಹೆಚ್ಚಾದ ಸೊಳ್ಳೆ ಕಾಟ

ವೃಷಭಾವತಿ ನದಿ ಪಾತ್ರದ ಹಳ್ಳಿಗಳಲ್ಲಿ ಹಾಗೂ ಬೈರಮಂಗಲ ಕೆರೆ ಸುತ್ತಮುತ್ತಲ ಗ್ರಾಮಗಳಲ್ಲಿ ಸೊಳ್ಳೆಗಳ ಹಾವಳಿ ವಿಪರೀತವಾಗಿದೆ. ಅದರಲ್ಲೂ ಈ ಕೆರೆಗೆ ಹೊಂದಿಕೊಂಡಂತಿರುವ ವೃಷಭಾವತಿಪುರ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರ ತೆಗೆ ದುರ್ವಾಸನೆ ಹೆಚ್ಚಾಗಿದ್ದು, ಮನೆಗಳಲ್ಲಿ ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಮನೆಗಳಲ್ಲಿದ್ದವರು ಮಾಸ್ಕ್ ಹಾಕಿಕೊಂಡು ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಸಾಂಕ್ರಾಮಿಕ ರೋಗ ಗ್ರಾಮದ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ.ಇದಕ್ಕೆ ವೃಷ‘ಾವತಿ ನದಿ ಮತ್ತು ಬೈರಮಂಗಲ ಕೆರೆಯ ಕಲ್ಮಶ ನೀರಿನಲ್ಲಿ ಮನೆ ಮಾಡಿರುವ ಸೊಳ್ಳೆಗಳೇ ಕಾರಣ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಶುದ್ಧೀಕರಣ ಕಾಣದ ಕೆರೆ

ಬೈರಮಂಗಲ ಕೆರೆ ಶುದ್ಧೀಕರಣ ಮಾಡುವುದಾಗಿ ರಾಜ್ಯ ಸರ್ಕಾರ ನೀಡಿದ್ದ ‘ರವಸೆ ಹುಸಿಯಾಗಿದೆ, 2015ರ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿಗಳು ಕೆರೆ ಶುದ್ಧೀಕರಣ ಮತ್ತು ಶುದ್ಧ ನೀರು ತುಂಬಿಸುವ ಯೋಜನೆ ಘೋಷಣೆ ಮಾಡಿದ್ದರು. ಆದರೆ ಈ ಯೋಜನೆ ಅನುಷ್ಠಾನಕ್ಕೆ ಬಂದು ಕೆಲಸ ಪ್ರಾರಂಭವಾಗಿ ನಂತರ ಕೆಲ ತಾಂತ್ರಿಕ ಕಾರಣಗಳಿಂದ ನನೆಗುದಿಗೆ ಬಿದ್ದಿದೆ.

ವೃಷಭಾವತಿ ನದಿ ಪಾತ್ರದ ಶುದ್ಧೀಕರಣದ ಸದುದ್ದೇಶದೊಂದಿಗೆ ಕಾವೇರಿ ನೀರಾವರಿ ನಿಗಮವು ಈ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿತ್ತು. ಬೆಂಗಳೂರು ‘ಭಾಗದಿಂದ ವೃಷಭಾವತಿ ಮೂಲಕ ಹರಿದು ಬರುವ ಕೊಳಚೆ ನೀರನ್ನು ಜಲಾಶಯದ ಹಿಂದೆಯೇ ತಡೆಗಟ್ಟಿ ತಿರುವು ನಾಲೆ ನಿರ್ಮಾಣದ ಮೂಲಕ ಅದನ್ನು ನೇರ ನದಿಗೆ ಹರಿದು ಬಿಡುವುದು. ಮಳೆ ನೀರು ಮಾತ್ರ ಜಲಾಶಯಕ್ಕೆ ಬರುವಂತೆ ನೋಡಿಕೊಳ್ಳುವುದು ಈ ಯೋಜನೆಯ ಉದ್ದೇಶವಾಗಿತ್ತು.

==

ಮೋಹನ್ ಗೌಡ, ಇಇ, ಕಾವೇರಿ ನೀರಾವರಿ ನಿಗಮ

ವೃಷಭಾವತಿ ನದಿ ಮೂಲಕ ಬೈರಮಂಗಲ ಕೆರೆಗೆ ಬರುವ ಬರುವ ಕಲುಷಿತ ನೀರನ್ನು ತಡೆದು ಶುದ್ಧೀಕರಣ ಮಾಡುವ ಯೋಜನೆಯ ಕೆಲಸ ಪ್ರಾರಂಭವಾಗಿ ಶೇ.50 ಕೆಲಸ ಮುಗಿದಿದೆ. 2020ರಲ್ಲಿ ಪರಿಸರವಾದಿಗಳು ಕೆರೆಯ ಮೂಲ ಸ್ವರೂಪವನ್ನು ತಿರುಚಲಾಗುತ್ತಿದೆ ಎಂದು ನ್ಯಾಯಾಲಯದಲ್ಲಿ ದಾವೆಯನ್ನು ಹಾಕಿದ್ದರು. ಇದಕ್ಕೆ ಸಂಬಂಧಿಸಿದಂತೆ ಮುಂದಿನ ತಿಂಗಳು ಆದೇಶ ಬರಲಿದೆ. ನ್ಯಾಯಾಲಯದಿಂದ ಏನು ಆದೇಶ ಬರುತ್ತದೆ ಎಂಬುದನ್ನು ನೋಡಿಕೊಂಡು ಮುಂದುವರಿಯುತ್ತೇವೆ.

-

ಪವನ್ ಕುಮಾರ್, ವೃಷಭಾವತಿಪುರದ ಯುವಕ

ಬೆಂಗಳೂರಿನ ಕೊಳಚೆ ನೀರು ವೃಷಭಾವತಿ ನದಿ ಮೂಲಕ ಬೈರಮಂಗಲ ಕೆರೆಗೆ ಹರಿದು ಬರುತ್ತಿದೆ. ಸೊಳ್ಳೆಗಳ ಕಾಟದ ಜತೆಗೆ ದುರ್ವಾಸನೆ ಹೆಚ್ಚಾಗಿದೆ. ಕುಡಿಯುವ ನೀರು ಕೂಡ ಕಲುಷಿತವಾಗುತ್ತಿದೆ. ಕೆರೆ ನೀರನ್ನು ಶುದ್ಧೀಕರಣ ಮಾಡಲಾಗುತ್ತದೆ ಎಂದು ಪ್ರಾರಂಭ ಮಾಡಿ ನಂತರದ ದಿನಗಳಲ್ಲಿ ಹಾಗೆ ಬಿಟ್ಟಿದ್ದಾರೆ. ಈ ಯೋಜನೆ ಮುಂದುವರಿಸಿ ಶುದ್ಧೀಕರಣ ಮಾಡಿ ನಾವು ನೆಮ್ಮದಿಯಿಂದ ಬದುಕಲು ಅಧಿಕಾರಿಗಳು ನೆರವಾಗಬೇಕು.

=

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net