ನೆಟ್​ವರ್ಕ್​ಗಾಗಿ ಮರ ಏರಿದ ಯುವಕ

10bkl1 (2)
Published on

ಭಟ್ಕಳ: ತಾಲೂಕಿನ ಕೋಣಾರದಲ್ಲಿ ಯುವಕನೊಬ್ಬ ದೂರವಾಣಿ ನೆಟ್​ವರ್ಕ್​ಗಾಗಿ ಮರವನ್ನೇರಿ ಸಂಪರ್ಕ ಸಾಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗರದಿಂದ 8-10 ಕಿ.ಮೀ. ವ್ಯಾಪ್ತಿಯಲ್ಲಿರುವ ಕೋಣಾರದಲ್ಲಿ ಕೃಷಿ, ಜಮೀನು ಸಹಿತ ಕೂಲಿ ಕೆಲಸ ಮಾಡಿಕೊಂಡಿರುವ ಜನ ಹೆಚ್ಚು. ಸುಮಾರು 300 ರಿಂದ 400 ಮನೆಗಳಿರುವ ಈ ಪ್ರದೇಶದಲ್ಲಿ ಈವರೆಗೂ ನೆಟ್​ವರ್ಕ್ ತಲುಪಿಲ್ಲ. ಡಿಜಿಟಲ್ ಇಂಡಿಯಾ ಪರಿಕಲ್ಪನೆ ಇಲ್ಲಿ ಬರಿ ಬಾಯಿ ಮಾತಿನಲ್ಲಿದೆ. ಸಂಸದ ಅನಂತಕುಮಾರ ಹೆಗಡೆ ಅವರಿಗೆ ಮನವಿ ನೀಡಿ ಬೇಸತ್ತ ಜನರು ಕೊನೆಗೆ ಶಾಸಕ ಸುನೀಲ ನಾಯ್ಕ ಅವರಿಗೆ ಮನವಿ ನೀಡಿದ್ದಾರೆ. ಟವರ್ ಸ್ಥಾಪಿಸಿ ಕೊಡುತ್ತೇನೆ ಎಂದು ಹೇಳಿ 8 ತಿಂಗಳಾದರೂ ಟವರ್ ಸ್ಥಾಪನೆ ಆಗಿಲ್ಲ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು, ತೀರಾ ಅವಶ್ಯಕತೆ ಇದ್ದವರು ಸಂಕಷ್ಟದಲ್ಲಿದ್ದಾರೆ.
ಪ್ರಸ್ತುತ ಲಾಕ್​ಡೌನ್ ಕಾರಣ ವಿದ್ಯಾರ್ಥಿಗಳಿಗೆ ಆನ್​ಲೈನ್ ತರಗತಿಗಳು ಪ್ರಾರಂಭವಾಗಿದೆ. ಇನ್ನು ಮಹಾನಗರಗಳಲ್ಲಿ ಉದ್ಯೋಗಕ್ಕಿದ್ದವರು ಹಳ್ಳಿಗಳಿಗೆ ಬಂದು ವರ್ಕ್​ಫ್ರಮ್ ಹೋಂ ಮೂಲಕ ಕೆಲಸ ಮಾಡುತ್ತಿದ್ದಾರೆ. ಆದರೆ ಊರಲ್ಲಿ ದೂರವಾಣಿ ಕರೆ ಮಾಡಲು ಕೂಡ ಸಿಗ್ನಲ್ ಸಿಗುತ್ತಿಲ್ಲ.
ತುರ್ತು ಪರಿಸ್ಥಿತಿ, ಅನಾರೋಗ್ಯದಂಥ ಸಂದರ್ಭದಲ್ಲಿ ಯಾರಿಗಾದರೂ ಕರೆ ಮಾಡಬೇಕು ಎಂದರೆ 4 ಕಿ.ಮೀ. ದೂರ ಬರಬೇಕು. ಇತ್ತೀಚೆಗೆ ಯುವಕನೊಬ್ಬ ನೆಟ್​ವರ್ಕ್​ಗಾಗಿ ಆಳೆತ್ತರದ ಮರವನ್ನೇರಿ ನೆಟ್​ವರ್ಕ್ ಅಂಟೆನಾ ಸಿಗ್ನಲ್ ಹಿಡಿದು ಹುಡುಕಾಟ ನಡೆಸಿ, ಲ್ಯಾಂಡ್​ಲೈನ್ ಫೋನ್​ಗೆ ಸಿಗ್ನಲ್ ಸಿಗುವಂತೆ ಮಾಡಿರುವ ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net