

ಬೆಳಗಾವಿ: ಬಸವಣ್ಣವರ ವಿಚಾರಗಳಿಗೆ ಮನಸೋತ ನೂಲಿಯ ಚಂದಯ್ಯ ರಾಜನಾಗಿದ್ದರೂ ಕಾಯಕದಲ್ಲಿ ತೊಡಗಿ ಯಾವುದೇ ಜಾತಿ, ಧರ್ಮ, ಲಿಂಗ, ಬಡವ, ಶ್ರೀಮಂತ ಎಂಬ ಭೇದ-ಭಾವವಿಲ್ಲದೆ ಎಲ್ಲರ ಏಳಿಗೆಗಾಗಿ ಶ್ರಮಿಸಿದವರು ಎಂದು ಸಾಹಿತಿ ರಂಜಾನ ದರ್ಗಾ ಹೇಳಿದರು.
ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ನೂಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಾಸೋಹ, ಕಾಯಕ, ಅಂತಃಕರಣ ಅನುಸರಿಸಿದ ಚಂದಯ್ಯ ಸುತ್ತಲಿನ ಪರಿಸರ, ಪ್ರಾಣಿ ರಕ್ಷಣೆ ಸೇರಿ ಸಕಲ ಜೀವಿಗಳಿಗಾಗಿ ಶ್ರಮಿಸುವುದೇ ಕಾಯಕ ಎಂದು ಸಮಾಜಕ್ಕೆ ಅರ್ಥೈಸಿದವರು ಎಂದರು.
ಹಡಗಿನಾಳ ಮಠದ ಮುತ್ತೇಶ್ವರ ಸ್ವಾಮೀಜಿ ಮಾತನಾಡಿ, ಕಾಯಕ ಯೋಗಿ ನೂಲಿಯ ಚಂದಯ್ಯ ಯಾವುದೇ ಭೇದ ಮಾಡದೆ ಸಮಾನತೆಯಿಂದ ಕಂಡವರು. ಅವರ ವಿಚಾರ, ಚಿಂತನೆ, ತತ್ತ್ವಸಿದ್ಧಾಂತ ಮೈಗೂಡಿಸಿಕೊಳ್ಳೋಣ ಎಂದರು.
ಅರಳಿಕಟ್ಟಿ ವೀರಪ್ಪ ಮಠದ ಶಿವಮೂರ್ತಿ ಸ್ವಾಮೀಜಿ ಮತನಾಡಿ, ಸಮಾಜಕ್ಕೆ ನೂಲಿಯ ಚಂದಯ್ಯ ಕೊಡುಗೆ ಅಪಾರ. ಸಮಾಜದ ಜನರು ಉತ್ತಮ ಶಿಕ್ಷಣ ಪಡೆದು ಆರ್ಥಿಕ, ಸಾಮಾಜಿಕವಾಗಿ ಅಭಿವದ್ಧಿಯಾಗಬೇಕು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಶಿಶು ಅಭಿವದ್ಧಿ ಯೋಜನಾಧಿಕಾರಿ ಮಹಾಂತೇಶ ಭಜಂತ್ರಿ, ರಾಷ್ಟ್ರೀಯ ಸಂಘಟನೆ, ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ರಾಮಜಿ ಭಜಂತ್ರಿ, ಶಹನಾಯಿ ವಾದಕ ಪಂಡಿತ ಬಾಲೇಶ ಇತರರಿದ್ದರು.
ಮೆರವಣಿಗೆ ಚಾಲನೆ: ನಗರದ ಅಶೋಕ ವೃತ್ತದಲ್ಲಿ ಗುರುವಾರ ಶ್ರೀ ನೂಲಿಯ ಚಂದಯ್ಯ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಭಾವಚಿತ್ರದ ಭವ್ಯ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ವಿಜಕುಮಾರ ಎಂ. ಹೊನಕೇರಿ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಚಾಲನೆ ನೀಡಿದರು. ಮೆರವಣಿಗೆ ಆರ್‌ಟಿಒ ವತ್ತದ ಮಾರ್ಗವಾಗಿ ಕುಮಾರ ಗಂಧರ್ವ ಕಲಾ ಮಂದಿರವನ್ನು ತಲುಪಿತು.