

ಹಾವೇರಿ: ದೇಶದಲ್ಲಿ ಜಾರಿಯಾಗಲಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಸಾಧಕ-ಬಾಧಕಗಳ ಬಗ್ಗೆ ಹೆಚ್ಚಿನ ಅಧ್ಯಯನ, ಚರ್ಚೆ ನಡೆಯಬೇಕಾಗಿದೆ ಎಂದು ಪಿಡಿಒ ಡಾ. ಪರಶುರಾಮ ರೋಗಣ್ಣನವರ ಹೇಳಿದರು.
ತಾಲೂಕಿನ ಅಗಡಿ ಗ್ರಾಮದ ಶೇಷಾಚಲ ಸದ್ಗುರು ಪ್ರೌಢಶಾಲೆಯಲ್ಲಿ ಗ್ರಾಪಂ, ಸ್ಪೂರ್ತಿ ವಿದ್ಯಾಕುಟೀರ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ-ಚರ್ಚೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶಾಲ ಮನೋಭಾವದೊಂದಿಗೆ ಈ ಶಿಕ್ಷಣ ನೀತಿಯನ್ನು ಸ್ವೀಕರಿಸಿ, ಧನಾತ್ಮಕವಾಗಿ ಕಾರ್ಯಗತಗೊಳಿಸುವುದು ಅಗತ್ಯವಾಗಿದೆ ಎಂದರು.
ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಮಾತನಾಡಿ, ಕೃಷಿ ಸಂಬಂಧಿತ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದಲೇ ನೀಡುವ ಅಗತ್ಯವಿದೆ. ಇದಕ್ಕೆ ಪೂರಕವಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಳವಡಿಸಲಾಗಿದೆ. ಇದರಿಂದ ಗ್ರಾಮ ಭಾರತ ಸಬಲೀಕರಣ ಸಾಧ್ಯವಾಗುತ್ತದೆ. ಕೃಷಿ ತಂತ್ರಜ್ಞಾನ, ಮಾರುಕಟ್ಟೆ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳಿವಳಿಕೆ ಮೂಡುತ್ತದೆ. ದೇಶದಲ್ಲಿ ಕೃಷಿ ಉದ್ಯಮಶೀಲತೆ ಅಭಿವೃದ್ಧಿ ಹೊಂದುತ್ತದೆ ಎಂದರು.
ನಿವೃತ್ತ ಶಿಕ್ಷಕ ಹನುಮಂತಗೌಡ ಗೊಲ್ಲರ ಮಾತನಾಡಿ, 15 ಲಕ್ಷ ಶಿಕ್ಷಕರ, 2,70,000 ಜನರ ಅಭಿಪ್ರಾಯ, ಶಿಕ್ಷಣ ತಜ್ಞರ ಸಲಹೆಗಳನ್ನು ಪಡೆದು 5 ವರ್ಷಗಳ ಸುದೀರ್ಘ ಚರ್ಚೆ ನಂತರ ಇದನ್ನು ಜಾರಿಗೆ ತರಲಾಗುತ್ತಿದೆ. ಇದು ಅಂಕಗಳ ಆಧಾರಿತವಾದುದಲ್ಲ. ಕಲಿಕೆ ಹಂತದಲ್ಲಿಯೇ ವಿದ್ಯಾರ್ಥಿಗಳನ್ನು ಸ್ವಾವಲಂಬಿಯಾಗಿಸುವ ಜ್ಞಾನಾಧಾರಿತವಾಗಿದೆ. ಜೀವನ ಮೌಲ್ಯ, ಕೌಶಲ, ಜ್ಞಾನದ ಶಕ್ತಿ, ತತ್ತ್ವ್ವಳನ್ನು ಒಳಗೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆ ಮುಖ್ಯಾಧ್ಯಾಪಕ ರಾಘವೇಂದ್ರ ನಾಡಿಗೇರ ಮಾತನಾಡಿ, ನಮ್ಮೆಲ್ಲರ ಪರಿವರ್ತನೆಗಾಗಿ ನೂತನ ಶಿಕ್ಷಣ ನೀತಿ ಬಂದಿದೆ. ಶಿಕ್ಷಕರು ಬದಲಾವಣೆಯ ಹರಿಕಾರರಾಗಬೇಕು ಎಂದರು. ಎಚ್.ಎಂ. ಪಾಟೀಲ, ಮಂಜುನಾಥ ಕಮ್ಮಾರ, ಎಸ್.ಪಿ. ಗೋಣಿ, ಅಕ್ಕಮ್ಮ ಮುದ್ದಿ ಅವರು ಅನಿಸಿಕೆಗಳನ್ನು ಹಂಚಿಕೊಂಡರು. ಗ್ರಾಮದ ಸರ್ಕಾರಿ, ಖಾಸಗಿ ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳ 50 ಶಿಕ್ಷಕ, ಶಿಕ್ಷಕಿಯರು ಪಾಲ್ಗೊಂಡಿದ್ದರು. ಫರೀದಾಬಾನು ರಿತ್ತಿ ಪ್ರಾರ್ಥಿಸಿದರು. ರೇಣುಕಾ ಹಲಕಣ್ಣನವರ ಸ್ವಾಗತಿಸಿದರು. ಸೌಮ್ಯಾ ಬಸೇಗಣ್ಣಿ ನಿರೂಪಿಸಿದರು. ಎಂ.ಜೆ. ತಾಸ್ಕನವರ ವಂದಿಸಿದರು.