

ಅಥಣಿ: ಅಥಣಿ-ಕಾಗವಾಡ ತಾಲೂಕುಗಳ ನೀರಾವರಿ ಯೋಜನೆ ಪೂರ್ಣಗೊಳಿಸಲು 3 ಸಾವಿರ ಕೋಟಿ ರೂ.ಅನುದಾನ ತಂದು ಶ್ರಮಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಪಟ್ಟಣದಲ್ಲಿ ಗಚ್ಚಿನಮಠದಿಂದ ಮುರುಘೇಂದ್ರ ಶಿವಯೋಗಿಗಳ 188ನೇ ಜಯಂತ್ಯುತ್ಸವ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಅಥಣಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ.
ನನಗೆ ಜನರು ಸಾಕಷ್ಟು ಪ್ರೀತಿ, ವಿಶ್ವಾಸ ಮತ್ತು ಸಹಕಾರ ನೀಡಿದ್ದಾರೆ. ರಾಜ್ಯದಲ್ಲಿ ಅಥಣಿಯನ್ನು ಮಾದರಿ ಮತಕ್ಷೇತ್ರವನ್ನಾಗಿಸುವೆ. ಪಟ್ಟಣದ ಕುಡಿಯುವ ನೀರಿನ 24/7 ಯೋಜನೆಗಾಗಿ 116 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ನನೆಗುದಿಗೆ ಬಿದ್ದಿರುವ ಗ್ರಾಮೀಣ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ. ಆರಾಧ್ಯ ದೈವ ಮುರುಘೇಂದ್ರ ಶಿವಯೋಗಿಗಳ ಕೃಪಾಶೀರ್ವಾದವಿದೆ ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನುಡಿದಂತೆ ನಡೆದ ಸವದಿ ಅವರ ಸಾಧನೆಗಳಿಂದು ಮಾತನಾಡುತ್ತಿವೆ. ಹೀಗಾಗಿ ಜನತೆ ಅಭೂತಪೂರ್ವ ಗೆಲುವು ನೀಡಿದ್ದಾರೆ. ಇದಕ್ಕೆ ಮುರುಘೇಂದ್ರ ಶಿವಯೋಗಿಗಳ ದಿವ್ಯಶಕ್ತಿ ಪ್ರೇರಣೆ ನೀಡಿದೆ ಎಂದರು. ಸಮಾಜ ಸೇವಕ ಡಾ.ಎಂ.ಜಿ.ಹಂಜಿ ಮಾತನಾಡಿದರು. ಗಚ್ಚಿನಮಠದಿಂದ ಶಿವಬಸವ ಸ್ವಾಮೀಜಿ ಅವರು ಶಾಸಕ ಲಕ್ಷ್ಮಣ ಸವದಿ ಅವರನ್ನು ಸತ್ಕರಿಸಿದರು.
ಬಸವಕಿರಣ ಸ್ವಾಮೀಜಿ, ಹಿರಿಯರಾದ ಡಾ.ಬಸವರಾಜ ಜಗಜಂಪಿ, ಪ್ರಕಾಶ ಮಹಾಜನ, ಶಿವಾನಂದ ದಿವಾನಮಳ, ಶ್ಯಾಮರಾವ ಪೂಜಾರಿ, ಶೇಖರ ಮಗದುಮ್ಮ, ಶಿವಪುತ್ರ ಯಾದವಾಡ, ಶಂಭುಲಿಂಗ ಮಮದಾಪೂರ, ಮಲ್ಲಿಕಾರ್ಜುನ ಗೊಟಖಿಂಡಿ, ಹಣಮಂತ ಕಾಲುವೆ, ಮಹಾದೇವ ಹೊನ್ನಳಿ, ರಾಜು ಬಿಳ್ಳೂರ, ಕಲ್ಲಪ ವನಜೋಳ ಇತರರಿದ್ದರು.